Advertisement

ನೀರು ಘಟಕ ನಿರ್ವಹಣೆಗೆ ಪ್ರಸ್ತಾವನೆ ಸಲ್ಲಿಸಿ

09:38 AM Jun 23, 2018 | Team Udayavani |

ದಾವಣಗೆರೆ: ಗ್ರಾಮೀಣ ಭಾಗದಲ್ಲಿ ಅಳವಡಿಸುವ ಶುದ್ಧ ಕುಡಿಯುವ ನೀರು ಘಟಕಗಳ ನಿರ್ವಹಣಾ ವೆಚ್ಚ ಕೋರಿ
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

Advertisement

ಶುಕ್ರವಾರ, ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ವಹಣೆ ಕೊರತೆಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾಗುವ ಶುದ್ಧ ಕುಡಿಯುವ ನೀರು ಘಟಕಗಳು 6 ತಿಂಗಳನಿಂದ ಒಂದು ವರ್ಷದಲ್ಲಿ ಹಾಳಾಗುತ್ತವೆ. ಘಟಕಗಳ ಮೂಲ ಉದ್ದೇಶ ಈಡೇರಿದಂತಾಗುವುದೇ ಇಲ್ಲ.

ಇತರೆ ಕುಡಿಯುವ ನೀರು ಯೋಜನೆ ಮಾದರಿಯಲ್ಲೇ ಸರ್ಕಾರವೇ ಶುದ್ಧ ಕುಡಿಯುವ ನೀರು ಘಟಕಗಳ ನಿರ್ವಹಣಾ
ವೆಚ್ಚ ಭರಿಸುವಂತಾಗಬೇಕು ಎಂದು ದಾವಣಗೆರೆ ತಾಲೂಕು ಪಂಚಾಯತ್‌ ಕಾರ್ಯ ನಿರ್ವಾಹಕಾಧಿಕಾರಿ ಎಲ್‌.ಎಸ್‌.
ಪ್ರಭುದೇವ್‌ ಕೋರಿದರು.

ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣ ಜವಾಬ್ದಾರಿ ಹೊಂದಿರುವ ಕೆಆರ್‌ಐಡಿಎಲ್‌ ಘಟಕ ನಿರ್ಮಿಸಿ, ಗ್ರಾಮ ಪಂಚಾಯತ್‌ಗೆ ವಹಿಸಿದರೆ ಮುಗಿಯಿತು. ಆ ಶುದ್ಧ ಕುಡಿಯುವ ನೀರು ಘಟಕಗಳ ನಿರ್ವಹಣೆ ಗ್ರಾಮ ಪಂಚಾಯತಿಗಳ ಜವಾಬ್ದಾರಿಯಾಗಲಿದೆ. ಶುದ್ಧ ಕುಡಿಯುವ ನೀರು ಘಟಕಗಳಿಂದ ಹೆಚ್ಚು ಆದಾಯ ದೊರೆಯುವುದಿಲ್ಲ.

Advertisement

ಮೇಲಾಗಿ ಗ್ರಾಪಂ ಆದಾಯವೂ ಕಡಿಮೆ ಇರುತ್ತದೆ. ಹಾಗಾಗಿ ಶುದ್ಧ ಕುಡಿಯುವ ನೀರು ಘಟಕಗಳ ನಿರ್ವಹಣೆ ಕಷ್ಟ
ಆಗುತ್ತದೆ. ಪ್ರಾಯೋಗಿಕವಾಗಿಯೂ ತೊಂದರೆ ಎಂಬುದು ಕುಕ್ಕುವಾಡ ಗ್ರಾಮ ಪಂಚಾಯತಿಯಲ್ಲಿ ಗೊತ್ತಾಗಿದೆ.
ಸರ್ಕಾರವೇ ನಿರ್ವಹಣಾ ವೆಚ್ಚ ಭರಿಸದೇ ಹೋದಲ್ಲಿ ಶುದ್ಧ ಕುಡಿಯುವ ನೀರು ಘಟಕಗಳು ಕೆಲವೇ ದಿನಗಳಲ್ಲಿ ಹಾಳಾಗಿ ಹೋಗುತ್ತವೆ. ಜನರಿಗೆ ಕುಡಿಯುವ ನೀರಿಗೆ ತೊಂದರೆ ಆಗುತ್ತದೆ.  

ಲಕ್ಷಾಂತರ ಅನುದಾನ ನಷ್ಟವಾಗುತ್ತದೆ ಎಂದು ಪ್ರಭುದೇವ್‌ ಸಭೆ ಗಮನಕ್ಕೆ ತಂದರು. ಈ ವಿಚಾರವಾಗಿ ಸಾಕಷ್ಟು ಚರ್ಚೆ ನಡೆದ ನಂತರ ಶುದ್ಧ ಕುಡಿಯುವ ನೀರು ಘಟಕಗಳ ಪ್ರಾರಂಭದಿಂದ ಜನಾರೋಗ್ಯದಲ್ಲಿ ಸುಧಾರಣೆ ಕಂಡು
ಬಂದಿರುವ ಅಂಶ ಒಳಗೊಂಡಂತೆ ಇತರೆ ಅಗತ್ಯ ಮಾಹಿತಿಗಳೊಂದಿಗೆ ಶುದ್ಧ ಕುಡಿಯುವ ನೀರು ಘಟಕಗಳ ನಿರ್ವಹಣಾ ವೆಚ್ಚ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಉಮಾಶಂಕರ್‌ ಸೂಚಿಸಿ, ಈ ಬಾರಿಯ ಬಜೆಟ್‌ ಸಿದ್ಧತೆ ಮುಗಿದಿದೆ. 

ಹಾಗಾಗಿ ಮುಂದಿನ ಬಜೆಟ್‌ನಲ್ಲಾದರೂ ನಿರ್ವಹಣಾ ವೆಚ್ಚ ಒದಗಿಸುವ ಬಗ್ಗೆ ಪ್ರಸ್ತಾಪಿಸಬಹುದು. ನಿರ್ವಹಣಾ ವೆಚ್ಚದ
ಬಗ್ಗೆ ಸಂಬಂಧಿತ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿಯೂ ತಿಳಿಸಿದರು. ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌. ಅಶ್ವತಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು
ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next