ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ ಹಿರಿಯ ರಾಜಕಾರಣಿ, ರಾಜ್ಯ ಸಭಾ ಸದಸ್ಯ ಸುಬ್ರಮಣ್ಯನ್ ಸ್ವಾಮಿ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ತಪ್ಪನ್ನು ಹುಡುಕಿದ್ದಾರೆ. ಬುಧವಾರ ಬೆಳಗ್ಗೆ ಟ್ವೀಟ್ ಮಾಡಿ ಬಿಜೆಪಿಯ ‘ಸಂಕಲ್ಪ ಪತ್ರ’ದ ಎರಡು ಪ್ರಮಾದಗಳನ್ನು ಗುರುತಿಸಿದ್ದಾರೆ.
ಸೋಮವಾರ ಬಿಜೆಪಿ ನಾಯಕ ರಾಜನಾಥ್ ಸಿಂಗ್ ಸಂಕಲ್ಪ ಪತ್ರ ಎಂಬ ಹೆಸರಿನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ಹಲವಾರು ಭರವಸೆಗಳನ್ನು ಜನರಿಗೆ ನೀಡಲಾಗಿತ್ತು. 2022ರ ಹೊತ್ತಿಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಆಶ್ವಾಸನೆ ನೀಡಿತ್ತು. ಬಿಜೆಪಿಯ ಈ ಆಶ್ವಾಸನೆಯನ್ನು ಪ್ರಮಾದ ಎಂದಿರುವ ಸ್ವಾಮಿ 2022ರಲ್ಲಿ ರೈತರ ಆದಾಯ ದುಪ್ಪಟ್ಟಾಗುವುದೆಂದರೆ ವಾರ್ಷಿಕ ಶೇಕಡಾ 24ರಷ್ಟು ಬೆಳವಣಿಗೆಯಾಗಬೇಕು. ಆದರೆ ಅದು ಸಾಧ್ಯವಿಲ್ಲ. ವಾರ್ಷಿಕ ಕೇವಲ 10 ಶೇಕಡಾ ಬೆಳವಣಿಗೆ ಸಾಧ್ಯ ಎಂದಿದ್ದಾರೆ.
ಬಿಜೆಪಿಯ ತನ್ನ ಪ್ರಣಾಳಿಕೆಯಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ವಿಶ್ವದಲ್ಲಿ ಆರನೇ ಸ್ಥಾನದಲ್ಲಿದೆ ಎಂದಿದೆ. ಆದರೆ ಭಾರತದ ಜಿಡಿಪಿ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಆರ್ಥಿಕ ತಜ್ಞರೂ ಆಗಿರುವ ಸುಬ್ರಮಣ್ಯನ್ ಸ್ವಾಮಿ ಬಿಜೆಪಿ ತಪ್ಪುಗಳನ್ನು ಗುರುತಿಸಿದ್ದಾರೆ.
ಕೇಂದ್ರ ಸಚಿವರುಗಳಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ನಿರ್ಮಲಾ ಸೀತರಾಮನ್, ಪಿಯೂಶ್ ಘೋಯಲ್, ರವಿಶಂಕರ್ ಪ್ರಸಾದ್, ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ 20 ಮಂದಿ ಸದಸ್ಯರು ಸೇರಿ ಬಿಜೆಪಿಯ ಸಂಕಲ್ಪ ಪತ್ರವನ್ನು ಸಿದ್ದ ಪಡಿಸಿದ್ದರು.