ಸುಳ್ಯ: ತಾಲೂಕಿನಲ್ಲಿ ಬುಧವಾರ ಬೆಳಗ್ಗಿನಿಂದ ಭಾರೀ ಮಳೆಯಾಗುತ್ತಿದ್ದು ಕುಮಾರಧಾರಾ, ಪಯಸ್ವಿನಿ ನದಿ ಸಹಿತ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಮಧ್ಯಾಹ್ನ ವೇಳೆ ಸ್ವಲ್ಪ ಬಿಡುವು ನೀಡಿತ್ತಾದರೂ ಸಂಜೆ ಹೊತ್ತಿಗೆ ಮೋಡ ಸಹಿತ ಗಾಳಿ ಮಳೆಯಾಗಿತ್ತು.
ಹೀಗೆಯೇ ಮಳೆ ಮುಂದುವರಿದರೆ ಗುರುವಾರ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಕುರಿತು ತಹಶೀಲ್ದಾರ್ ನಿರ್ಧರಿಸಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಲಿಂಗಪ್ಪ ತಿಳಿಸಿದ್ದಾರೆ.
ಪುಷ್ಪಗಿರಿ ವ್ಯಾಪ್ತಿಯ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾದ ಪರಿಣಾಮ ಕುಮಾರಧಾರಾ ನದಿ ಉಕ್ಕೇರಿದೆ. ಅಪರಾಹ್ನ 12 ಗಂಟೆಯ ಸುಮಾರಿಗೆ ಕುಕ್ಕೆ ಸುಬ್ರಹ್ಮಣ್ಯದ ಹಳೆಯ ಮುಳುಗು ಸೇತುವೆ ಸಹಿತ ಕುಮಾರಧಾರಾ ಸ್ನಾನಘಟ್ಟ ಪ್ರಸಕ್ತ ಸಾಲಿನಲ್ಲಿ ಮೊದಲ ಬಾರಿಗೆ ಮುಳುಗಡೆಯಾದವು. ಪಕ್ಕದಲ್ಲೇ ಇರುವ ಸುಬ್ರಹ್ಮಣ್ಯ-ಪುತ್ತೂರು ರಸ್ತೆಯ ಸೇತುವೆ ಕೂಡ ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ತಗೊಂಡಿತು. ದೇಗುಲದ ಯಾಗ ಶಾಲೆ ಬಳಿ ಹರಿಯುವ ಕನ್ನಡಿಹೊಳೆಗೆ ನಿರ್ಮಿಸಲಾದ ನೂತನ ಕಿಂಡಿ ಅಣೆಕಟ್ಟು ಮುಳುಗಡೆಗೊಳ್ಳುವಷ್ಟು ನೀರು ಉಕ್ಕಿ ಹರಿದಿತ್ತು. ಮುಂಜಾಗ್ರತಾ ಕ್ರಮವಾಗಿ ಬುಧವಾರ ಸುಬ್ರಹ್ಮಣ್ಯದ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿತ್ತು.
ದ್ವೀಪವಾಗುವ ಆತಂಕವಿಲ್ಲ : ಕುಮಾರಧಾರಾ ನದಿಗೆ ಈ ಬಾರಿ ನೂತನ ಸೇತುವೆ ನಿರ್ಮಾಣಗೊಂಡಿರುವ ಪರಿಣಾಮ ಬ್ರಿಟಿಷರ ಕಾಲ ದಲ್ಲಿ ನಿರ್ಮಾಣ ಗೊಂಡಿದ್ದ ಮುಳುಗುಸೇತುವೆ ಜಲಾವೃತಗೊಂಡರೂ ವಿದ್ಯಾರ್ಥಿಗಳಿಗೆ, ಯಾತ್ರಾರ್ಥಿ ಗಳಿಗೆ ಸಂಚಾರಕ್ಕೆ ಅಡಚಣೆ ಯಾಗಿಲ್ಲ. ಮುಳುಗುಸೇತುವೆ ಜಲಾವೃತ ವಾದಾಗ ಈ ಹಿಂದೆ ಸಂಪರ್ಕ ಕಡಿತ ಗೊಂಡು ಸುಬ್ರಹ್ಮಣ್ಯ ದ್ವೀಪದಂತಾಗುತ್ತಿತ್ತು. ಆದರೆ ಈಗ ಆ ಸಮಸ್ಯೆ ದೂರವಾಗಿದೆ.