Advertisement

ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ಸಲ್ಲಿಕೆ

06:55 AM Aug 04, 2018 | |

ಬೆಂಗಳೂರು: ಶಾಲಾ ಶಿಕ್ಷಕರ ವರ್ಗಾವಣೆಯ ಪರಿಷ್ಕೃತ ಮಾರ್ಗಸೂಚಿಯನ್ನು ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗಿದ್ದು, ಸರ್ಕಾರದಿಂದ ಗ್ರೀನ್‌ಸಿಗ್ನಲ್‌ ಸಿಕ್ಕ ತಕ್ಷಣವೇ ಮಾರ್ಗದರ್ಶಿಯನ್ನು ಪ್ರಕಟಿಸಲಾಗುತ್ತದೆ.

Advertisement

ಕಡ್ಡಾಯ ವರ್ಗಾವಣೆ ಸೇರಿ ವರ್ಗಾವಣೆ ಮಾರ್ಗಸೂಚಿ ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳು ಇತ್ಯರ್ಥಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ವರ್ಗಾವಣೆಯ ಪರಿಷ್ಕೃತ ಮಾರ್ಗಸೂಚಿ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ವಿವಿಧ ಕಾರಣಕ್ಕಾಗಿ ವರ್ಗಾವಣೆ ಪ್ರಕ್ರಿಯೆ ವಿಳಂಬವಾಗುತ್ತಲೇ ಇದೆ. ಶೈಕ್ಷಣಿಕ ವರ್ಷದ ಆರಂಭದಲ್ಲೇ ನಡೆಯಬೇಕಿದ್ದ ವರ್ಗಾವಣೆ ಪ್ರಕ್ರಿಯೆ 2 ತಿಂಗಳು ವಿಳಂಬವಾಗಿದೆ. ಕಳೆದ ವರ್ಷ ಕೂಡ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ. ಸಾವಿರಾರು ಶಿಕ್ಷಕರು ವರ್ಗಾವಣೆಗಾಗಿ ಚಾತಕಪಕ್ಷಿಯಂತೆ ಕಾದು ಕುಳಿತಿದ್ದಾರೆ.

ಎರಡು ಮೂರು ದಿನದಲ್ಲಿ ಪ್ರಕಟ: ವರ್ಗಾವಣೆಗೆ ಸುಮಾರು 72 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದೆ. ಕೋರಿಕೆ, ಕಡ್ಡಾಯ ಹಾಗೂ ಶಿಕ್ಷಕ ದಂಪತಿ ವರ್ಗಾವಣೆ ಸೇರಿ ಎಲ್ಲ ರೀತಿಯ ವರ್ಗಾವಣೆ ಅತಿ ಶೀಘ್ರದಲ್ಲಿ ಪೂರ್ಣಗೊಳಿಸಲು ಬೇಕಾದಂತೆ ಪರಿಷ್ಕೃತ ಮಾರ್ಗಸೂಚಿ ರಚನೆಯಾಗಿದೆ. 2-3 ದಿನದಲ್ಲಿ ಕೌನ್ಸೆಲಿಂಗ್‌ ವೇಳಾಪಟ್ಟಿ ಸಹಿತವಾದ ಮಾರ್ಗಸೂಚಿ ಹೊರಡಿಸಲಿದ್ದೇವೆಂದು ಸಾಶಿಇ ಆಯುಕ್ತ ಡಾ.ಪಿ.ಸಿ.ಜಾಫ‌ರ್‌ ತಿಳಿಸಿದರು.

ವರ್ಗಾವಣೆ ಪ್ರಕ್ರಿಯೆ ಆನ್‌ಲೈನ್‌ ಮೂಲಕವೇ ನಡೆಯುವುದರಿಂದ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಯಾವುದೇ ಸಮಸ್ಯೆ, ಗೊಂದಲ ಎದುರಾಗಬಾರದೆಂಬ ಉದ್ದೇಶದಿಂದ ಸಾಫ್ಟ್ವೇರ್‌ ಕಾರ್ಯದಕ್ಷತೆಯ ಪರಿಶೀಲನೆ ನಡೆಸಿದ್ದೇವೆ. ಶೈಕ್ಷಣಿಕ ಚಟುವಟಿಕೆಗೆ ಅಡೆತಡೆಯಾಗದಂತೆ ವೇಳಾಪಟ್ಟಿ ಸಿದ್ಧಪಡಿಸಿದ್ದೇವೆಂಬ ಮಾಹಿತಿ ನೀಡಿದರು.

Advertisement

ಎ ವಲಯ(ನಗರ ಪ್ರದೇಶ)ದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಕಾಲದಿಂದ ಇರುವ ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಲಾಗುತ್ತದೆ. ಮಾರ್ಗಸೂಚಿಯಲ್ಲಿ ನಿಗದಿಪಡಿಸಿದಷ್ಟು ಪ್ರಮಾಣದ ಕಡ್ಡಾಯ ವರ್ಗಾವಣೆ ನಡೆಯುತ್ತದೆ. ಹಾಗೆಯೇ ಬಿ ಹಾಗೂ ಸಿ ವಲಯದಲ್ಲಿ(ಪಟ್ಟಣ ಹಾಗೂ ಗ್ರಾಮೀಣ) ಇರುವ ಶಿಕ್ಷಕರು ನಗರ ಪ್ರದೇಶಕ್ಕೆ ಬರಲು ಕಡ್ಡಾಯ ವರ್ಗಾವಣೆಯಲ್ಲಿ ಅವಕಾಶ ಇದೆ.

ಪದವಿ ಕಾಲೇಜಿನಲ್ಲೂ ವರ್ಗಾವಣೆ
ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದ ವರ್ಗಾವಣೆಗೆ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ನಾಗರಿಕ ಸೇವೆಗಳು(ಕಾಲೇಜು ಶಿಕ್ಷಣ ಇಲಾಖೆಯ ಸಿಬ್ಬಂದಿ ವರ್ಗಾವಣೆ ನಿಯಂತ್ರಣ)ಕಾಯ್ದೆ-2012ರ ಅಧಿನಿಯಮ ಮತ್ತು ನಿಯಮಗಳ ಅನುಸಾರ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಗಸ್ಟ್‌ 7ರ ವರೆಗೂ ಅರ್ಜಿ ಸಲ್ಲಿಸಬಹುದು.

ಆ.9ರಂದು ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಿಸಲಾಗುತ್ತದೆ. ಆ.16ರವರೆಗೆ ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಬಹುದು. ಆ.18ರಂದು ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಿಸಲಾಗುತ್ತದೆ. ಆ.20ರಂದು ಬೋಧಕೇತರ ವಿಶೇಷ ಪ್ರಕರಣಗಳು ಮತ್ತು ಸಾಮಾನ್ಯ ಪ್ರಕರಣಗಳ ಕೌನ್ಸೆಲಿಂಗ್‌, ಆ.21ರಿಂದ 23ರವರೆಗೆ ಬೋಧಕರ ವರ್ಗಾವಣೆ ಕೌನ್ಸೆಲಿಂಗ್‌, ಆ.25ರಿಂದ 28ರವರೆಗೆ ಸಾಮಾನ್ಯ ಪ್ರಕರಣಗಳ ವರ್ಗಾವಣೆ ಕೌನ್ಸೆಲಿಂಗ್‌ ನಡೆಯಲಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

ಹೆಚ್ಚುವರಿ ಉಪನ್ಯಾಸಕರ ಪಟ್ಟಿ
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಕೋರಿಕೆ ಮತ್ತು ಕಡ್ಡಾಯ ವರ್ಗಾವಣೆ ಮುಗಿದ ತಕ್ಷಣವೇ ಜಿಲ್ಲಾವಾರು ಹೆಚ್ಚುವರಿ ಉಪನ್ಯಾಸಕರ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಪಿಯು ಕಾಲೇಜುಗಳ ಪ್ರಾಂಶುಪಾಲರು ಹೆಚ್ಚುವರಿ ಉಪನ್ಯಾಸಕರ ಪಟ್ಟಿ ಸಿದ್ಧಪಡಿಸಿ ಪಿಯು ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸಲಿದ್ದಾರೆ. ಜಿಲ್ಲಾಮಟ್ಟದ ಎಲ್ಲ ಕಾಲೇಜುಗಳ ಮಾಹಿತಿ ಸಂಗ್ರಹಿಸಿ ಅದನ್ನು ಕೇಂದ್ರ ಕಚೇರಿಗೆ ಪಿಯು ಡಿಡಿಪಿಐಗಳು ಕಳುಹಿಸಿಕೊಡಲಿದ್ದಾರೆಂದು ಪಿಯು ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next