Advertisement

ಸುಬ್ರಹ್ಮಣ್ಯ: ಅರ್ಚಕರ ಮೇಲಿನ ಹಲ್ಲೆ ಪ್ರಕರಣ ; ಪಿಸಿ ಮಾಡಿದ ತಪ್ಪಿಗೆ ಕ್ಷಮೆ ಕೇಳಿದ SI

09:11 AM Mar 30, 2020 | Hari Prasad |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆದಿಸುಬ್ರಹ್ಮಣ್ಯ ದೇಗುಲದ ಅರ್ಚಕ ಶ್ರೀನಿವಾಸ್ ಭಟ್ ಅವರ ಮೇಲೆ ಸುಬ್ರಹ್ಮಣ್ಯ ಠಾಣಾ ಸಿಬಂದಿ ಶಂಕರ್ ಅವರು ಶನಿವಾರ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಎಸ್ .ಐ, ಹಲ್ಲೆಗೊಳಗಾದ ಅರ್ಚಕರು ಮತ್ತು ದೇಗುಲದ ಕಾರ್ಯನಿರ್ವಹಣಾಧಿಕಾರಿ ಎಂ.ಎಚ್. ರವೀಂದ್ರ ಹಾಗೂ ಇತರರ ಸಮ್ಮುಖದಲ್ಲಿ ಮಾತುಕತೆ ನಡೆಯಿತು.

Advertisement

ಈ ಸಂದರ್ಭದಲ್ಲಿ ಅರ್ಚಕರ ಮೇಲೆ ವಿನಾಕಾರಣ ಹಲ್ಲೆ ಮಾಡಿದ ಪೊಲೀಸ್ ಶಂಕರ್ ಅರ್ಚಕ ಶ್ರೀನಿವಾಸ್ ಭಟ್ ಅವರ ಬಳಿ ಕ್ಷಮೆ ಕೇಳಿದ್ದರು. ಇದೇ ವೇಳೆ ಠಾಣೆಯ ಎಸ್.ಐ. ಓಮನಾ ಅವರು ತಮ್ಮ ಅಧೀನ ಸಿಬ್ಬಂದಿಯ ಅಮಾನವೀಯ ವರ್ತನೆಗೆ ಬಹಳವಾಗಿ ನೊಂದು ಬೇಸರ ವ್ಯಕ್ತಪಡಿಸಿದ ಘಟನೆಯೂ ವರದಿಯಾಗಿದೆ. ತಮ್ಮ ಠಾಣಾ ಸಿಬಂದಿಗೆ ಬುದ್ದಿವಾದ ಹೇಳಿ ಎಸ್ಐ ಅವರು ಬಳಿಕ ಆತ ಮಾಡಿದ ತಪ್ಪಿಗೆ  ಅರ್ಚಕರ ಬಳಿ ಆತನ ಪರವಾಗಿ ತಾವು ಖುದ್ದು  ಕ್ಷಮೆ ಯಾಚಿಸಿ ದೊಡ್ಡತನ ಮೆರೆದಿದ್ದಾರೆ.

ಒಂದು ಹಂತದಲ್ಲಿ ಪ್ರಕರಣ ಇಲ್ಲಿಗೇ ಇತ್ಯರ್ಥಗೊಂಡಿತ್ತು ಯಾವುದೇ ಪ್ರಕರಣವೂ ದಾಖಲಾಗಿರಲಿಲ್ಲ. ಆದರೆ ಆ ಬಳಿಕ ಹಲ್ಲೆ ಮಾಡಿದ ಪೊಲೀಸ್ ಸಿಬಂದಿಯನ್ನು ಅಮಾನತುಗೊಳಿಸಿ ಆತನ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು.

ಇತ್ತ ಸಾಮಾಜಿಕ ಜಾಲತಾಣದಲ್ಲಿ ಅಮಾಯಕ ಅರ್ಚಕರಿಗೆ ಹೊಡೆದಿರುವ ಸಿಬಂದಿಯ ಮೇಲೆ ಕ್ರಮ ಜರಗಿಸುವಂತೆ ಸಂದೇಶಗಳು ಹರಿದಾಡತೊಡಗಿದವು ಮಾತ್ರವಲ್ಲದೇ ಈ ಸಿಬ್ಬಂದಿಯ ಮೇಲೆ ಕ್ರಮಕ್ಕೆ ಒತ್ತಾಯಿದಿ ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರುಗಳು ಹೋಗಿದ್ದವು.ಈ ಹಿನ್ನೆಲೆಯಲ್ಲಿ ಪುತ್ತೂರು ವಿಭಾಗದ ಡಿವೈಎಸ್ಪಿ ದಿನಕರ ಶೆಟ್ಟಿ, ಸಹಾಯಕ ಆಯುಕ್ತರು ರವಿವಾರ ಆಗಮಿಸಿ ತನಿಖೆ ನಡೆಸಿ ತೆರಳಿದ್ದಾರೆ.

ಘಟನೆ ಏನು?
ಕುಕ್ಕೆ ಸುಬ್ರಹ್ಮಣ್ಯ ದೇಗುದಲ ಪ್ರಧಾನ ಅರ್ಚಕ ಶ್ರೀನಿವಾಸ್ ಅವರು ಶನಿವಾರ ಸಂಜೆ ಆದಿ ಸುಬ್ರಹ್ಮಣ್ಯ ದೇಗುಲಕ್ಕೆ ರಾತ್ರಿಯ ಪೂಜೆಗೆ ತೆರಳುತಿದ್ದ ವೇಳೆ ಪೊಲೀಸ್ ಸಿಬಂದಿ ಶಂಕರ್ ಲಾಠಿಯಿಂದ  ಹೊಡೆದಿದ್ದರು. ಲಾಕ್ ಡೌನ್ ಇರುವಾಗ ಎಲ್ಲಿಗೆ ಹೋಗುತ್ತಿದ್ದಿರಿ ಎಂದು ಪ್ರಶ್ನಿಸಿದ್ದ.

Advertisement

ಅರ್ಚಕರು ದೇಗುಲದ ಕೀ ತೋರಿಸಿ, ಪೂಜೆಗೆ ತೆರಳುತ್ತಿರುವೆ ಎಂದರೂ ಬಿಡದೆ ಹೊಡೆದಿದ್ದ. ಈ ಸಂದರ್ಭದಲ್ಲಿ ಪೇದೆಯ ಏಟಿನಿಂದ ಅರ್ಚಕರ ಕೈ ಹಾಗೂ ಕಾಲುಗಳಿಗೆ ಗಾಯಗಳಾಗಿತ್ತು. ಈ ಬಗ್ಗೆ ಅರ್ಚಕರು  ಠಾಣೆಗೆ ಹಾಗೂ ದೇಗುಲದ ಸಿಇಒ ಅವರಿಗೆ ದೂರು ನೀಡಿದ್ದರು. ದೇಗುಲದ ಸಿಇಒ ಎಂಎಚ್ ರವೀಂದ್ರ ಅವರು  ಪುತ್ತೂರು ಡಿವೈಎಸ್ಪಿ ಅವರಿಗೆ ದೂರು ನೀಡಿದ್ದರು.

ಅರ್ಚಕರ ಮೇಲೆ ಹಲ್ಲೆ ನಡೆಸಿದ ಪೇದೆ ಅಮಾನತು
ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿ ಶಂಕರ್ ಸಂಸಿ ಆದಿ‌ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರೊರ್ವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ‌ಗಳು ವರದಿ ಪಡೆದು ಪರಿಶೀಲಿಸಿದ್ದು ಮೇಲ್ನೋಟಕ್ಕೆ ಸದರಿ ಸಿಬ್ಬಂದಿಯ ದುರ್ವರ್ತನೆ ಕಂಡುಬಂದಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಸದರಿ ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next