ಬೆಂಗಳೂರು: ಕಾಂತ್ರಿವೀರ ಸಂಗೊಳ್ಳಿ ರಾಯಣ್ಣನ ಬದುಕು ಮತ್ತು ಹೋರಾಟವನ್ನು ವಿಷಯವನ್ನಾಗಿಕೊಟ್ಟುಕೊಂಡು ಸಂಶೋಧನೆ ನಡೆಸುವ ಅಭ್ಯರ್ಥಿಗಳಿಗೆ ಸಹಾಯಧನ ನೀಡಲು ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಅದರಂತೆ ಸಂಗೊಳ್ಳಿ ರಾಯಣ್ಣನ ಬಾಲ್ಯ, ಬದುಕು, ಹೋರಾಟ ಮತ್ತು ಜೀವನ ಹಂತಗಳನ್ನು ಕೇಂದ್ರವಾಗಿಟ್ಟುಕೊಂಡು ಸಂಶೋಧನೆ ನಡೆಸುವ ಸಂಶೋಧನಾರ್ಥಿಗಳಿಗೆ ಸಹಾಯಧನ ನೀಡಲು ತೀರ್ಮಾನಿಸಲಾಗಿದೆ. ವಿಶ್ವವಿದ್ಯಾಲಯಗಳು ನಿಗದಿಪಡಿಸುವ ವೆಚ್ಚವನ್ನು ಪೂರ್ಣ ಪ್ರಮಾಣದಲ್ಲಿ ಭರಿಸಲು ತೀರ್ಮಾನಿಸಲಾಗಿದೆ.
ಸಂಗೋಳ್ಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸೈನಿಕ ಶಾಲೆ, ವಾಸ್ತು ಶಿಲ್ಪಗಳ ಉದ್ಯಾನವನ, ಕಲ್ಯಾಣ ಮಂಟಪ ನವೀಕರಣ, ಭೋಜನಾಲಯ, ನಂದಗಡದಲ್ಲಿ ಸ್ಥಾಪನೆಯಾಗಲಿರುವ ವಸ್ತುಸಂಗ್ರಹಾಲಯ, ವೀರಭೂಮಿ, ಯಾತ್ರಿ ನಿವಾಸ, ರಾಯಣ್ಣನ ಕೆರೆ ಅಭಿವೃದ್ಧಿ ಮತ್ತಿತರ ಕಾಮಗಾರಿಗಳ ಕುರಿತು ಮುಖ್ಯಮಂತ್ರಿಯವರು ಸಭೆಯಲ್ಲಿ ಮಾಹಿತಿ ಪಡೆದರು.
ಪ್ರಾಧಿಕಾರಕ್ಕೆ ಮನೆ ದಾನ: ಇದೇ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್, ನಂದಗಡದಲ್ಲಿ ರಾಯಣ್ಣನ ಸಮಾಧಿ ಸ್ಥಳಕ್ಕೆ ಹೊಂದಿಕೊಂಡಂತೆ ಇರುವ ತಮ್ಮ ಮನೆಯನ್ನು ಪ್ರಾಧಿಕಾರಕ್ಕೆ ದಾನವಾಗಿ ನೀಡುವುದಾಗಿ ಘೋಷಿಸಿದರು. ಇದಕ್ಕೆ ಮುಖ್ಯಮಂತ್ರಿಯವರು ಸರ್ಕಾರ ಮತ್ತು ಪ್ರಾಧಿಕಾರದ ಪರವಾಗಿ ಅಪ್ಪುಗೋಳ ಅವರಿಗೆ ಧನ್ಯವಾದ ಹೇಳಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ವಿಧಾನ ಪರಿಷತ ಸದಸ್ಯರಾದ ಎಚ್.ಎಂ. ರೇವಣ್ಣ, ವಿವೇಕರಾವ್ ಪಾಟೀಲ, ಬೆಳಗಾವಿ ಜಿಲ್ಲಾಧಿಕಾರಿ ಜಯರಾಂ ಮತ್ತಿತರರು ಇದ್ದರು.