ಸುಬ್ರಹ್ಮಣ್ಯ: ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಫೆಬ್ರವರಿ ಅಂತ್ಯಕ್ಕೆ ಮೇಲ್ಸೇತುವೆ ಕಾಮಗಾರಿ ಆರಂಭಿಸಲಾಗಿತ್ತು. ಆಗ ಇದ್ದ ವೇಗ ಮತ್ತೆ ಮುಂದುವರಿಯದೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದಾಗಿ ರೈಲ್ವೇ ಅಧಿಕಾರಿಗಳ ಭರವಸೆ ಈಡೇರುವ ಯಾವುದೇ ಲಕ್ಷಣಗಳು ಸದ್ಯಕ್ಕೆ ಕಂಡುಬರುತ್ತಿಲ್ಲ.
ಯಾತ್ರಾ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಸನಿಹದಲ್ಲಿರುವ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಎರಡನೇ ಪ್ಲಾಟ್ ಫಾರ್ಮ್ ನಿರ್ಮಾಣಗೊಂಡಿದ್ದರೂ ಅದನ್ನು ಸಂಪರ್ಕಿಸುವ ಮೇಲ್ಸೇತುವೆ ನಿರ್ಮಾಣಗೊಂಡಿರಲಿಲ್ಲ. ಇದರಿಂದಾಗಿ ಪ್ರಯಾಣಿಕರು ರೈಲಿನಿಂದ ಇಳಿದು ಅಪಾಯಕಾರಿ ಸ್ಥಿತಿಯಲ್ಲಿ ಸಂಕಷ್ಟದಿಂದ ಹಳಿ ದಾಟಿ ನಿಲ್ದಾಣದ ಒಂದನೇ ಪ್ಲಾಟ್ ಫಾರ್ಮ್ಗೆ ಬರಬೇಕಾಗುತ್ತಿದೆ. ಇದನ್ನು ತಪ್ಪಿಸಲು ಮೇಲ್ಸೇತುವೆ ನಿರ್ಮಿಸುವ ಆಗ್ರಹ ವ್ಯಕ್ತವಾಗಿತ್ತು.
ಮೇಲ್ಸೇತುವೆ ಕಾಮಗಾರಿಗೆ ಎರಡು ವರ್ಷಗಳ ಹಿಂದೆ ಟೆಂಡರ್ ಪ್ರಕ್ರಿಯೆ ನಡೆದಿದ್ದರೂ ಕಾಮಗಾರಿ ವಿಳಂಬವಾಗಿ ಆರಂಭವಾಯಿತಾದರೂ ಎರಡೂ ಕಡೆಯಲ್ಲೂ ಕೇವಲ ಪಿಲ್ಲರ್ ಅಳವಡಿಸಲು ಹೊಂಡ ನಿರ್ಮಾಣ ಕಾರ್ಯ ನಡೆದು, ಕೆಳಭಾಗದ ಪಿಲ್ಲರ್ ಕಾಮಗಾರಿ ನಡೆದದ್ದು ಬಿಟ್ಟರೆ ಮತ್ತೆ ಪ್ರಗತಿ ಕಾಣಲಿಲ್ಲ.
ಭರವಸೆ ನೀಡಿದ್ದ ಅಧಿಕಾರಿಗಳು
ಕಳೆದ ಅಕ್ಟೋಬರ್‌ನಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಸೌತ್ ವೆಸ್ಟರ್ನ್ ರೈಲ್ವೇಸ್ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಇಲ್ಲಿನ ನಿಲ್ದಾಣ ಪರಿಶೀಲನೆ ನಡೆಸಿ ಅಭಿವೃದ್ಧಿ ಬಗ್ಗೆ ತಿಳಿಸಿದ್ದರು. ಅಲ್ಲದೆ ನವೆಂಬರ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭಿಸಿ, ಮುಂದಿನ ಮಳೆಗಾಲದ ಒಳಗೆ ಉಪಯೋಗಕ್ಕೆ ಲಭ್ಯವಾಗಲು ಕ್ರಮಕೈಗೊಳ್ಳುವ ಬಗ್ಗೆಯೂ ತಿಳಿಸಿದ್ದರು. ಆದರೆ ಆದಾವುದೂ ಇಲ್ಲಿ ಕಾರ್ಯಗತದ ಲಕ್ಷಣ ಕಾಣಿಸುತ್ತಿಲ್ಲ. ಒಟ್ಟಿನಲ್ಲಿ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ವೃದ್ಧರು, ಚಿಕ್ಕಮಕ್ಕಳು ಸೇರಿದಂತೆ ರೈಲು ಪ್ರಯಾಣಿಕರು ಹಳಿ ದಾಟಿ ಪ್ರಯಾಣಿಸುವ ಸಂಕಟ ತಪ್ಪಿಲ್ಲ. ಸ್ಥಳಕ್ಕೆ ಅಧಿಕಾರಿಗಳು ಬರುತ್ತಾರೆ ಎಂದಾಗ ಇಲ್ಲಿ ಕಾಮಗಾರಿ ನಡೆಸಲಾಗುತ್ತದೆ. ಬಳಿಕ ನಿರ್ಲಕ್ಷಿಸಲಾಗುತ್ತದೆ ಎಂಬ ಆರೋಪವೂ ಇದೆ.