Advertisement
ಹೌದು, ಸಬ್ ಅರ್ಬನ್ ರೈಲು ಸೇವೆ ವಿಸ್ತರಣೆಗೆ ಇದು ಸಕಾಲ. ರೈಲ್ವೆ ಅಧಿಕಾರಿಗಳು ಮನಸು ಮಾಡಿದರೆ, ತಕ್ಷಣದಿಂದಲೇ 8ರಿಂದ 10 ಉಪನಗರ ರೈಲುಗಳ ಸೇವೆ ಆರಂಭಿಸಬಹುದು. ಇದಕ್ಕೆ ಅಗತ್ಯ ಸೌಕರ್ಯಗಳೂ ಇವೆ. ವೈಟ್‌ಫೀಲ್ಡ್ ಸೇರಿ ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರದೇಶಗಳಿಗೆ ಇದು ಪರಿಹಾರವಾಗಬಲ್ಲದು ಎಂಬುದು ರೈಲ್ವೆ ಹೋರಾಟಗಾರರ ವೇದಿಕೆ ಅಭಿಪ್ರಾಯ.
Related Articles
Advertisement
ಸೇವೆ ವಿಸ್ತರಣೆಗೆ ಒತ್ತಾಯ: “ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪ್ಲಾಟ್‌ಫಾರಂನಲ್ಲಿ ನಿಲ್ಲುವ ಬೆಂಗಳೂರು-ಹಿಂದೂಪುರ ರೈಲಿನ ಬೋಗಿಗಳನ್ನು ಬೆಂಗಳೂರು-ರಾಮನಗರ-ಚನ್ನಪಟ್ಟಣಕ್ಕೆ ವಿಸ್ತರಿಸಬಹುದು. ಈ ಮಾರ್ಗದಲ್ಲೂ ಮೆಟ್ರೋ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಹೆಚ್ಚುವರಿ ರೈಲು ಸೇವೆಯಿಂದ ಟ್ರಾಫಿಕ್ ಕಿರಿಕಿರಿ ತಪ್ಪುತ್ತದೆ,’ ಎನ್ನುತ್ತಾರೆ ದ್ಯಾಮಣ್ಣವರ.
ಮೈಸೂರಿಗೆ ವಿಸ್ತರಣೆ?: “ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಪ್ಯಾಸೆಂಜರ್ ಮತ್ತು ಎಕ್ಸ್‌ಪ್ರೆಸ್ ರೈಲುಗಳನ್ನು ಎಲೆಕ್ಟ್ರಿಕ್ ರೈಲುಗಳಾಗಿ ಪರಿವರ್ತಿಸುವುದು ನಮ್ಮ ಮೊದಲ ಆದ್ಯತೆ. ಬೆಂಗಳೂರು-ರಾಮನಗರ ನಡುವೆ ಇರುವ ಉಪನಗರ ರೈಲು ಸೇವೆಯನ್ನು ಮೈಸೂರಿನವರೆಗೆ ವಿಸ್ತರಿಸುವ ಚಿಂತನೆ ಇದೆ. ಈಚೆಗೆ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವೆ ಈಚೆಗೆ ಒಂದು ರೈಲು ಸೇವೆ ಆರಂಭಿಸಿದ್ದು, ಇದರ ಪ್ರಗತಿ ಗಮನಿಸಿ ಹಂತ ಹಂತವಾಗಿ ಸೇವೆ ವಿಸ್ತರಿಸುವುದಾಗಿ ನೈರುತ್ಯ ರೈಲ್ವೆ ಉಪ ಪ್ರಧಾನ ವ್ಯವಸ್ಥಾಪಕಿ ಇ. ವಿಜಯಾ ಹೇಳುತ್ತಾರೆ.
ಪ್ರಸ್ತುತ ಸೇವೆಗಳು: ಪ್ರಸ್ತುತ ಬೆಂಗಳೂರಿನಿಂದ ತುಮಕೂರಿಗೆ 3, ಹೊಸೂರಿಗೆ 3, ವೈಟ್‌ಫೀಲ್ಡ್‌ಗೆ 8, ರಾಮನಗರಕ್ಕೆ 4 ರೈಲುಗಳ ಸೇವೆ ಲಭ್ಯವಿದೆ. ಬೆಳಗಿನಜಾವ ಬೆಂಗಳೂರಿನಿಂದ ಮತ್ತು ತಡರಾತ್ರಿ ರಾಮನಗರದಿಂದ ಕಾರ್ಯಾಚರಣೆ ಮಾಡುವ ರೈಲಿಗೆ ಅಷ್ಟೇನೂ ಬೇಡಿಕೆಯಿಲ್ಲ. ಹಾಗೇ ತುಮಕೂರು-ಬೆಂಗಳೂರು ನಡುವೆ ಸಂಜೆ 6ರ ನಂತರ ರೈಲು ಸೇವೆಯೇ ಇಲ್ಲ.
ಫಲನೀಡಿದ ಒಪ್ಪಂದ: ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ನಡುವೆ 2017ರ ಜನವರಿಯಲ್ಲಿ ಬೋಗಿಗಳ ಖರೀದಿ, ಸಿಗ್ನಲ್‌ಗಳನ್ನು ಮೇಲ್ದರ್ಜೆಗೇರಿಸುವುದೂ ಸೇರಿ ಹಲವು ಯೋಜನೆಗಳ ಅನುಷ್ಠಾನಕ್ಕೆ ಒಪ್ಪಂದವಾಗಿತ್ತು. ಈ ಒಪ್ಪಂದದಡಿ ಈಗಾಗಲೇ ಬೋಗಿಗಳ ಖರೀದಿ ಆಗಿದೆ.
ಇದಕ್ಕೆ ರಾಜ್ಯ ಸರ್ಕಾರ ರೈಲ್ವೆ ಇಲಾಖೆಯಲ್ಲಿ ಹಣ ಠೇವಣಿ ಇಡಲಿದ್ದು, ಪ್ರತಿಯಾಗಿ ಬೋಗಿಗಳನ್ನು ತಯಾರಿಸುವುದು, ಸೇವೆ, ಪ್ರಯಾಣ ದರ, ಅದರಿಂದಾಗಬಹುದಾದ ಲಾಭ-ನಷ್ಟ ಸೇರಿದಂತೆ ಎಲ್ಲವನ್ನೂ ರೈಲ್ವೆ ಇಲಾಖೆ ನೋಡಿಕೊಳ್ಳುತ್ತದೆ. ಪ್ರಸ್ತುತ ಎರಡು ತಿಂಗಳಲ್ಲಿ 3 ಬೋಗಿಗಳ ಖರೀದಿಯಾಗಿದೆ.
ಹಾಗೇ ಒಡಂಬಡಿಕೆ ಭಾಗವಾಗಿ ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ವೈಟ್‌ಫೀಲ್ಡ್ ನಡುವಿನ ಸಿಗ್ನಲ್‌ಗಳ ಅಟೋಮೇಷನ್ ಕಾರ್ಯ ಚುರುಕಾಗಬೇಕು ಎಂಬ ಒತ್ತಾಯ ರೈಲ್ವೆ ಹೋರಾಟಗಾರರಿಂದ ಕೇಳಿಬರುತ್ತಿದೆ. ಈ ಮಧ್ಯೆ ಉಪನಗರ ರೈಲು ಯೋಜನೆ ಸಂಬಂಧ ಎಸ್‌ಪಿವಿ (ವಿಶೇಷ ಉದ್ದೇಶ ವಾಹನ) ಸ್ಥಾಪನೆಯು ಪಾಲುದಾರಿಕೆ ಗೊಂದಲದಿಂದ ನೆನೆಗುದಿಗೆ ಬಿದ್ದಿದೆ.
* ವಿಜಯಕುಮಾರ್ ಚಂದರಗಿ