Advertisement

ಆಸ್ತಿ ಮಾಹಿತಿ ಸಲ್ಲಿಕೆ ನಿರಾಸಕ್ತಿ;  ಶಾಸಕರಿಂದ ಕಾಯ್ದೆ ಉಲ್ಲಂಘನೆ

06:00 AM Jul 26, 2018 | |

ಬೆಂಗಳೂರು: ಲೋಕಾಯುಕ್ತ ಸಂಸ್ಥೆ ಬಲಪಡಿಸುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಜೆಡಿಎಸ್‌, ಬಿಜೆಪಿ ಪಕ್ಷಗಳು ಹಾಗೂ ಕಾಂಗ್ರೆಸ್‌ಗೆ ಸೇರಿದ 92 ಮಂದಿ ಶಾಸಕರು, 33 ಮಂದಿ ಪರಿಷತ್‌ ಸದಸ್ಯರು ಆಸ್ತಿ ವಿವರ ಸಲ್ಲಿಸದೇ ಲೋಕಾಯುಕ್ತ ಕಾಯ್ದೆ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಸ್ವತಃ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೇರಿ ಅನೇಕ ಹಿರಿಯ ನಾಯಕರು ಗಡುವು ಮುಗಿದ ಬಳಿಕ ಸಲ್ಲಿಸಿದ್ದಾರೆ.

Advertisement

ಸಚಿವರಾದ ಎಚ್‌.ಡಿ. ರೇವಣ್ಣ, ಡಿ.ಸಿ. ತಮ್ಮಣ್ಣ, ಸಿ.ಎಸ್‌. ಪುಟ್ಟರಾಜು, ಜಮೀರ್‌ ಅಹಮ್ಮದ್‌ ಖಾನ್‌, ಬಂಡೆಪ್ಪ ಕಾಶಂಪೂರ, ವೆಂಕಟರಮಣಪ್ಪ, ಎನ್‌.ಮಹೇಶ್‌, ಜಯಮಾಲ, ಶಾಸಕರಾದ ಬಿಜೆಪಿಯ ಬಿ. ಶ್ರೀರಾಮುಲು, ಜೆಡಿಎಸ್‌ನ ಎಚ್‌. ವಿಶ್ವನಾಥ್‌, ಎ.ಟಿ. ರಾಮಸ್ವಾಮಿ, ಕಾಂಗ್ರೆಸ್‌ನ ಡಾ.ಕೆ ಸುಧಾಕರ್‌ ಕೂಡ ಈವರೆಗೂ ಆಸ್ತಿ ವಿವರ ಸಲ್ಲಿಸಿಲ್ಲ. ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರೂ ಇದುವರೆಗೆ ತಮ್ಮ ಆಸ್ತಿ ವಿವರ ಸಲ್ಲಿಸಿಲ್ಲ.

ಲೋಕಾಯುಕ್ತ ಕಾಯ್ದೆಯ ಪ್ರಕಾರ, ಪ್ರತಿವರ್ಷ ಜೂ.30ರ ಒಳಗೆ ಆಸ್ತಿ ಮತ್ತು ದಾಯಿತ್ವ ಪ್ರಮಾಣಪತ್ರವನ್ನು ಲೋಕಾಯುಕ್ತ ಸಂಸ್ಥೆಗೆ ನೀಡಬೇಕು. ಆದರೆ, ಈವರೆಗೆ 2017-18ನೇ ಸಾಲಿನಲ್ಲಿ ಆಸ್ತಿ ವಿವರ ಸಲ್ಲಿಸದ ಶಾಸಕರು ಹಾಗೂ ಪರಿಷತ್‌ ಸದಸ್ಯರ ವಿವರ ಉದಯವಾಣಿಗೆ ಲಭ್ಯವಾಗಿದೆ.

ಒಟ್ಟಾರೆಯಾಗಿ ಬಿಜೆಪಿಯ 37, ಕಾಂಗ್ರೆಸ್‌ನ 28, ಜೆಡಿಎಸ್‌ನ 25, ಬಿಎಸ್‌ಪಿಯ ಒಬ್ಬ ಶಾಸಕ ಹಾಗೂ ಪಕ್ಷೇತರ ಶಾಸಕ ಸೇರಿ ಒಟ್ಟು 92 ಮಂದಿ ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ. ಇನ್ನು ಮೇಲ್ಮನೆ ಸದಸ್ಯರಲ್ಲೂ 33 ಮಂದಿ ಕೂಡ ಇದೇ ಸಾಲಿನಲ್ಲಿ ನಿಂತಿದ್ದಾರೆ. ಮತ್ತೂಂದೆಡೆ 2016-17ನೇ ಸಾಲಿನಲ್ಲಿ ಶಾಸಕರಾಗಿದ್ದ ರಾಜ ವೆಂಕಟಪ್ಪ ನಾಯಕ, ಪರಿಷತ್‌ ಸದಸ್ಯರಾದ ಆರ್‌.ಬಿ. ತಿಮ್ಮಾಪುರ, ಕೆ.ಟಿ. ಶ್ರೀಕಂಠೇಗೌಡ ಕೂಡ ಈವರೆಗೆ ಆಸ್ತಿವಿವರ ಸಲ್ಲಿಸಲು ಆಸಕ್ತಿ ತೋರಿಲ್ಲ.

ಪ್ರಮುಖ ಶಾಸಕರು :
ಈಶ್ವರ ಬಿ. ಖಂಡ್ರೆ, ರಹೀಮ್‌ ಖಾನ್‌, ಅರವಿಂದ ಬೆಲ್ಲದ್‌, ಡಾ. ಅಂಜಲಿ ಹೇಮಂತ್‌ ನಿಂಬಾಳ್ಕರ್‌, ಪಿ.ಟಿ. ಪರಮೇಶ್ವರ ನಾಯಕ್‌, ಎಂ.ಪಿ. ರೇಣುಕಾಚಾರ್ಯ, ಕುಮಾರ್‌ ಬಂಗಾರಪ್ಪ, ಡಿ.ಸಿ. ಗೌರಿಶಂಕರ್‌, ಬಿ. ಸತ್ಯನಾರಾಯಣ, ಎಸ್‌.ಟಿ. ಸೋಮಶೇಖರ್‌, ಎಂಟಿಬಿ ನಾಗರಾಜು, ಅಖಂಡ ಶ್ರೀನಿವಾಸ ಮೂರ್ತಿ, ನಿಸರ್ಗ ನಾರಾಯಣಸ್ವಾಮಿ, ಎಂ. ರೂಪಕಲಾ, ಬಿ.ಶಿವಣ್ಣ, ಹರೀಶ್‌ ಪೂಂಜಾ, ಡಾ. ಭರತ್‌ ಶೆಟ್ಟಿ, ಬಿ. ಹರ್ಷವರ್ದನ್‌, ಉಮಾನಾಥ್‌ ಕೊಟ್ಯಾನ್‌, ಟಿ ವೆಂಕಟರಮಣಯ್ಯ.

Advertisement

ಪ್ರಮುಖ ಪರಿಷತ್‌ ಸದಸ್ಯರು:
ಸಿ.ಎಂ. ಇಬ್ರಾಹಿಂ, ಪಿ.ಆರ್‌. ರಮೇಶ್‌, ಡಾ. ತೇಜಸ್ವಿನಿ ಗೌಡ, ರಿಜ್ವಾನ್‌ ಹರ್ಷದ್‌, ಟಿ.ಎ. ಶರವಣ , ಕೆ.ಟಿ. ಶ್ರೀಕಂಠೇಗೌಡ,  ಕೆ.ಪಿ. ನಂಜುಂಡಿ, ಎನ್‌.  ರವಿಕುಮಾರ್‌, ಬಿ.ಎಂ. ಫಾರೂಕ್‌, ಎಸ್‌.ರವಿ,  ಪ್ರದೀಪ್‌ ಶೆಟ್ಟರ್‌, ಅಲ್ಲಂ ವೀರಭದ್ರಪ್ಪ, ಆರ್‌. ಧರ್ಮಸೇನಾ, ಆರ್‌.ಬಿ. ತಿಮ್ಮಾಪುರ, ಆಯನೂರು ಮಂಜುನಾಥ್‌.

ಸಲ್ಲಿಸದಿದ್ದರೆ ಏನಾಗುತ್ತದೆ?
ಲೋಕಾಯುಕ್ತ ಕಾಯಿದೆ ಸೆಕ್ಷನ್‌ 22(1) (2)ರ ಅನ್ವಯ ಎಲ್ಲ ಶಾಸಕರು ಹಾಗೂ ಪರಿಷತ್‌ ಸದಸ್ಯರು ಪ್ರತಿವರ್ಷ ಜೂ. 30ರೊಳಗೆ ತಮ್ಮ ಆಸ್ತಿ ವಿವರ ಹಾಗೂ ದಾಯಿತ್ವ  ಪ್ರಮಾಣಪತ್ರ ಸಲ್ಲಿಸಬೇಕು. ಈ ಮಾಹಿತಿ ನೀಡದಿದ್ದಲ್ಲಿ ಲೋಕಾಯುಕ್ತರು ನಿಯಮ ಉಲ್ಲಂ ಸಿದ ಶಾಸಕರಿಗೆ ನೋಟಿಸ್‌ ಜಾರಿಗೊಳಿಸಬಹುದು. ಜತೆಗೆ ಈ ಕುರಿತು ರಾಜ್ಯಪಾಲರಿಗೆ ವರದಿ ನೀಡಿ ಶಾಸಕರ ವೇತನ, ಭತ್ಯೆ ತಡೆಹಿಡಿಯಬೇಕು ಎಂದು ಶಿಫಾರಸು ಮಾಡಬಹುದು. ಕಾಲಮಿತಿಯಲ್ಲಿ ಶಾಸಕರು ಆಸ್ತಿ ವಿವರ ಸಲ್ಲಿಸದ ವಿಚಾರವನ್ನು ಲೋಕಾಯುಕ್ತರ ಗಮನಕ್ಕೆ ತರಲಾಗಿದೆ. ಈ ಬಗ್ಗೆ, ಸಂಬಂಧಪಟ್ಟ ಶಾಸಕರಿಗೆ ನೋಟಿಸ್‌ ಜಾರಿಗೊಳಿಸಲು ಮುಂದಾಗಿದ್ದಾರೆ. ಉಳಿದಂತೆ ಈ ವಿಚಾರದಲ್ಲಿ ಲೋಕಾಯುಕ್ತರು ತಮ್ಮ ವಿವೇಚನಾಧಿಕಾರ ಬಳಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಲೋಕಾಯುಕ್ತ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಎಂ, ಮಾಜಿ ಸಿಎಂ ತಡವಾಗಿ ಸಲ್ಲಿಕೆ
ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಸಚಿವರಾದ ಜಿ.ಟಿ. ದೇವೆಗೌಡ, ಎನ್‌.ಎಸ್‌. ಶಿವಶಂಕರ  ರೆಡ್ಡಿ, ಶಾಸಕರಾದ ಕೆ.ಎಸ್‌. ಈಶ್ವರಪ್ಪ, ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ 35 ಶಾಸಕರು ಜೂನ್‌ 30ರ ಗಡುವು ಅವಧಿ ಮುಗಿದ ಬಳಿಕ ಇತ್ತೀಚೆಗೆ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ.

– ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next