Advertisement

Subramanya: ಕುಕ್ಕೆಯಲ್ಲಿ ಸಂಭ್ರಮದ ಲಕ್ಷದೀಪೋತ್ಸವ: ಚಂದ್ರಮಂಡಲ ರಥದಲ್ಲಿ ಶ್ರೀ ದೇವರ ಉತ್ಸವ

12:48 AM Dec 01, 2024 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ರಾತ್ರಿ ಭಕ್ತಿ ಸಡಗರದ ಲಕ್ಷದೀಪೋತ್ಸವ ನೆರವೇರಿತು. ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಿತು.

Advertisement

ಅರ್ಚಕರು ಉತ್ಸವದ ವಿಧಿ ವಿಧಾನ ನೆರವೇರಿಸಿದರು. ರಥಬೀದಿಯಿಂದ ಕಾಶಿಕಟ್ಟೆ ತನಕ ಬೆಳಗಿದ ಲಕ್ಷ ಹಣತೆ ದೀಪದ ನಡುವೆ ಶ್ರೀ ದೇವರ ಉತ್ಸವ ನೆರವೇರಿತು. ದೀಪಾಲಂಕಾರಗಳ ನಡುವೆ ಭಕ್ತರ ಶ್ರೀ ದೇವರ ಲಕ್ಷದೀಪೋತ್ಸವ ರಥೋತ್ಸವವು ನೆರವೇರಿತು. ಈ ಮೂಲಕ ಶ್ರೀ ದೇವರ ರಥಬೀದಿ ಉತ್ಸವ ಆರಂಭವಾಯಿತು.

ದೇಗುಲದ ಗೋಪುರದಿಂದ ಕಾಶಿಕಟ್ಟೆ ತನಕ, ಅಭಯ ಆಂಜನೇಯ ಗುಡಿ, ಸವಾರಿ ಮಂಟಪ, ಆದಿಸುಬ್ರಹ್ಮಣ್ಯ, ಬೈಪಾಸ್‌ ರಸ್ತೆ, ಕಾಶಿಕಟ್ಟೆ ಸುತ್ತಲಿನ ಆವರಣ, ಗ್ರಾ.ಪಂ., ಪೊಲೀಸ್‌ ಠಾಣೆ, ಕಾಶಿಕಟ್ಟೆಯಿಂದ ಅಡ್ಡಬೀದಿ ವೃತ್ತದ ತನಕ ರಸ್ತೆಯ ಇಕ್ಕೆಲದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಕಾರದಲ್ಲಿ ಕ್ಷೇತ್ರಾದ್ಯಂತ ಲಕ್ಷ ಹಣತೆ ದೀಪ ಬೆಳಗಿತು.

ಮಹಾಪೂಜೆಯ ಬಳಿಕ ಶ್ರೀ ದೇವರ ಹೊರಾಂಗಣ ಉತ್ಸವವು ಆರಂಭವಾಯಿತು. ಪ್ರಥಮವಾಗಿ ಕಾಚುಕುಜುಂಬ ದೈವವು ಶ್ರೀ ದೇವರನ್ನು ಭೇಟಿಯಾಗಿ ನುಡಿಗಟ್ಟು ನಡೆಯಿತು. ಅನಂತರ ಆಕರ್ಷಕ ಸಾಲುದೀಪಗಳ ನಡುವೆ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವ ಮತ್ತು ವಿವಿಧ ಸಂಗೀತ ವಾದ್ಯಗಳ ಸುತ್ತುಗಳು ನೆರವೇರಿತು. ಅಂತಿಮವಾಗಿ ಶ್ರೀ ದೇವರು ರಥಬೀದಿ ಪ್ರವೇಶಿಸಿದರು.

ಚಂದ್ರಮಂಡಲ ರಥದಲ್ಲಿ ಆರೂಢರಾಗಿ ಪೂಜೆ ಸ್ವೀಕರಿಸಿದರು. ದೇಗುಲದ ಆಡಳಿತಾಧಿಕಾರಿ ಜುಬಿನ್‌ ಮೊಹಪಾತ್ರ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಯೇಸುರಾಜ್‌, ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯೆ ಮಲ್ಲಿಕಾ ಪಕಳ ಸಹಿತ ಪ್ರಮುಖರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next