ಅದ್ಯಾರೋ ತಾರಾ ತರಹ ಕಾಣುತ್ತಾರಲ್ಲ ಎಂದು ಎಲ್ಲರೂ ದೂರದಲ್ಲಿ ಬರುತ್ತಿದ್ದವರನ್ನೇ ನೋಡುತ್ತಿದ್ದರು. ಹತ್ತಿರ ಬರುತ್ತಿದ್ದಂತೆಯೇ, ಅವರು ತಾರಾ ತರಹ ಕಾಣೋದಷ್ಟೇ ಅಲ್ಲ, ಅದು ತಾರಾನೇ ಎಂದು ಎಲ್ಲರಿಗೂ ಸ್ಪಷ್ಟವಾಯಿತು. ಹಾಗೆ ಹತ್ತಿರ ಬಂದ ತಾರಾ, ವಿಶ್ ಮಾಡಿ, ಮೊದಲ ಶಾಟ್ ಮುಗಿಸಿ ಬರುತ್ತೀನಿ ಎಂದರು ಹೋದರು. ಮತ್ತೆ 10 ನಿಮಿಷ ಮೌನ. ಅಷ್ಟರಲ್ಲಿ ಶ್ರುತಿ ಬಂದರು. ಇನ್ನೊಂದು ಕಡೆಯಿಂದ ದೇವರಾಜ್ ಬಂದರು. 10 ನಿಮಿಷ ಅವರ ಜೊತೆಗೆ ಮಾತಾಗುತ್ತಿದ್ದಂತೆಯೇ, ತಾರಾ, ನಿರ್ದೇಶಕ ಸ್ಯಾಮ್ಯುಯಲ್ ಎಲ್ಲರೂ ಬಂದು ಸೇರಿಕೊಂಡರು.
“ನೀವು ಕರೆ ಮಾಡಿದ ಚಂದಾದಾರರು ಬ್ಯುಸಿಯಾಗಿದ್ದಾರೆ’ ಎಂಬ ಚಿತ್ರದ ಮುಹೂರ್ತ ಸಮಾರಂಭ ಅದು. ಕಂಠೀರವ ಸ್ಟುಡಿಯೋದಲ್ಲಿ ಸರಳವಾಗಿ ಚಿತ್ರ ಶುರುವಾಯಿತು. ಈ ಚಿತ್ರದಲ್ಲಿ ದೇವರಾಜ್, ತಾರಾ, ಶ್ರುತಿ, ಭವ್ಯ, “ತಿಥಿ’ ಪೂಜಾ, ನಿರಂಜನ್ ದೇಶಪಾಂಡೆ ಮುಂತಾದವರು ನಟಿಸುತ್ತಿದ್ದು, “ದೂಧ್ ಸಾಗರ್’ ನಿರ್ದೇಶಿಸಿದ್ದ ಸ್ಯಾಮ್ಯುಯಲ್ ಟೋನಿ ನಿರ್ದೇಶಿಸುತ್ತಿದ್ದಾರೆ. ಮಧುಸೂಧನ್ ಎನ್ನುವವರು ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ.
ಇದೊಂದು ಭಾವನಾತ್ಮಕ ಚಿತ್ರ ಎಂದೇ ತಮ್ಮ ಮಾತು ಶುರು ಮಾಡಿದರು ಸ್ಯಾಮ್ಯುಯಲ್. “ಸಾಮಾನ್ಯವಾಗಿ ಫೋನ್ ಮಾಡುವ ಸಂದರ್ಭದಲ್ಲಿ, “ನೀವು ಕರೆ ಮಾಡಿದ ಚಂದಾದಾರರು’ ಎಂಬ ಮಾತು ಕೇಳಿರುತ್ತೀರಿ. ಅದೇ ವಿಷಯವನ್ನಿಟ್ಟುಕೊಂಡು ಆಳವಾಗಿ ಹೋದಾಗ, ಒಂದೊಳ್ಳೆಯ ಕಥೆ ಸಿಕ್ಕಿತು. ಮನುಷ್ಯ ಬಿಝಿಯಾಗೋದು ತಪ್ಪಲ್ಲ. ಆದರೆ, ಏನಾಗುತ್ತಿದ್ದೀವಿ ಎಂದು ಹೇಳುವುದಕ್ಕೆ ಹೊರಟಿದ್ದೀವಿ. ಈ ಚಿತ್ರದಲ್ಲಿ ದೇವರಾಜ್, ತಾರಾ, ಶ್ರುತಿ ಮೂವರಿಗೂ ಬೇರೆ ತರಹದ ಗೆಟಪ್‌ಗ್ಳಿರುತ್ತವೆ. ದೇವರಾಜ್ ಅವರ ಹೇರ್‌ಸ್ಟೈಲ್ ಮತ್ತು ದಾಡಿಗೆಂದೇ ಮುಂಬೈನಿಂದ ಹೇರ್‌ಸ್ಟೈಲಿಸ್ಟ್‌ಗಳನ್ನು ಕರೆಸುತ್ತಿದ್ದೇವೆ. ಇನ್ನು ಶ್ರುತಿ ಅವರ ಚಿತ್ರಗಳನ್ನು ಸ್ಟಡಿ ಮಾಡಿ, ಒಂದೊಳ್ಳೆಯ ಪಾತ್ರ ಸೃಷ್ಟಿಸಿದ್ದೇವೆ. ಅವರ ಪಾತ್ರ ನೋಡುಗರೆಲ್ಲರನ್ನೂ ಕಾಡುತ್ತೆ’ ಎಂದರು ಸ್ಯಾಮ್ಯುಯಲ್.
ಈ ಚಿತ್ರಕ್ಕೆ ತಾವು ಹೀರೋ ಅಲ್ಲ, ಎಲ್ಲಾ ಪಾತ್ರಗಳು ಸಹ ಮುಖ್ಯ ಎಂದರು ದೇವರಾಜ್. “ಇಲ್ಲಿ ಹೊಸತನ ಇದೆ. ನಿರ್ದೇಶಕರು ನನ್ನ ಪಾತ್ರಕ್ಕೆ ಬೇರೆ ರೂಪ ಕೊಡುತ್ತಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದರೂ, ಡ್ಯುಯೆಟ್ ಇಲ್ಲ. ಅದರ ಬದಲು ಒಳ್ಳೆಯ ಸನ್ನಿವೇಶಗಳಿವೆ. ವಯಸ್ಸಿಗೆ ತಕ್ಕ ಪಾತ್ರ ಮಾಡುತ್ತಿದ್ದೇನೆ. ಈ ವಯಸ್ಸಿನಲ್ಲಿ ಒಂಟಿತನ ಕಾಡಿ, ಸ್ನೇಹವನ್ನು ಹುಡುಕಿ ಹೋದಾಗ ಏನೆಲ್ಲಾ ಆಗುತ್ತದೆ ಎನ್ನುವುದೇ ಚಿತ್ರದ ಕಥೆ. ಬಹಳ ಒಳ್ಳೆಯ ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ಒಳ್ಳೇ ತಂಡ ಸಹ ಇದೆ. ಒಟ್ಟಾರೆ. ಇದೊಂದು ಹೊಸ ಪೀಳಿಗೆಯ ಚಿತ್ರವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು ದೇವರಾಜ್.
ಶ್ರುತಿ ಅವರಿಗೆ ನಿರ್ದೇಶಕರು ಕಥೆ ಹೇಳಿದಾಗ, ಅದರಲ್ಲಿ ಒಂದು ಪಾತ್ರ ತಾನು ಮಾಡಿದರೆ ಚೆಂದ ಎಂದನಿಸಿತಂತೆ ಶ್ರುತಿ ಅವರಿಗೆ. ನಿರ್ದೇಶಕರು ಸಹ ಅದೇ ಪಾತ್ರ ಕೊಟ್ಟಾಗ ಇನ್ನಷ್ಟು ಖುಷಿಯಾಯಿತಂತೆ. “ಚಿಕ್ಕ ಪಾತ್ರವಾದರೂ, ಪ್ರಮುಖವಾದ ಪಾತ್ರ. ಇದೊಂದು ಪ್ರಯೋಗಾತ್ಮಕ ಚಿತ್ರವಾಗಲಿದೆ. ದೇವರಾಜ್ ಅವರ ಜೊತೆಗೆ ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲೂ ತುಂಬಾ ಕಲೀತೀನಿ ಎಂಬ ನಂಬಿಕೆ ಇದೆ’ ಎಂದರು ಶ್ರುತಿ. ತಾರಾ ಅವರಿಗೆ ಈ ಚಿತ್ರದ ಬಗ್ಗೆ ಗೊತ್ತಾಗಿದ್ದು, ದೇವರಾಜ್ ಜೊತೆಗೆ “ಹೆಬ್ಬೆಟ್ಟ್ ರಾಮಕ್ಕ’ ಎಂಬ ಚಿತ್ರದಲ್ಲಿ ನಟಿಸುವಾಗಲಂತೆ. ಆ ನಂತರ ತಾರಾ ಅವರಿಗೂ ನಿರ್ದೇಶಕರು ಒಂದು ಪಾತ್ರ ಕೊಟ್ಟಿದ್ದಾರೆ. ಇಂಥದ್ದೊಂದು ಚಿತ್ರವನ್ನು ಮಿಸ್ ಮಾಡಬಾರದು ಎಂಬ ಕಾರಣಕ್ಕೆ ತಾರಾ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರಂತೆ.
ನಂತರ ಪೂಜಾ, ನಿರಂಜನ್, ಸಂಗೀತ ನಿರ್ದೇಶಕ ಮನು ಜಾರ್ಜ್ ಮುಂತಾದವರು ಎರಡೆರೆಡು ಮಾತುಗಳನ್ನಾಡಿದರು.