ನಾಲ್ಕು ತಲೆಮಾರುಗಳಿಂದ ಯಕ್ಷ ಆರಾಧನೆ ಮಾಡುತ್ತಿರುವ ಹಳ್ಳಾಡಿ ಮಲ್ಯ ಮನೆತನದ ಯಕ್ಷಮೇರು ಪ್ರತಿಭೆ ದಿ. ಸುಬ್ರಾಯ ಮಲ್ಯರ ಸಂಸ್ಮರಣಾರ್ಥ ಇವರ ಮಗಳಾದ ಯಕ್ಷ ಕಲಾವಿದೆ ಕಿರಣ್ ಪೈ ತಮ್ಮ “ಸುಮುಖ’ ಕಲಾ ಕೇಂದ್ರದ ಮೂಲಕ ನೀಡುತ್ತಿರುವ ಹಳ್ಳಾಡಿ ಸುಬ್ರಾಯ ಮಲ್ಯ ಪ್ರಶಸ್ತಿಗೆ ಈ ಬಾರಿ ಗುಡ್ಡೆಹಿತ್ಲುವಿನ ಜಿ.ಎಂ. ಸುಬ್ರಹ್ಮಣ್ಯ ಭಟ್ ಆಯ್ಕೆಯಾಗಿದ್ದಾರೆ.
63ರ ಹರೆಯದ ಸುಬ್ರಹ್ಮಣ್ಯ ಭಟ್ ಬಹುಮುಖ ಯಕ್ಷ ಪ್ರತಿಭೆ. ಭಾಗವತ, ಅರ್ಥದಾರಿ, ವೇಷಧಾರಿ, ಹಾಸ್ಯಗಾರ, ಯಕ್ಷಗುರು, ಸಂಘಟಕರಾಗಿ ಕಳೆದ ನಾಲ್ಕು ದಶಕಗಳಿಂದ ಅವಿರತ ಯಕ್ಷ ಸಂಗ ಇಟ್ಟುಕೊಂಡು ಸೇವೆ ಸಲ್ಲಿಸುತ್ತಿದ್ದಾರೆ.
ವೀರಭದ್ರ ನಾಯ್ಕ ಮತ್ತು ಹೆರಂಜಾಲು ವೆಂಕಟರಮಣ ಗಾಣಿಗರಿಂದ ನೃತ್ಯಾಭ್ಯಾಸ ಮಾಡಿದ ತರುವಾಯ ನಾರ್ಣಪ್ಪ ಉಪ್ಪೂರರಿಂದ ಭಾಗವತಿಕೆ ಕಲಿತರು. 1977ರಿಂದ ಮೇಳಗಳೊಂದಿಗೆ ಒಡನಾಟವಿರಿಸಿ, ಶಿವರಾಜಪುರ ಮೇಳ, ಅಮೃತೇಶ್ವರಿ, ಪೆರ್ಡೂರು, ಸಾಲಿಗ್ರಾಮ, ಮಾರಣಕಟ್ಟೆ, ಮಂದಾರ್ತಿ, ತೀರ್ಥಹಳ್ಳಿ, ಸೋಮವಾರ ಸಂತೆ , ಎಡಹಳ್ಳಿ ಮೇಳ, ಮಡಾಮಕ್ಕಿ, ಹಾಲಾಡಿ ಮೇಳಗಳಲ್ಲಿ ಯಕ್ಷ ಪ್ರತಿಭೆಯನ್ನು ಧಾರೆ ಎರೆದಿದ್ದಾರೆ. ಭೀಷ್ಮ, ಬಲರಾಮ, ಬ್ರಹ್ಮ, ಹನೂಮಂತ, ಜಾಂಬವ, ಕಂದರ, ಕಾಳಿಂಗ, ಪಾಪಣ್ಣ , ರಕ್ತಜಂಗ ಇತ್ಯಾದಿ ಪಾತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಮೂಡಿಸಿದ್ದಾರೆ. ನೃತ್ಯಗುರುವಾಗಿ ಇದೀಗ ರಾಮಚಂದ್ರ ಮಠದ ಭಾರತಿ ಗುರುಕುಲ ಮತ್ತು ಸಾಗರದ ತುಮರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಕಡೆ ಯಕ್ಷ ತರಬೇತಿ ನಡೆಸಿದ್ದಾರೆ. ಪ್ರಸಂಗ ರಚನೆಯಲ್ಲೂ ತೊಡಗಿಸಿದ್ದಾರೆ. ದೂರದರ್ಶನ/ಆಕಾಶವಾಣಿಯಲ್ಲೂ ಯಕ್ಷ ಪ್ರಸಾರದ ಕೈಂಕರ್ಯದಲ್ಲೂ ತೊಡಗಿಸಿದ್ದಾರೆ. ಇವರು ಸೃಜಿಸಿದ ಹಲವಾರು ಯಕ್ಷ ಪ್ರತಿಭೆಗಳು ಖ್ಯಾತನಾಮರಾಗಿ ನಮ್ಮ ಯಕ್ಷರಂಗದ ನಾನಾ ಮೇಳಗಳಲ್ಲಿ ಮಿಂಚುತ್ತಿದ್ದಾರೆ.
– ಸಂದೀಪ್ ನಾಯಕ್ ಸುಜೀರ್