Advertisement

ಅಶ್ಲೀಲತೆ ಬಿಂಬಿಸುವ ಚಿತ್ರಕ್ಕೂ ಸಬ್ಸಿಡಿ: ಆಕ್ಷೇಪ

10:10 AM Feb 09, 2020 | mahesh |

ಶ್ರೀವಿಜಯ ಪ್ರಧಾನವೇದಿಕೆ: ಸಿನಿಮಾಗೆ ನೀಡುವ ಸಬ್ಸಿಡಿ ದುರ್ಬಳಕೆ ಆಗುತ್ತಿದೆ. 2 ಲಕ್ಷ ರೂ. ಖರ್ಚು ಮಾಡಿ, ಮೊಬೈಲ್‌ನಲ್ಲಿ ಚಿತ್ರೀಕರಿಸಿ ತೆಗೆದ ಸಿನಿಮಾಕ್ಕೂ 9 ಲಕ್ಷ ರೂ. ಸಬ್ಸಿಡಿ ತೆಗೆದುಕೊಂಡ ಉದಾಹರಣೆಗಳಿವೆ. ಇದನ್ನು ತಪ್ಪಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಕನಿಷ್ಠ 5 ಸಿನಿಮಾ ಮಾಡಿದ್ದರಷ್ಟೇ ಸಬ್ಸಿಡಿ ಎಂಬ ನಿಯಮ ರೂಪಿಸಬೇಕು ಎಂದು ಹಿರಿಯ ನಿರ್ದೇಶಕ, ನಿರ್ಮಾಪಕ
ರಾಜೇಂದ್ರ ಸಿಂಗ್‌ ಬಾಬು ಸಲಹೆ ನೀಡಿದರು.

Advertisement

“ಚಲನಚಿತ್ರ: ಕನ್ನಡ ಸಾಹಿತ್ಯ’ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಅವರು, ಸ್ಥಳೀಯ ಸದಭಿರುಚಿಯ ಕಥೆಗಳ
ಸಿನಿಮಾ ಮಾಡಿ, 50 ಲಕ್ಷ ತೆಗೆದುಕೊಂಡರೂ ಬೇಸರವಿಲ್ಲ. ಆದರೆ, ಕಥೆ ಇಲ್ಲದೆ, ಅಶ್ಲೀಲತೆ ಬಿಂಬಿಸುವ ಚಿತ್ರಕ್ಕೆ ಸಬ್ಸಿಡಿ ಹಣ ಹೋಗುತ್ತಿದೆ ಎಂದು ವಿಷಾದಿಸಿದರು.

ಚಿತ್ರನಗರಿ ಪ್ರಸ್ತಾಪ: ಚಿತ್ರನಗರಿಗಾಗಿ ಹಲವು ದಶಕಗಳಿಂದ ಹೋರಾಟ ನಡೆದರೂ, ಸರ್ಕಾರ ಒಮ್ಮೆ ಬೆಂಗಳೂರು, ಮೈಸೂರು, ಹೆಸರಘಟ್ಟ, ಬಿಡದಿ ಅಂತೆಳಿ ಕಾಲ ತಳ್ಳುತ್ತಿದೆ. ಚಿತ್ರನಗರಿಗೆ ಮೈಸೂರಿಗಿಂತ ಒಳ್ಳೆಯ ಸಾಂಸ್ಕೃತಿಕ ತಾಣ ಬೇಕೇ? ರಾಜಕಾರಣವನ್ನು ಮನೆಯಲ್ಲಿಟ್ಟು, ಈ ವಿಚಾರದ ಬಗ್ಗೆ ಯೋಚಿಸಬೇಕೆಂದು ಕಿವಿಮಾತು ಹೇಳಿದರು.

ಕನ್ನಡ ಚಿತ್ರಗಳಿಗೆ ಜಾಗವಿಲ್ಲ: 6 ಕೋಟಿ ಕನ್ನಡಿಗರಿಗೆ ಇರುವುದೇ 600 ಚಿತ್ರಮಂದಿರಗಳು. ಅದರಲ್ಲಿ
ಪರಭಾಷಾ ಚಿತ್ರಗಳು 400 ಚಿತ್ರಮಂದಿರಗಳನ್ನು ಆಕ್ರಮಿಸಿದರೆ, ಕನ್ನಡದ ಚಿತ್ರಗಳಿಗೆ ಜಾಗವೆಲ್ಲಿ? 300 ಜನ 200 ಟಾಕೀಸಿಗಾಗಿ ಹೊಡೆದಾಡುವ ಪರಿಸ್ಥಿತಿ ಇದೆ. ಮಹಾರಾಷ್ಟ್ರದ ಟಾಕೀಸುಗಳಲ್ಲಿ ಮರಾಠಿ ಸಿನಿಮಾ ಕಡ್ಡಾಯ ಎಂಬ ನೀತಿ ರೂಪಿಸಲಾಗಿದೆ. ಅಂಥ ನೀತಿ ಕನ್ನಡದಲ್ಲೂ
ಜಾರಿಯಾಗಲಿ ಎಂದು ಒತ್ತಾಯಿಸಿದರು. ಶೋಕಿಗಾಗಿ ಸಿನಿಮಾಕ್ಕೆ ಬರುವ ನಿರ್ಮಾಪಕರ ಸಂಖ್ಯೆ ಹೆಚ್ಚಾಗಿದೆ. ಶೋಕಿಯೇ ಮಾಡಬೇಕು ಅಂತಿದ್ದರೆ ಸಿಲೋನ್‌ಗೊ, ಬ್ಯಾಂಕಾಕ್‌ಗೊ ಹೋಗಿ, ಸಿನಿಮಾರಂಗಕ್ಕೆ ಬರಬೇಡಿ ಎಂದು ಹೊಸ ನಿರ್ಮಾಪಕರಿಗೆ ಕಿವಿಮಾತು ಹೇಳಿದರು.

ಬೀಸು ಮುಟ್ಟಿಸಿದ ಬಿಸಿ, ಬಳಿಗಾರ್‌ ಸ್ಪಷ್ಟನೆ
“ಕಿರುತೆರೆ- ಸಾಮಾಜಿ ಜವಾಬ್ದಾರಿಗಳು’ ಕುರಿತ ಗೋಷ್ಠಿಯಲ್ಲಿ ನಟ, ಕಿರುತೆರೆ ನಿರ್ದೇಶಕ ಬಿ. ಸುರೇಶ್‌ ತಮ್ಮ ವಿಷಯ ಮಂಡನೆಗೂ ಮುನ್ನ, ಶೃಂಗೇರಿಯ ವಿವಾದಿತ ಸಮ್ಮೇಳನ ಕುರಿತು ಪ್ರಸ್ತಾಪಿಸಿದ್ದು, ವೇದಿಕೆಯನ್ನು ಬಿಸಿ ಏರಿಸಿತ್ತು. ಸಮ್ಮೇಳನಕ್ಕೆ ಅನುದಾನವನ್ನು ತಡೆಹಿಡಿದಿದ್ದ ಬಗ್ಗೆ, ಪೆಟ್ರೋಲ್‌ ಬಾಂಬ್‌ ಬೆದರಿಕೆಯ ಬಗ್ಗೆ ತೀವ್ರ ಆಕ್ಷೇಪ ತೆಗೆದರು. ವೇದಿಕೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಕಸಾಪ ಅಧ್ಯಕ್ಷ ಮನು ಬಳಿಗಾರ್‌, “ಪ್ರಕ್ಷುಬ್ಧ ವಾತಾವರಣ ಇರುವ ಕಾರಣ ಶೃಂಗೇರಿ ಸಮ್ಮೇಳನವನ್ನು ತಾತ್ಕಾಲಿಕವಾಗಿ ಮುಂದೂಡಲು ಅಲ್ಲಿನ ಜಲ್ಲಾಧ್ಯಕ್ಷರಿಗೆ ತಿಳಿಸಿದ್ದೆ. ಅವರು ನನ್ನ ಮಾತನ್ನು ಮೀರಿ, ಸಮ್ಮೇಳನ ನಡೆಸಿದ್ದಾರೆ. ಕಸಾಪ ಸಾರ್ವಭೌಮತ್ವ ಸಂಸ್ಥೆ ಹೌದು, ಆದರೆ ಸಾರ್ವಜನಿಕ ಹಣವನ್ನು ಹಂಚಿಕೆ ಮಾಡುವ ಅಧಿಕಾರ ನಮಗಿಲ್ಲ. ಅದು ಸರ್ಕಾರಕ್ಕೆ ಬಿಟ್ಟ ವಿಚಾರ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next