ಸುಬ್ರಹ್ಮಣ್ಯ: ಸುಬ್ರಹ್ಮಣ್ಯದಲ್ಲಿರುವ ಅರ್ಧ ಶತಮಾನದ ಪೊಲೀಸ್ ಠಾಣೆಗೆ ಮೂರು ತಿಂಗಳ ಹಿಂದೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ನೂತನ ಠಾಣೆಯ ಕಟ್ಟಡದ ಕೆಲಸ ಕೂಡಲೇ ಆರಂಭಿಸಿ ವರ್ಷದೊಳಗೆ ಠಾಣೆ ಕಾರ್ಯಾರಂಭ ಮಾಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಠಾಣೆ ಕಾಮಗಾರಿ ಮಾತ್ರ ಇನ್ನೂ ಆರಂಭಗೊಂಡಿಲ್ಲ.
ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯ ಕಟ್ಟಡಕ್ಕೆ ಸುಮಾರು 50 ವರ್ಷಗಳಾಗುತ್ತ ಬಂದಿದ್ದು, ಠಾಣೆ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಮಳೆಗಾಲದಲ್ಲಿ ನೀರು ಸೋರಿಕೆಯಾಗುತ್ತದೆ. ಇದಕ್ಕಾಗಿ ಮೇಲ್ಛಾವಣಿಗೆ ಪ್ಲಾಸ್ಟಿಕ್ ಟಾರ್ಪಾಲು ಹಾಸಲಾಗಿದೆ. ಈ ಬಗ್ಗೆ ಮಾಹಿತಿ ಅರಿತು ಜೂನ್‌ನಲ್ಲಿ ಕುಕ್ಕೆಗೆ ಆಗಮಿಸಿದ್ದ ಆರಗ ಜ್ಞಾನೇಂದ್ರ ಠಾಣೆಯ ಕಟ್ಟಡ ಪರಿಶೀಲಿಸಿ, ಅಧಿಕಾರಿಗಳ ಜತೆ ಮಾತನಾಡಿ, ಸಂಬಂಧಿಸಿದವರ ಜತೆ ಚರ್ಚಿಸಿದ್ದರು. ಬಳಿಕ ಮಾಧ್ಯದವರೊಂದಿಗೆ ಮಾತನಾಡಿ, ಹೊಸ ಕಟ್ಟಡ ನಿರ್ಮಿಸಲು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಮುಗಿಸಿ, ವರ್ಷದೊಳಗೆ ನೂತನ ಠಾಣೆ ಕಾರ್ಯಾರಂಭ ಮಾಡುವ ಬಗ್ಗೆ ಭರವಸೆ ನೀಡಿದ್ದರು.
ವರ್ಷಗಳ ಬೇಡಿಕೆ
ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ವ್ಯವಸ್ಥಿತ ಠಾಣಾ ಕಟ್ಟಡ ಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಆಗ್ರಹಿಸುತ್ತಾ ಬರುತ್ತಿದ್ದರೂ, ಕಾರ್ಯಗತ ಮಾತ್ರ ನಡೆದಿಲ್ಲ. ಗೃಹ ಸಚಿವರು ನೀಡಿದ ಭರವಸೆಯಂತೆ ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದಿದ್ದರೆ ಈ ಮೊದಲೇ ಕಾಮಗಾರಿ ಆರಂಭಿಸಬೇಕಿತ್ತು. ಮುಂದಿನ ಮಳೆಗಾಲವೂ ಠಾಣೆಯ ಮೇಲ್ಛಾವಣಿಗೆ ಪ್ಲಾಸ್ಟಿಕ್ ಟಾರ್ಪಾಲು ಹೊದಿಸಬೇಕಾದ ಅಗತ್ಯ ಇದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಟೆಂಡರ್ ಪ್ರಕ್ರಿಯೆ: ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹೊಸ ಕಟ್ಟಡ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಪ್ರಕ್ರಿಯೆ ವೇಗವಾಗಿ ನಡೆಯಲು ಕ್ರಮ ಕೈಗೊಳ್ಳಲಾಗುವುದು. –
ಋಷಿಕೇಶಿ ಭಗವಾನ್ ಸೋನವಾಣೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ