Advertisement

ಸೌಜನ್ಯಾ ಪ್ರಕರಣ ನ್ಯಾಯಾಂಗ ತನಿಖೆಗೆ ಒಪ್ಪಿಸಿ

10:32 AM Aug 03, 2023 | Team Udayavani |

ಬೆಳ್ತಂಗಡಿ: ಪಾಂಗಾಳದ ಸೌಜನ್ಯಾ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣವು ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಕಪ್ಪು ಚುಕ್ಕೆ. ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿದ ಅನಂತರವೂ ಸೌಜನ್ಯಾಗೆ ನ್ಯಾಯ ಸಿಗಲಿಲ್ಲ. ಆದ್ದರಿಂದ ಈ ಪ್ರಕರಣವನ್ನು ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ಮುಖಾಂತರ ಮರು ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಿ, ರಹಸ್ಯವನ್ನು ಭೇದಿಸಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಆಗ್ರಹಿಸುವುದಾಗಿ ವಿಶ್ವ ಹಿಂದೂ ಪರಿಷತ್‌ನ ದ.ಕ. ಪ್ರಾಂತ್ಯ ಕಾರ್ಯಾಧ್ಯಕ್ಷ ಡಾ| ಎಂ.ಬಿ. ಪುರಾಣಿಕ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಸೌಜನ್ಯಾಳ ನ್ಯಾಯಕ್ಕೋಸ್ಕರ ಪ್ರಾಮಾಣಿಕವಾಗಿ, ನ್ಯಾಯ ಸಮ್ಮತ ವಾಗಿ ಹೋರಾಟ ಮಾಡುವ ಸಂಘಟನೆಗಳನ್ನು ವಿಹಿಂಪ ಬೆಂಬಲಿಸುತ್ತದೆ. ಮುಗ್ಧ ಹೆಣ್ಣು ಮಗಳ ಹತ್ಯೆ ಪ್ರಕರಣ ಆದಷ್ಟು ಬೇಗ ಇತ್ಯರ್ಥವಾಗಿ ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತೆ, ಜಿಲ್ಲೆಯ ಎಲ್ಲ ದೇವಸ್ಥಾನ, ದೈವಸ್ಥಾನ ಹಾಗೂ ಮಠ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವಂತೆ ಕರೆ ನೀಡುವುದಾಗಿಯೂ ತಿಳಿಸಿದರು.

ಡಾ| ಹೆಗ್ಗಡೆ, ಧರ್ಮಸ್ಥಳಕ್ಷೇತ್ರದ ಅವಹೇಳನ ಸಹಿಸೆವುಳ

ಧರ್ಮ ನೆಲೆಸಿರುವ ಸ್ಥಳವೇ ಧರ್ಮಸ್ಥಳ ಎಂಬುದು ಭಕ್ತರ ನಂಬಿಕೆ. ಹಾಗಾಗಿ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ತೆರಳಿ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿಯ ದರ್ಶನ ಪಡೆಯುತ್ತಾರೆ. ಅಂತಹ ಕಾರಣಿಕ ಕ್ಷೇತ್ರವನ್ನು ಹಾಗೂ ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಸೌಜನ್ಯಾ ಕೊಲೆ ಪ್ರಕರಣ ಹೋರಾಟದ ಹೆಸರಿನಲ್ಲಿ ಅವಹೇಳನ ಮಾಡುವುದು,  ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತರುವ ಹೇಳಿಕೆಗಳನ್ನು ವಿಹಿಂಪ ಬಲವಾಗಿ ವಿರೋಧಿಸುತ್ತದೆ ಎಂದು ಹೇಳಿದರು.

ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪುವೆಲ್‌, ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್‌ ಶೆಟ್ಟಿ, ವಿಭಾಗ ಸಾಮರಸ್ಯ ಪ್ರಮುಖ್‌ ಭಾಸ್ಕರ ಧರ್ಮಸ್ಥಳ, ಪುತ್ತೂರು ವಿಭಾಗದ ಜಿಲ್ಲಾ ಕಾರ್ಯದರ್ಶಿ ನವೀನ್‌ ನೆರಿಯ, ದಿನೇಶ್‌ ಚಾರ್ಮಾಡಿ ಉಪಸ್ಥಿತರಿದ್ದರು.

Advertisement

ಉಜಿರೆ: ನಾಳೆ ಶ್ರೀ ಮಂಜುನಾಥ  ಸ್ವಾಮಿ ಭಕ್ತವೃಂದದ ಸಮಾವೇಶ:

ಬೆಳ್ತಂಗಡಿ: ಸಾಮಾಜಿಕ ಜಾಲತಾಣಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪ, ಅವಹೇಳನಕಾರಿ ಹೇಳಿಕೆ ಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅಖೀಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದವು ಆ. 4ರಂದು ಬೆಳಗ್ಗೆ 10 ಗಂಟೆಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ರಥಬೀದಿಯಲ್ಲಿ ಸಾರ್ವಜನಿಕ ಬೃಹತ್‌ ಸಮಾವೇಶ ಹಮ್ಮಿಕೊಂಡಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಧರ್ಮಸ್ಥಳ

ಶ್ರೀ ಮಂಜುನಾಥ ಸ್ವಾಮಿಯ ಭಕ್ತರು, ವಿವಿಧ ಸಂಘ-ಸಂಸ್ಥೆಯವರು ಜು. 31ರಂದು ಸಭೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಡಾ| ಎಲ್‌.ಎಚ್‌. ಮಂಜುನಾಥ್‌, ಜಿ. ವಿಜಯ್‌ ಅರಳಿ, ನಾಗೇಶ್‌ ಬಿ., ಪ್ರಕಾಶ್‌ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

11 ವರ್ಷಗಳ ಹಿಂದೆ ಧರ್ಮಸ್ಥಳ ದಲ್ಲಿ ನಡೆದ ಬಾಲಕಿಯೋರ್ವಳ ಹತ್ಯೆ ಪ್ರಕರಣಕ್ಕೆ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯ ದೊರಕಿಸಬೇಕೆಂಬ ಆಗ್ರಹ ಮಾಡಿ ದ್ದಲ್ಲದೆ ಸರಕಾರವು ನಿಷ್ಠುರವಾದ ಕ್ರಮ ಕೈಗೊಳ್ಳಬೇಕೆಂದು ಕ್ಷೇತ್ರದ ಭಕ್ತ ವೃಂದವು ಆಗ್ರಹಿಸಿದೆ. ಆದರೆ ಹತ್ಯೆ ಪ್ರಕರಣದ ಕುರಿತು ಸಿಬಿಐ ಕೋರ್ಟಿನಿಂದ ನೀಡಲಾದ ತೀರ್ಪಿನ ಬಗ್ಗೆ ಮತ್ತು ತದನಂತರದಲ್ಲಿ ಧರ್ಮಸ್ಥಳ ಕ್ಷೇತ್ರ ಮತ್ತು ಡಾ| ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಆರೋಪ ಹೊರಿಸುತ್ತಿರುವವರ ಮೇಲೆ ಸರಕಾರವೇ ಕಠಿನ ಕ್ರಮ ಕೈಗೊಳ್ಳಬೇಕೆಂದು ಹಕ್ಕೊತ್ತಾಯ ಮಾಡಲು ನಿರ್ಧರಿಸಲಾಗಿದೆ.

ಉಭಯ ಜಿಲ್ಲೆಗಳ ಜನತೆ ಸ್ವಪ್ರೇರಣೆ ಯಿಂದ ಸಮಾವೇಶದಲ್ಲಿ ಭಾಗಿಯಾಗಿ ಸತ್ಯ ವಿಷಯಗಳನ್ನು ತಿಳಿಯುವುದಲ್ಲದೇ, ಮುಂದಿನ ದಿನಗಳಲ್ಲಿ ಈ ರೀತಿಯ ಅಪಪ್ರಚಾರ, ಸುಳ್ಳು ಆರೋಪಗಳನ್ನು ನಿಲ್ಲಿಸುವ ಸಲುವಾಗಿ ಜನತಾ ಚಳವಳಿಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next