Advertisement

ಪೂರ್ತಿಯಾಗದ ಸುಬ್ರಹ್ಮಣ್ಯಮಂಜೇಶ್ವರ ಅಂತಾರಾಜ್ಯ ಹೆದ್ದಾರಿ ವಿಸ್ತರಣೆ 

04:40 PM Nov 20, 2017 | |

ವಿಟ್ಲ : ಸುಬ್ರಹ್ಮಣ್ಯ – ಮಂಜೇಶ್ವರ ಅಂತಾರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಐದು ವರ್ಷಗಳು ಸಂದರೂ ಕಾಮಗಾರಿ ಅರ್ಧಂಬರ್ಧ ಆಗಿದೆ. ರಸ್ತೆ ವಿಸ್ತರಣೆಯಾಗಿದ್ದರೂ ಕೆಲವೆಡೆ ಸೇತುವೆ ವಿಸ್ತರಣೆ, ತಡೆಗೋಡೆಯಾಗಿಲ್ಲ. ಭೂಸ್ವಾಧೀನಗೊಳಿಸಿದರೂ ಫಲಾನುಭವಿಗಳಿಗೆ ಪರಿಹಾರ ನೀಡಿಲ್ಲ. ಅಪಘಾತ ಸಂಭವಿಸಬಹುದಾದ ಜಾಗದಲ್ಲಿ ಅಪಾಯಕಾರಿ ಸನ್ನಿವೇಶ ಬದಲಾಗಿಲ್ಲ. ಇದು ಪುತ್ತೂರು, ಬುಳೇರಿಕಟ್ಟೆ, ಪುಣಚ, ಕೇಪು, ಅಳಿಕೆ ಗ್ರಾಮಸ್ಥರ ದೂರು.

Advertisement

ಪುಣಚದ ಮೂಲಕ ರಸ್ತೆ
ಸುಬ್ರಹ್ಮಣ್ಯ – ಮಂಜೇಶ್ವರ ಅಂತಾ ರಾಜ್ಯ ಹೆದ್ದಾರಿಯು ಪುತ್ತೂರು, ಬುಳೇರಿಕಟ್ಟೆ, ಪುಣಚ, ಕೇಪು, ಅಳಿಕೆ, ಕನ್ಯಾನ, ಕರೋಪಾಡಿ ಗ್ರಾಮದ ವ್ಯಾಪ್ತಿಯಲ್ಲಿ ಸಾಗಿ ಕೇರಳದ ಮಂಜೇಶ್ವರ ತಾಲೂಕಿಗೆ ಸೇರುತ್ತದೆ. ಈ ಹೆದ್ದಾರಿಯು ಹಳ್ಳಿ ಭಾಗಗಳಲ್ಲಿ ಸಾಗುತ್ತದೆ. ರಸ್ತೆ ಅತ್ಯಂತ ಉಪಯುಕ್ತವಾಗಿದ್ದು, ನಿತ್ಯ ಸಾವಿರಾರು ವಾಹನಗಳು ಹಾಗೂ ಸಾವಿರಾರು ಮಂದಿ ಸಂಚಾರಕ್ಕೆ ಬಳಸುತ್ತಾರೆ.

ಅಪೂರ್ಣ ಕಾಮಗಾರಿ
ಇಲ್ಲಿ ಕೆಲವು ಕಡೆಗಳಲ್ಲಿ ಕಾಮಗಾರಿ ಪೂರ್ತಿಯಾಗಿಲ್ಲ. ಪೂರ್ತಿಯಾದ ಕೆಲ ಕಡೆಗಳಲ್ಲಿ ಡಾಮರು ಕಿತ್ತುಹೋಗಿದೆ. ಹಲವು ಭಾಗದಲ್ಲಿ ರಸ್ತೆಯಲ್ಲಿ ನೀರು ಹರಿಯುತ್ತಿದ್ದರೂ ಚರಂಡಿ ದುರಸ್ತಿಯಾಗಿಲ್ಲ. ದೇವಸ್ಯ, ಮಚ್ಚಿಮಲೆ ಸೇತುವೆಗಳಲ್ಲಿ ಬಿರುಮಲೆ ಗುಡ್ಡದ ಹಾಗೂ ಪರ್ಲಡ್ಕ ಭಾಗದ ನೀರಿನ ಹರಿವು ಹೋಗುತ್ತಿದ್ದರೂ ಅದನ್ನು ಎತ್ತರಿಸುವ ಕಾರ್ಯವಾಗಿಲ್ಲ. ನಿತ್ಯ ಈ ಸೇತುವೆಯಲ್ಲಿ ಸಣ್ಣಪುಣ್ಣ ಅಪಘಾತಗಳು ನಡೆಯುತ್ತಲೇ ಇವೆ. ಇದುವರೆಗೆ ಅಪಘಾತದಿಂದ ಮೂರು ನಾಲ್ಕು ಜೀವಗಳು ಬಲಿಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಆದ್ಯತೆ ನೀಡದಿರುವುದು ನಿತ್ಯ ಸಂಚಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ದೇವಸ್ಯ ಸೇತುವೆ ವಿಸ್ತರಣೆಯಾಗಿಲ್ಲ. ವೆಂಕಟನಗರ ಕಾಲೇಜಿನಲ್ಲಿ ತಿರುವು, ಹಲವು ಕಡೆ ತಿರುವುಗಳ ಕಾಮಗಾರಿ ಅವೈಜ್ಞಾನಿಕವಾಗಿದೆ.

ಸಣ್ಣ ತೊರೆಗೆ ಬೃಹತ್‌ ಯೋಜನೆ
ಅಟ್ಲಾರು ಎಂಬಲ್ಲಿ ಸಣ್ಣ ತೊರೆಯಿದ್ದು, ಇದಕ್ಕೆ ಸುಮಾರು 4 ಕೋ.ರೂ. ವೆಚ್ಚದಲ್ಲಿ ಬೃಹತ್‌ ಸೇತುವೆ ನಿರ್ಮಾಣ ಆಗಿದೆ. ಇದರಲ್ಲಿ ಚಣಿಲ ಸಹಿತ 1 ಕಿ.ಮೀ. ಭಾಗದ ನೀರಿನ ಹರಿವು ಮಾತ್ರ ಇದೆ. ಇಲ್ಲಿಗೆ ಇಂತಹ ಬೃಹತ್‌ ಯೋಜನೆ ಅಗತ್ಯವಿರಲಿಲ್ಲ.

ರೈತನ ಸಮಸ್ಯೆ ಕೇಳುವವರಿಲ್ಲ!
ಅಟ್ಲಾರು ಹಳೆ ಸೇತುವೆ ಸಾಕಷ್ಟು ಅಗಲವಾಗಿದ್ದರೂ ಎತ್ತರವಿಲ್ಲ ಎಂಬ ನೆಪದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ಹೊಸ ಸೇತುವೆಗೆ ಕೃಷಿಕರ ಜಾಗವನ್ನು ಸ್ವಾಧೀನಪಡಿಸಿ ಇನ್ನೂ ಪರಿಹಾರ ವಿತರಿಸಿಲ್ಲ ಎನ್ನಲಾಗಿದೆ. ಕೃಷಿಕ ಧನಂಜಯ ರೈ ಅವರಿಗೆ ಸೇರಿದ 24 ಸೆಂಟ್ಸ್‌ ಕೃಷಿ ಜಾಗದಲ್ಲಿ ಸೇತುವೆ ನಿರ್ಮಾಣವಾಗಿದೆ. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಅವರಿಗೆ ಹಣದ
ಆವಶ್ಯಕತೆಯಿದ್ದು, ಪರಿಹಾರ ಮೊತ್ತವನ್ನು ಶೀಘ್ರದಲ್ಲಿ ಅಪೇಕ್ಷಿಸುತ್ತಿದ್ದಾರೆ. ಮೂಲದ ಪ್ರಕಾರ ಸೋಮವಾರ ಅನುದಾನ ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Advertisement

ರೈತ ಸಂಘದಿಂದ ತೀವ್ರ ಹೋರಾಟ 
ಅತಿ ಅಗತ್ಯವಿರುವ ಪ್ರದೇಶಗಳಲ್ಲಿ ಸೇತುವೆ ನಿರ್ಮಿಸಿಲ್ಲ. ಯಾವುದೇ ಅಪಘಾತ ಸಂಭವಿಸದ ಅಟ್ಲಾರು ಸೇತುವೆಯನ್ನು ಬೃಹತ್‌ ಮೊತ್ತ ಬಳಸಿಕೊಂಡು ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ವಿಶೇಷ ತನಿಖೆಯಾಗಬೇಕು. ಕೃಷಿಕರ ಜಾಗವನ್ನು ಕಬಳಿಸಿ ಪರಿಹಾರ ಕೊಡದೆ ಸತಾಯಿಸುತ್ತಿರುವ ಬಗ್ಗೆಯೂ ದೂರುಗಳು ಬರುತ್ತಿವೆ. ಸಂಬಂಧ ಪಟ್ಟವರು ತತ್‌ಕ್ಷಣ ಪರಿಹಾರ ಒದಗಿಸದಿದ್ದಲ್ಲಿ, ರೈತ ಸಂಘವು ತೀವ್ರರೀತಿಯ ಹೋರಾಟ ನಡೆಸಬೇಕಾಗುತ್ತದೆ.
ಶ್ರೀಧರ ಶೆಟ್ಟಿ ಬೆ„ಲುಗುತ್ತು,
  ಪುಣಚ, ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದ. ಕ.

ಇಲ್ಲಿ ಅತ್ಯಗತ್ಯವಾದ ಮಣಿಲ, ದೇವಸ್ಯ ಹಾಗೂ ಮಚ್ಚಿಮಲೆ ಸೇತುವೆ ಮಾತ್ರ ಅನುದಾನವಿಲ್ಲದ ನೆಪದಲ್ಲಿ ಇನ್ನೂ ಕಿರಿದಾಗಿಯೇ ಉಳಿದುಕೊಂಡಿವೆ. ಇಲ್ಲಿ ಅಪಘಾತಗಳ ಸಂಭವನೀಯತೆ ಜಾಸ್ತಿ. ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿವೆ. ಬೊಳ್ಳಣ ಮತ್ತು ಬೇಜಾರದಲ್ಲಿ ಅಪಘಾತ ವಲಯವಾಗಿದೆ. ಅದಕ್ಕೆ ಸೂಕ್ತ ಕ್ರಮ ಕೈಗೊಂಡಿಲ್ಲ.
– ಗ್ರಾಮಸ್ಥರು

ಉದಯಶಂಕರ್‌ ನೀರ್ಪಾಜೆ 

Advertisement

Udayavani is now on Telegram. Click here to join our channel and stay updated with the latest news.

Next