ಬೆಂಗಳೂರು: ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯ, ಕಾಲೇಜುಗಳ ನ್ಯಾಕ್ ಮಾನ್ಯತೆ, ಎನ್‌ಐಆರ್‌ಎಫ್ ರ್‍ಯಾಂಕ್ ಪಡೆಯುವ ಸಂಬಂಧ 15 ದಿನದೊಳಗೆ ಕ್ರಿಯಾ ಯೋಜನೆ ಸಲ್ಲಿಸುವಂತೆ ಎಲ್ಲ ಕುಲಪತಿಗಳಿಗೆ ಉಪ ಮುಖ್ಯಮಂತ್ರಿಯಾದ ಉನ್ನತ ಶಿಕ್ಷಣ ಸಚಿವ ಡಾ| ಸಿ. ಎನ್. ಅಶ್ವತ್ಥನಾರಾಯಣ ನಿರ್ದೇಶನ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸರಕಾರದ ಎಲ್ಲ ವಿಶ್ವವಿದ್ಯಾನಿಲಯಗಳ ಕುಲಪತಿಗಳ ಸಭೆ ನಡೆಸಿ ಸಚಿವರು ಈ ಸೂಚನೆ ನೀಡಿದರು.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯು ಎನ್‌ಐಆರ್‌ಎಫ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮೈಸೂರು ವಿವಿ-27, ಬೆಂಗಳೂರು ವಿವಿ-68, ಶಿವಮೊಗ್ಗದ ಕುವೆಂಪು ವಿವಿ-73 ಹಾಗೂ ಬೆಳಗಾವಿಯ ವಿಟಿಯು-80ನೇ ಸ್ಥಾನದಲ್ಲಿವೆ. ಮುಂದಿನ ಬಾರಿ ರ್‍ಯಾಂಕಿಂಗ್ ಪಟ್ಟಿ ಸಿದ್ಧವಾಗುವ ಹೊತ್ತಿಗೆ ಮೈಸೂರು ವಿವಿ-20ರೊಳಗೆ ಹಾಗೂ ಬೆಂಗಳೂರು ವಿವಿ 50 ರೊಳಗಿನ ಸ್ಥಾನಕ್ಕೆ ಬರಬೇಕು. ವಿಟಿಯು ಕೂಡ ಉತ್ತಮ ಸ್ಥಾನಕ್ಕೆ ಬರಬೇಕು. ತುಮಕೂರು ಮತ್ತು ಮಂಗಳೂರು ವಿವಿಗಳು 150ರೊಳಗಿವೆ. ಉಳಿದ ಯಾವ ವಿವಿಗೂ ಈ ರ್‍ಯಾಂಕ್ ಸಿಕ್ಕಿಲ್ಲ ಎಂದರು.
3 ವಿವಿಗಳಿಗೆ ಅರ್ಹತೆಯೇ ಇಲ್ಲ :
ರಾಜ್ಯದ ಸರಕಾರಿ ಸ್ವಾಮ್ಯದ 19 ವಿವಿಗಳ ಪೈಕಿ ಎನ್‌ಐಆರ್‌ಎಫ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಎ-ಅದಕ್ಕಿಂತ ಮೇಲ್ಪಟ್ಟು ಸ್ಥಾನದಲ್ಲಿ 6 ವಿವಿ, ಬಿ-ಸಿ ಹಂತದಲ್ಲಿ 4 ವಿವಿಗಳಿದ್ದರೆ, ಮಾನ್ಯತೆ ಪಡೆದ 9 ವಿವಿಗಳಿವೆ. ಉಳಿದಂತೆ ಇನ್ನೆರಡು ವಿವಿಗಳು ಅರ್ಜಿ ಹಾಕಿವೆ. 3 ವಿವಿಗಳು ಎನ್‌ಐಆರ್‌ಎಫ್ ರ್‍ಯಾಂಕಿಂಗ್‌ಗೆ ಅರ್ಹತೆಯನ್ನೇ ಹೊಂದಿಲ್ಲ ಎಂದು ಡಾ| ಅಶ್ವತ್ಥನಾರಾಯಣ ಮಾಹಿತಿ ನೀಡಿದರು.