ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ 1998ನೇ ಸಾಲಿನ ಕೆಎಎಸ್ ನೇಮಕಾತಿ ಹಗರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್‌ನ ವಿಭಾಗೀಯ ಪೀಠದ ತೀರ್ಪಿನ ಪ್ರಕಾರ ಕೊನೆಗೂ 140 ಅಧಿಕಾರಿಗಳಿಗೆ ಹಿಂಬಡ್ತಿ-ಮುಂಬಡ್ತಿ ಕುರಿತ ಆದೇಶವನ್ನು ಸಿದ್ಧಪಡಿಸಿರುವ ರಾಜ್ಯ ಸರ್ಕಾರ ಮಂಗಳವಾರ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಹೈಕೋರ್ಟ್‌ನ 2016ರ ಜೂ.21ರ ಆದೇಶ ಜಾರಿಗೊಳಿಸದಿರುವುದರ ವಿರುದ್ಧ ಎಸ್.ಶ್ರೀನಿವಾಸ್ ಮತ್ತಿತರ ಅಭ್ಯರ್ಥಿಗಳು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿತ್ತಿರುವ ನ್ಯಾ. ಬಿ.ವಿ. ನಾಗರತ್ನ ಹಾಗೂ ನ್ಯಾ. ಎಚ್.ಟಿ. ನರೇಂದ್ರಪ್ರಸಾದ್ ಅವರ ವಿಭಾಗೀಯ ನ್ಯಾಯಪೀಠಕ್ಕೆ ರಾಜ್ಯ ಸರ್ಕಾರ ಈ ಆದೇಶ ಸಲ್ಲಿಸಿತು.
ಸರ್ಕಾರದ ಸಲ್ಲಿಸಿದ ಆದೇಶದಲ್ಲಿ ಪರಿಷ್ಕೃತ ಪಟ್ಟಿಯ 140 ಅಧಿಕಾರಿಗಳ ಪೈಕಿ 115 ಮಂದಿ ಮಾತ್ರ ಸೇವೆಯಲ್ಲಿದ್ದು, ಉಳಿದವರಲ್ಲಿ ಕೆಲವರು ಸೇವಾ ನಿವೃತ್ತಿ ಹೊಂದಿದ್ದರೆ, ಇನ್ನೂ ಕೆಲವರು ಸೇವೆಗೆ ರಾಜಿನಾಮೆ ಸಲ್ಲಿಸಿದ್ದಾರೆ.
ಹಾಗಾಗಿ, 115 ಅಧಿಕಾರಿಗಳ ಸ್ಥಾನ ಅದಲು-ಬದಲು ಆದೇಶ ಸಿದ್ಧಪಡಿಸಲಾಗಿದೆ. ಸ್ಥಾನಪಲ್ಲಟಗೊಂಡ ಅಧಿಕಾರಿಗಳ ಪೈಕಿ 51 ಚುನಾವಣಾ ಕರ್ತವ್ಯದಲ್ಲಿ ಇರುವುದರಿಂದ ಮತ್ತು ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಆದೇಶ ಜಾರಿ ಮಾಡಲಾಗಿಲ್ಲ. ಅದಕ್ಕಾಗಿ ಏ.25ರವರೆಗೆ ಕಾಲಾವಲಾಶ ನೀಡಬೇಕು ಎಂದು ಸರ್ಕಾರ ಕೋರಿತು.
ಕೆಎಟಿಯಿಂದ ತಡೆಯಾಜ್ಞೆ: ಹಿಂಬಡ್ತಿ ಪಟ್ಟಿಯಲ್ಲಿದ್ದ ಆರು ಮಂದಿ ಅಧಿಕಾರಿಗಳಾದ ಕರೀಗೌಡ, ಕವಿತಾ ಎಸ್. ಮಣ್ಣಿಕೇರಿ, ಜಿ.ಸಿ. ವೃಷಬೇಂದ್ರಮೂರ್ತಿ, ಶಿವಾನಂದ ಕಾಪ್ಸೆ, ಎಚ್. ಬಸವರಾಜೇಂದ್ರ ಮತ್ತು ಎಚ್.ಎಸ್. ಗೋಪಾಲಕೃಷ್ಣ ಈಗಾಗಲೇ ಐಎಎಸ್ ಹುದ್ದೆಗೆ ಮುಂಬಡ್ತಿ ಪಡೆದುಕೊಂಡಿದ್ದಾರೆ. ಈ ಅಧಿಕಾರಿಗಳು ಕೇಂದ್ರೀಯ ಆಡಳಿತ ನ್ಯಾಯಮಂಡಳಿಯಿಂದ (ಸಿಎಟಿ) ತಡೆಯಾಜ್ಞೆ ಪಡೆದುಕೊಂಡಿದ್ದಾರೆ ಎಂದು ಅಡ್ವೋಕೇಟ್ ಜನರಲ್ ಅವರು ನ್ಯಾಯಪೀಠದ ಗಮನಕ್ಕೆ ತಂದರು.