ಕಡಬ: ಕಠಿನ ಕಟ್ಟುಪಾಡುಗಳಿಲ್ಲದ ಹಿಂದೂ ಧರ್ಮದಲ್ಲಿ ಇರುವ ಸ್ವಾತಂತ್ರ್ಯ ಧರ್ಮದ ಮೇಲಿನ ಶ್ರದ್ಧೆ ಕಡಿಮೆಯಾಗಲು ಕಾರಣವಾಗಬಾರದು. ಸಂಸ್ಕಾರಯುತ ಧಾರ್ಮಿಕ ಪ್ರಜ್ಞೆಯಿಂದ ಮನುಷ್ಯ ಜೀವನಕ್ಕೆ ಅರ್ಥ ಬರಲು ಸಾಧ್ಯ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ನುಡಿದರು.
ಅವರು ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ದಲ್ಲಿ 62ನೇ ವರ್ಷದ ಏಕಾಹ ಭಜನೋತ್ಸವದ ಪ್ರಯುಕ್ತ ಶುಕ್ರವಾರ ರಾತ್ರಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಂಸ್ಕಾರ ಎನ್ನುವ ಬೇಲಿಯೊಳಗೆ ನಾವು ಬದುಕನ್ನು ರೂಪಿಸಿಕೊಳ್ಳಬೇಕು. ದೇವರ ಮೇಲಿನ ಭಯ ಮತ್ತು ಭಕ್ತಿ ನಮ್ಮನ್ನು ಬದುಕಿನಲ್ಲಿ ತಪ್ಪು ದಾರಿ ತುಳಿಯದಂತೆ ನಿಯಂತ್ರಿಸುತ್ತದೆ. ಧರ್ಮದ ಚೌಕಟ್ಟನ್ನು ಮೀರಿದ ಬದುಕು ಎಂದಿಗೂ ಸರಿದಾರಿಯಲ್ಲಿ ಸಾಗಲು ಸಾಧ್ಯವಿಲ್ಲ. ಆದುದರಿಂದ ನಾವು ನಮ್ಮ ಮಕ್ಕಳಿಗೆ ಧಾರ್ಮಿಕ ಚಿಂತನೆಗಳ ಅರಿವನ್ನು ಮೂಡಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. 62 ವರ್ಷಗಳಿಂದ ಏಕಾಹ ಭಜನೆಯನ್ನು ನಿರಂತರವಾಗಿ ಆಯೋಜಿಸುತ್ತಿರುವ ಸಂಘಟಕರ ಕಾರ್ಯ ಶ್ಲಾಘನೀಯ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಭಜನ ಮಂಡಳಿಯ ಕಾರ್ಯದರ್ಶಿ ಮನೋಹರ ರೈ ಬೆದ್ರಾಜೆ, ಏಕಾಹ ಭಜನೋತ್ಸವ ಸಮಿತಿಯ ಕಾರ್ಯದರ್ಶಿ ಕಿಶನ್ ಕುಮಾರ್ ರೈ ಪೆರಿಯಡ್ಕ ಉಪ ಸ್ಥಿತರಿದ್ದರು. ಏಕಾಹ ಭಜನೋತ್ಸವ ಸಮಿತಿಯ ಗೌರವಾಧ್ಯಕ್ಷ, ಕಡಬ ಎಸ್‌ಐ ಹರೀಶ್ ಆರ್., ದೇಗುಲದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಶ್ರೀಗಳನ್ನು ಗೌರವಿಸಿದರು.
ಏಕಾಹ ಭಜನೋತ್ಸವ ಸಮಿತಿಯ ಅಧ್ಯಕ್ಷ ಅಜಿತ್ ರೈ ಆರ್ತಿಲ ಸ್ವಾಗತಿಸಿ, ಭಜನ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾೖಕ್ ವಂದಿಸಿದರು.