ಚೆನ್ನೈ: ಉತ್ತರ ಪ್ರದೇಶ ರಾಜ್ಯದಲ್ಲಿ ಮುಂದಿನ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯದೆ, ಅಲ್ಲಿ ರಾಷ್ಟ್ರಪತಿ ಆಡಳಿತ ಹೇರಿದರೆ ಅಚ್ಚರಿಯಿಲ್ಲ. ಕೇಂದ್ರ ಸರ್ಕಾರವು ಈ ವರ್ಷದಲ್ಲಿ ಏನನ್ನು ನೇರವಾಗಿ ಮಾಡಬೇಕಿತ್ತೋ ಅದನ್ನು ಮುಂದಿನ ವರ್ಷ ಪರೋಕ್ಷವಾಗಿ ಮಾಡಬಹುದು ಎಂದು ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣ್ಯನ್ ಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಬರೆದುಕೊಂಡಿದ್ದಾರೆ. ಮುಂದಿನ ವರ್ಷದ ಚುನಾವಣೆಯನ್ನು ನಿಲ್ಲಿಸುವ ಬಗ್ಗೆ ಯೋಚಿಸುವಂತೆ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿದ ಸಮಯದಲ್ಲೇ ಸುಬ್ರಮಣ್ಯನ್ ಸ್ವಾಮಿ ಅವರ ಈ ಹೇಳಿಕೆ ಮಹತ್ವ ಪಡೆದಿದೆ.
ಇದನ್ನೂ ಓದಿ:ತೆರೆಮರೆ ಕಸರತ್ತು: ವಿದೇಶ ಪ್ರವಾಸದ ವೇಳೆ ಸಿಎಂ ಬೊಮ್ಮಾಯಿ ಬದಲಾವಣೆ ಸಾಧ್ಯತೆ?!
“ಒಮಿಕ್ರಾನ್ ಸೋಂಕಿನ ಕಾರಣದಿಂದ ಲಾಕ್ ಡೌನ್ ಆದರೆ ಮತ್ತು ಉತ್ತರ ಪ್ರದೇಶ ಚುನಾವಣೆಯು ಸೆಪ್ಟೆಂಬರ್ ಗೆ ಮುಂದೂಡಿಕೆಯಾಗಿ, ಅಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಯಾದರೆ ಯಾರೂ ಅಚ್ಚರಿ ಪಡಬೇಕಿಲ್ಲ” ಎಂದು ಸುಬ್ರಮಣ್ಯನ್ ಸ್ವಾಮಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತಾವಧ ಮಾರ್ಚ್ ಮೂರನೇ ವಾರಕ್ಕೆ ಅಂತ್ಯವಾಗಲಿದೆ. ಅದಕ್ಕೂ ಮೊದಲು ಚುನಾವಣೆ ನಡೆಯಬೇಕಿದೆ.