ಚಿಕ್ಕಬಳ್ಳಾಪುರ: ತಾಲೂಕಿನ ಐತಿಹಾಸಿಕ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ಬುಧವಾರ ಶ್ರದ್ಧಾಭಕ್ತಿ, ಸಂಭ್ರಮದಿಂದ ಜರುಗಿತು.
ಕೊರೊನಾ ಸೋಂಕು ನಿಯಂತ್ರಣಗೊಂಡ ಬಳಿಕ ಇದೇ ಮೊದಲ ಬಾರಿಗೆ ನಡೆದ ಸುಬ್ರಹ್ಮಣ್ಯೇಶ್ವರಸ್ವಾಮಿ ರಥೋತ್ಸವಕ್ಕೆ ನಿರೀಕ್ಷೆಗೂ ಮೀರಿ ಭಕ್ತರ ದಂಡು ಚಿತ್ರಾವತಿ ಜಾತ್ರೆಯಲ್ಲಿ ಜಮಾಯಿಸಿದ್ದರು. ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ರುದ್ರಾಭಿಷೇಕ, ಹೋಮ, ಹವನ ಸೇರಿದಂತೆ ಹಲವು ಧಾರ್ಮಿಕ ಕೈಂಕಾರ್ಯ ನೆರವೇರಿದವು.
ಜಾತ್ರೆ ವೀಕ್ಷಣೆಗೆ ನೆರೆಯ ಆಂಧ್ರಪ್ರದೇಶ, ಕೋಲಾರ, ತುಮಕೂರು ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ದೇವಾಲಯದ ಆವರಣದಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿ ದರ್ಶನ ಪಡೆದರು. ಮಧ್ಯಾಹ್ನದ ನಂತರ ಉತ್ಸವ ಮೂರ್ತಿಗಳನ್ನು ಮಂಗಳ ವಾಧ್ಯಗಳೊಂದಿಗೆ ಮೆರವಣಿಗೆ ಮೂಲಕ ಅಲಂಕೃತ ತೇರಿನಲ್ಲಿ ಪ್ರತಿಷ್ಠಾಪಿಸಿ ರಥೋತ್ಸವ ನಡೆಸಲಾಯಿತು.
ಭಕ್ತು ತೇರಿಗೆ ದವನ, ಬಾಳೆಹಣ್ಣು ಎಸೆದು ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಂಡರು. ರಥೋತ್ಸವ ದೇವಾಲಯ ಪ್ರದಕ್ಷಿಣೆ ಹಾಕಿತು. ಜಿಲ್ಲಾ ಪಂಚಾಯಿತಿ ಸದಸ್ಯ ಕೇಶವರೆಡ್ಡಿ, ನಗರಸಭೆ ಅಧ್ಯಕ್ಷ ಡಿ.ಎಸ್. ಆನಂದರೆಡ್ಡಿ (ಬಾಬು), ತಾಲೂಕು ಪಂಚಾಯಿತಿ ಅಧ್ಯಕ್ಷ ರಾಮಸ್ವಾಮಿ, ತಮಿಳುನಾಡಿನ ಹೊಸೂರು ಶಾಸಕರು, ತಾಲೂಕು ಪಂಚಾಯಿತಿ ಇಒ ಹರ್ಷವರ್ಧನ್, ನಗರಸಭೆ ಸದಸ್ಯ ನಾಗರಾಜ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು.
ಭಕ್ತರಿಗೆ ವಿವಿಧ ಸ್ವಯಂ ಸೇವಾ ಸಂಘಟನೆ ಗಳ ಪದಾಧಿಕಾರಿಗಳು ಅನ್ನದಾಸೋಹ ನಡೆಸಿಕೊಟ್ಟರು. ಸ್ಥಳೀಯ ಆರ್ಯವೈಶ್ಯ ಸಮುದಾಯದ ಮುಖಂಡರು ಜಾತ್ರೆಗೆ ಅನ್ನದಾನ ಮಾಡಿದರು. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹೊನ್ನೇನಹಳ್ಳಿ, ಚಿತ್ರಾವತಿ, ವಾಪಸಂದ್ರ ಮತ್ತಿತರ ಗ್ರಾಮಸ್ಥರು ಭಕ್ತರಿಗೆ ದಾಸೋಹ ಜತೆಗೆ ಪಾನಕ, ಮಜ್ಜಿಗೆ ವಿತರಿಸಿದರು.