ನವದೆಹಲಿ: ಭಾರತದಲ್ಲಿ ಸುಲಭ್ ಶೌಚಾಲಯಗಳ ನಿರ್ಮಾಣದ ಮೂಲಕ ನೈರ್ಮಲ್ಯ ಮತ್ತು ಶುಚಿಯಾದ ಪರಿಸರ ನಿರ್ಮಾಣ ಮಾಡುವಲ್ಲಿ ಕ್ರಾಂತಿಕಾರಕ ಹೆಜ್ಜೆಯಿಟ್ಟಿದ್ದ ʻಸುಲಭ್ ಇಂಟರ್‌ನ್ಯಾಷನಲ್ʼ ಸಂಸ್ಥಾಪಕ ಹಾಗೂ ಸಾಮಾಜಿಕ ಕಾರ್ಯಕರ್ತ ಬಿಂದೇಶ್ವರ್ ಪಾಠಕ್ ಮಂಗಳವಾರ ಮದ್ಯಾಹ್ನ ನಿಧನರಾಗಿದ್ದಾರೆ.
ಸ್ವಾತಂತ್ರ್ಯ ದಿನದ ನಿಮಿತ್ತ ದೆಹಲಿಯಲ್ಲಿ ಜರುಗಿದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ವೇಳೆ ಅವರು ತೀವ್ರ ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ತಕ್ಷಣ ಅವರನ್ನು ದೆಹಲಿಯ AIIMS ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ʻಸುಲಭ್ ಇಂಟರ್‌ನ್ಯಾಷನಲ್ʼ ಸಂಸ್ಥಾಪಕರಾಗಿದ್ದ ಪಾಠಕ್ ಮಾನವ ಹಕ್ಕುಗಳು, ಪರಿಸರ ನೈರ್ಮಲ್ಯ, ಅಸಂಪ್ರದಾಯಕ ಇಂಧನ ಮೂಲಗಳು, ತ್ಯಾಜ್ಯ ನಿರ್ವಹಣೆ ಕುರಿತಾಗಿ ಜನರಿಗೆ ಮಾಹಿತಿಗಳನ್ನು ನೀಡುತ್ತಿದ್ದರು.
ಅವರು ಮಲ ಹೊರುವ ಪದ್ಧತಿಯ ವಿರುದ್ಧವಾಗಿ ನಡೆಸಿದ್ದ ಹೋರಾಟ ವಿಶ್ವದ ಗಮನ ಸೆಳೆದಿತ್ತು. ಕಡಿಮೆ ಬೆಲೆಯ ಮತ್ತು ಟೂ ಪಿಟ್ ತಂತ್ರಜ್ಙಾನವನ್ನು ಬಳಸಿಕೊಂಡು ದೇಶಾದ್ಯಂತ ಸುಮಾರು 13 ಲಕ್ಷ ಮನೆಗಳಲ್ಲಿ ಶೌಚಾಲಯಗಳನ್ನು ಮತ್ತು 54 ಮಿಲಿಯನ್ ಸರ್ಕಾರಿ ಶೌಚಾಲಯಗಳನ್ನು ಸುಲಭ್ ನಿರ್ಮಿಸಿದೆ.
ಈದರ ಜೊತೆಗೆ ಮಲ ಹೊರುವ ಪದ್ಧತಿಯ ವಿರುದ್ಧ ದೇಶಾದ್ಯಂತ ಸಾವಿರಾರು ಕಾರ್ಯಕ್ರಮಗಳನದನು ಕೈಗೊಂಡಿತ್ತು. ಈ ಕ್ರಾಂತಿಕಾರಕ ಚಳವಳಿಯ ಮೂಲಕ ಮಲ ಹೊರುವ ಪದ್ಧತಿಯ ನಿರ್ಮೂಲನೆ ಮತ್ತು ಆ ಬಗೆಗಿನ ಕಠಿಣ ಕಾನೂನುಗಳನ್ನು ದೇಶದಲ್ಲಿ ರೂಪಿಸಲು ಬಿಂದೇಶ್ವರ್ ಪಾಠಕ್ ಶ್ರಮಿಸಿದ್ದರು.
ಇವರ ಈ ಸಾಹಸ ವಿದೇಶಗಳಲ್ಲೂ ಪ್ರಖ್ಯಾತಿ ಪಡೆದಿತ್ತು. ವಿಶೇಷವೆಂದರೆ, 2016 ರಲ್ಲಿ ಅಮೆರಿಕದ ನ್ಯೂಯಾರ್ಕ್‌ನ ಮೇಯರ್ ಬಿಲ್ ಡಿ ಬ್ಲಾಸಿಯೋ ಅವರು ಬಿಂದೇಶ್ವರ್ ಪಾಠಕ್ ಗೌರವಾರ್ಥವಾಗಿ ʻಬಿಂದೇಶ್ವರ್ ಪಾಠಕ್ ದಿನʼವನ್ನು ಘೋಷಿಸಿದ್ದರು. 2016 ರ ಬಳಿಕ ನ್ಯೂಯಾರ್ಕ್‌ನಲ್ಲಿ ಎಪ್ರಿಲ್ 14 ನ್ನು ʻಬಿಂದೇಶ್ವರ್ ಪಾಠಕ್ ದಿನʼವನ್ನಾಗಿ ಆಚರಿಸಲಾಗುತ್ತಿದೆ.
ಬಿಂದೇಶ್ವರ್ ಪಾಠಕ್ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ಧಾರೆ.