ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದಲ್ಲಿ ಹಾಗೂ ಧಾರವಾಡದ ಜುಬಿಲಿ ವೃತ್ತದಲ್ಲಿ ಫ್ಲೈಓವರ್ ನಿರ್ಮಿಸುವ ಕುರಿತ ವಿಸ್ತೃತ ಯೋಜನಾ ವರದಿ (ಡಿಪಿಆರ್) 15 ದಿನಗಳಲ್ಲಿ ಸಲ್ಲಿಕೆಯಾಗಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು.ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಫ್ಲೈಓವರ್ ಡಿಪಿಆರ್ ಕುರಿತು ಈಗಾಗಲೇ ಸಭೆ ನಡೆಸಲಾಗಿದೆ.
ಸಲಹೆಗಾರರಿಂದ ಸಲಹೆ ಪಡೆಯಲಾಗಿದ್ದು, ಡಿಪಿಆರ್ ಸಲ್ಲಿಕೆಯಾದ ನಂತರ ದೆಹಲಿಯಿಂದ ಅನುಮೋದನೆ ಪಡೆದ ನಂತರ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದರು.ಎರಡೂ ಫ್ಲೈಓವರ್ ಗಳ ಉದ್ದ ಹೆಚ್ಚಾಗಿದ್ದರಿಂದ ಒಟ್ಟು 800ರಿಂದ 900 ಕೋಟಿ ರೂ. ವೆಚ್ಚ ತಗುಲಬಹುದಾಗಿದ್ದು, ಈಗಾಗಲೇ ಕೇಂದ್ರ ಸರ್ಕಾರದಿಂದ 300 ಕೋಟಿ ರೂ. ಬಂದಿದೆ.
ಉಳಿದ ಅನುದಾನವನ್ನು ಕೇಂದ್ರದಿಂದ ಕೊಡಿಸಲು ಪ್ರಯತ್ನಿಸಲಾಗುವುದು. ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸುವುದು ಮುಖ್ಯ ಎಂದರು. ಬಿಆರ್‌ಟಿಎಸ್ ಕಾಮಗಾರಿ ವಿಳಂಬ ಆಗುತ್ತಿರುವುದರ ಕುರಿತು ನಗರಾಭಿವೃದ್ಧಿ ಇಲಾಖೆ ಆಯುಕ್ತ ದರ್ಪಣ ಜೈನ್‌ರೊಂದಿಗೆ ಚರ್ಚಿಸಲಾಗಿದೆ.
ಕಾರ್ಯ ತ್ವರಿತಗೊಳಿಸುವಂತೆ ಸೂಚಿಸಲಾಗಿದೆ. ನವೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳಿಲ್ಲ. ಬಿಆರ್‌ಟಿಎಸ್ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ವರೆಗೆ ಪಕ್ಕದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದರು.
ಧಾರವಾಡ ಜಿಲ್ಲೆಯ ರಸ್ತೆ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ 468 ಕೋಟಿ ರೂ. ಅನುದಾನದಲ್ಲಿ ಕೇವಲ 200 ಕೋಟಿ ರೂ. ಯೋಜನೆಗೆ ಮಾತ್ರ ಟೆಂಡರ್ ಕರೆಯಲಾಗಿದೆ. ಉಳಿದ ಮೊತ್ತದ ಟೆಂಡರ್ ಕರೆಯುವಂತೆ ಹಲವು ಬಾರಿ ಆಗ್ರಹಿಸಲಾಗಿದೆ. ಕೇಂದ್ರ ಸರ್ಕಾರ ಅನುದಾನ ನೀಡಿದರೂ ರಾಜ್ಯ ಸರ್ಕಾರ ಟೆಂಡರ್ ಕರೆಯಲು ಹಿಂದೇಟು ಹಾಕುತ್ತಿರುವುದು ಖಂಡನಾರ್ಹ ಎಂದರು.
ವಿನಯ್‌ಗೆ ಮಾನಸಿಕ ಸಮಸ್ಯೆ: ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿಗೆ ಮಾನಸಿಕ ಸಮಸ್ಯೆಯಿದೆ. ಜಿಲ್ಲಾಮಟ್ಟದ ಸಭೆಗಳನ್ನು ತಾವೂ ಆಯೋಜಿಸುವುದಿಲ್ಲ. ನಾವು ಸಭೆ ಆಯೋಜಿಸಿದರೆ ಅದಕ್ಕೆ ಅವಕಾಶ ನೀಡುವುದಿಲ್ಲ. ನಾವು ಸಭೆ ಮಾಡಿದರೆ ಯಾಕೆ ಮಾಡುತ್ತೀರಿ ಅಂತ ವಿವಾದ ಮಾಡುತ್ತಾರೆ.
ಅಲ್ಲದೇ ಸಭೆಯಲ್ಲಿ ಪಾಲ್ಗೊಳ್ಳದಂತೆ ಅಧಿಕಾರಿಗಳಿಗೆ ತಾಕೀತು ಮಾಡುತ್ತಾರೆ ಎಂದರು. ಸಚಿವ ವಿನಯ ಕುಲಕರ್ಣಿಗೆ ಜಿಲ್ಲೆಯ ಅಭಿವೃದ್ಧಿಯ ಕಾಳಜಿ ಇಲ್ಲ. ಸಚಿವರಿಗೆ ತಾಕತ್ತಿದ್ದರೆ, ಅವರು ತಮ್ಮ ಪ್ರಭಾವ ಬಳಸಿ ಮಹಾನಗರ ಪಾಲಿಕೆ ನಿವೃತ್ತರ ಬಾಕಿ ಪಿಂಚಣಿ ಮೊತ್ತವನ್ನು ರಾಜ್ಯ ಸರ್ಕಾರದಿಂದ ಕೊಡಿಸುವ ಕೆಲಸ ಮಾಡಲಿ. ಈ ಮೊತ್ತದಿಂದ ಅವಳಿ ನಗರದ ಎಲ್ಲ ರಸ್ತೆಗಳ ಅಭಿವೃದ್ಧಿ ಮಾಡಬಹುದು ಎಂದು ಹೇಳಿದರು.