ಹೊಸದಿಲ್ಲಿ : ವಿವಾದಿತ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ತನ್ನ ಪಕ್ಷದ ಸಚಿವರು ವಿದೇಶೀ ಉಡುಪು ತೊಡುಪುಗಳನ್ನು ಬಹಿಷ್ಕರಿಸಬೇಕು ಎಂದು ಹೇಳಿದ್ದಾರೆ.
ಟ್ವಿಟರ್‌ನಲ್ಲಿ ಈ ಸಲಹೆ ನೀಡಿರುವ ಸ್ವಾಮಿ, ಬಿಜೆಪಿ ಮೊತ್ತ ಮೊದಲಾಗಿ ಲಿಕ್ಕರ್ ಬ್ಯಾನ್ ಮಾಡಬೇಕು ಎಂದು ಹೇಳಿದ್ದಾರೆ.
ಬಿಜೆಪಿ ಸಚಿವರು ಭಾರತೀಯ ಹವಾಮಾನಕ್ಕೆ ತಕ್ಕುದಾದ ಬಟ್ಟೆಬರೆಗಳನ್ನು ಧರಿಸುವ ಶಿಸ್ತನ್ನು ರೂಢಿಸಿಕೊಳ್ಳಬೇಕು; ವಿದೇಶೀ ಶೈಲಿಯ ಉಡುಪು ತೊಡುಪುಗಳು ಗುಲಾಮಗಿರಿಯ ಸಂಕೇತ ಎಂದು ರಾಜ್ಯಸಭೆಯ ಸದಸ್ಯರಾಗಿರುವ ಸ್ವಾಮಿ ಟ್ವೀಟ್ ಮಾಡಿದರು.
ಸಂವಿಧಾನದ 49ನೇ ವಿಧಿಯ ಆಶಯಕ್ಕೆ ಅನುಗುಣವಾಗಿ ಬಿಜೆಪಿ ಮದ್ಯಪಾನವನ್ನು ನಿಷೇಧಿಸಬೇಕು; ಇದನ್ನು ಪಕ್ಷದ ಶಿಸ್ತನ್ನಾಗಿ ಬಿಜೆಪಿ ಮಾಡಬೇಕು ಎಂದು ಸ್ವಾಮಿ ಹೇಳಿದರು.
ಪಾರ್ಲಿಮೆಂಟ್‌ನ ಸೆಂಟ್ರಲ್ ಹಾಲ್ ನಲ್ಲಿ ನಡೆದಿದ್ದ ಪಂಡಿತ್ ಮದನ ಮೋಹನ ಮಾಳವೀಯ ಅವರ ಹುಟ್ಟು ಹಬ್ಬದ ಸಮಾರಂಭದಲ್ಲಿ ಯಾವುದೇ ಎನ್‌ಡಿಎ ಸಚಿವರು ಪಾಲ್ಗೊಂಡಿಲ್ಲ ಎಂದು ಸ್ವಾಮಿ ಟೀಕಿಸಿದ್ದಾರೆ. ಬಿಜೆಪಿಯ ಸಚಿವರ ಉಡುಪು ತೊಡುಪುಗಳ ಶೈಲಿ ಈಗಲೂ ಅವರ ಬ್ರಿಟಿಷ್ ಸಾಮಾಜ್ಯಶಾಹಿಯ ಗುಲಾಮಗರಿಯನ್ನು ಸಂಕೇತಿಸುವಂತಿವೆ ಎಂದು ಹೇಳಿದ್ದಾರೆ.
ಜೆಎನ್‌ಯು ನಲ್ಲಿ ನಡೆಯಲಿದ್ದ “ಅಯೋಧ್ಯೆಯಲ್ಲೇ ರಾಮ ಮಂದಿರ ಏಕೆ?’ ಎನ್ನುವ ಕುರಿತ ತನ್ನ ಉಪನ್ಯಾಸ ಕಾರ್ಯಕ್ರಮ ರದ್ದಾದ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾಮಿ, “ಜೆಎನ್‌ಯು ಗೆ ನನ್ನ ಚಿಂತನಾ ಲಹರಿಗಳು ಯುವಕರ ಮೇಲೆ ದುಷ್ಪ್ರಭಾವ ಬೀರಬಹುದೆಂಬ ಹೆದರಿಕೆ ಇರುವಂತಿದೆ’ ಎಂದು ಹೇಳಿದರು.