Advertisement
ಯಾವುದೇ ಹಗ್ಗವನ್ನು ಬಳಸದೆ ಬೆತ್ತಗಳಿಂದಲೇ ಸುಂದರ ರಥವನ್ನು ನಿರ್ಮಿಸುವುದು ಮತ್ತು ಇವುಗಳನ್ನು ಬೆತ್ತದಿಂದಲೇ ಎಳೆಯುವುದು ಉತ್ಸವದ ಪ್ರಮುಖ ಆಕರ್ಷಣೆ ಮತ್ತು ವಿಶೇಷ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯ ಮೂಲನಿವಾಸಿ ಮಲೆಕುಡಿಯ ಜನಾಂಗದವರಿಗೂ ಹೆಮ್ಮೆ ಮತ್ತು ಶ್ರದ್ಧಾ ಭಕ್ತಿಯ ಕಾರ್ಯ. ಭಕ್ತರಿಗೆ ಅಲಂಕೃತ ರಥಗಳನ್ನು ನೋಡುವುದೇ ಒಂದು ಸಡಗರ.
ಮಲೆಕುಡಿಯ ಜನಾಂಗದ ನುರಿತ 61ಕ್ಕೂ ಅಧಿಕ ಹಿರಿಯ ಮತ್ತು ಕಿರಿಯ ಕುಶಲಿಗಳು ಸುಮಾರು 25ಕ್ಕೂ ಅಧಿಕ ದಿನಗಳ ಕಾಲ ರಥ ಕಟ್ಟುವ ಸೇವೆ ಮಾಡುತ್ತಾರೆ. ಆಕರ್ಷಕ ರಥವನ್ನು ಸಂಪ್ರದಾಯಬದ್ಧವಾಗಿ ನಿರ್ಮಿಸುತ್ತಾರೆ. ಬ್ರಹ್ಮರಥ, ಪಂಚಮಿ ರಥ ನಿರ್ಮಾಣ, ಶ್ರೀ ದೇಗುಲದ ಒಳಾಂಗಣದಲ್ಲಿ ಎಳೆಯುವ ಬಂಡಿ ರಥದ ಅಲಂಕಾರ, ಲಕ್ಷದೀಪೋತ್ಸವದಂದು ಎಳೆಯುವ ಪಂಚ ಶಿಖರದ ಚಂದ್ರಮಂಡಲ ರಥ ನಿರ್ಮಾಣ, ಹೂವಿನ ತೇರಿನ ಅಲಂಕಾರ ಎಲ್ಲವೂ ಮೂಲನಿವಾಸಿಗಳ ಸೇವೆಯಿಂದ ಕಂಗೊಳಿಸುತ್ತವೆ. ಈ ಬಾರಿ ಡಿ.5ರಂದು ರಾತ್ರಿ ಹೂವಿನ ತೇರಿನ ಉತ್ಸವ, ಡಿ.6ರಂದು ರಾತ್ರಿ ಪಂಚಮಿ ರಥೋತ್ಸವ, ಡಿ.7ರಂದು ಪ್ರಾತಃಕಾಲ ಚಂಪಾಷಷ್ಠಿ ಮಹಾರಥೋತ್ಸವ ಜರಗಲಿದೆ.
Related Articles
ಐದು ಅಂತಸ್ತುಗಳ ಬ್ರಹ್ಮರಥಕ್ಕೆ ಹಲಗೆಯನ್ನಿಟ್ಟು ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ರಥದ ಅಟ್ಟೆಯನ್ನು ಬಿದಿರು ಹಾಗೂ ರಥದ ಮೇಲ್ಭಾಗವನ್ನು ಪೂರ್ಣ ಬೆತ್ತದಿಂದ ನಿರ್ಮಿಸುತ್ತಿದ್ದಾರೆ. ರಥಕಟ್ಟಲು ಬೆತ್ತದ ಸೀಳುಗಳನ್ನು ಬಳಸುತ್ತಾರೆ. ಆಕರ್ಷಕ ಶೈಲಿಯಲ್ಲಿ ರಥವನ್ನು ನಿರ್ಮಿಸಿದ ಬಳಿಕ ಬಟ್ಟೆಯ ಪತಾಕೆಗಳಿಂದ ಸಿಂಗರಿಸಲಾಗುತ್ತದೆ. ರಥಗಳ ಗಾಂಭೀರ್ಯತೆ, ಅದರ ಶೈಲಿ, ಆಕರ್ಷಣೆಗಳು ಹಾಗೂ ರಥಗಳ ವಿನ್ಯಾಸಗಳು ಇವರ ಅತ್ಯುತ್ತಮ ರಚನಾ ಕೌಶಲವನ್ನು ತೆರೆದಿಡುತ್ತವೆ. ಗುರು ಇಲ್ಲದ ಈ ಕಾಯಕವನ್ನು ಹಿರಿಯರ ರಚನಾ ಕೌಶಲವನ್ನು ನೋಡಿ ಕಲಿತಿದ್ದಾರೆ ಎನ್ನುವುದು ವಿಶೇಷ. ಹಿರಿಯರೊಂದಿಗೆ ಯುವ ಜನಾಂಗವೂ ದೇವರ ಈ ಸೇವೆಯಲ್ಲಿ ಕಾರ್ಯಪ್ರವೃತ್ತವಾಗಿದೆ.
Advertisement