Advertisement

ಹರಿಹರ ದೇಗುಲ: ಇಂದಿನಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವ 

07:41 AM Feb 16, 2019 | |

ಸುಬ್ರಹ್ಮಣ್ಯ: ಇತಿಹಾಸ ಪ್ರಸಿದ್ಧ ಹರಿಹರ ಪಳ್ಳತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ. 16ರಿಂದ 24ರ ತನಕ ಶ್ರೀ ದೇವರ ಪುನರ್‌ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಅದಕ್ಕೆ ಪೂರ್ವ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಸ್ವಾಗತ ಕಮಾನುಗಳನ್ನು ರಚಿಸಲಾಗಿದೆ. ಧ್ವಜ ಹಾಗೂ ಪತಾಕೆಗಳಿಂದ ಅಲಂಕೃತಗೊಂಡು ಪರಿಸರವೇ ಕೇಸರಿ ಮಯವಾಗಿದೆ.

Advertisement

ಪಶ್ಚಿಮ ಘಟ್ಟ ಸಾಲುಗಳಿಂದ ಹರಿದು ಬರುವ ಮೂರು ಪುಣ್ಯ ನದಿಗಳ ಸಂಗಮ ಸ್ಥಳ ಶ್ರೀ ಹರಿಹರೇಶ್ವರನ ಸನ್ನಿಧಿ ಸಂಭ್ರಮಕ್ಕೆ ತೆರೆದುಕೊಳ್ಳುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ 8 ಕಿ.ಮೀ. ದೂರದಲ್ಲಿ ದೇಗುಲವಿದೆ. ಶನಿಪೂಜೆ, ರುದ್ರಾಭಿಷೇಕ, ಕುಂಕುಮಾರ್ಚನೆ,
ಕಲಶ ಸ್ನಾನ, ಮಹಾಪೂಜೆ, ವಾಹನ ಪೂಜೆ, ಎಳ್ಳೆಣ್ಣೆ ಅಭಿಷೇಕ, ಕ್ಷೀರಾಭಿಷೇಕ, ಬಲಿವಾಡು ಮೊದಲಾದ ಸೇವೆಗಳಿಗೆ ಪ್ರಸಿದ್ಧಿ ಪಡೆದಿದೆ.

ದೇವಸ್ಥಾನದಲ್ಲಿ ಅಶ್ವತ್ಥಕಟ್ಟೆ, ಮೆಟ್ಟಿಲು ನಿರ್ಮಾಣ, ದೇಗುಲದ ಒಳಾಂಗಣ ಛಾವಣಿ ನವೀಕರಣ, ಒಳಭಾಗದಲ್ಲಿ ಹಾಸುಕಲ್ಲು ಅಳವಡಿಕೆ, ಹೊರಾಂಗಣ ಆನೆ ಚಪ್ಪರ, ಸುತ್ತುಪೌಳಿ ಚಪ್ಪರ, ನೆಲಕ್ಕೆ ಇಂಟರ್‌ಲಾಕ್‌, ನೈವೇದ್ಯ ಕೊಠಡಿ, ನೂತನ ಯಾಗಶಾಲೆ, ಕೃಷಿ ತೋಟಕ್ಕೆ ಬೇಲಿ ರಚನೆ, ದೇಗುಲದ ಗೋಶಾಲೆ ನಿರ್ಮಾಣ, ಒಳ ಚರಂಡಿ ಸುವ್ಯವಸ್ಥೆ, ವನಶಾಸ್ತಾವೇಶ್ವರ ಗುಡಿ ಬಳಿ ನೆಲಕ್ಕೆ ಹಾಸುಕಲ್ಲು ಅಳವಡಿಕೆ, ಶೌಚಾಲಯ ನಿರ್ಮಾಣ, ದೈವಸ್ಥಾನದ ಗುಡಿ ಪಕ್ಕ ಇಂಟರ್‌ಲಾಕ್‌ ಅಳವಡಿಕೆ ಹೀಗೆ ಸುಮಾರು 2 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ.

ಅಲಂಕಾರ ಪೂರ್ಣ
ಫೆ. 16ರಿಂದ 24ರ ಸುಸಜ್ಜಿತ ಸಭಾಭವನದಲ್ಲಿ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳು ನಡೆಯಲಿವೆ. ದೇವಸ್ಥಾನದ ಸುತ್ತ ಪಾರಂಪರಿಕ ಸೊಗಡಿನ ವಿಶಾಲ ಚಪ್ಪರ ನಿರ್ಮಿಸಲಾಗಿದೆ. ದೇವಸ್ಥಾನವನ್ನು ಅಲಂಕರಿಸುವ ಕಾರ್ಯದಲ್ಲಿ ಸಮಿತಿಗಳ ಸ್ವಯಂ ಸೇವಕರು ತೊಡಗಿಸಿಕೊಂಡಿದ್ದಾರೆ. ದೇವಸ್ಥಾನವನ್ನು ಪ್ರವೇಶಿಸುವ ಪ್ರಮುಖ ಕೇಂದ್ರಗಳಾದ ನಡುಗಲ್ಲು ಮಳೆಯಾಲ, ಹರಿಹರ ಮೇಲಿನ ಪೇಟೆ, ದೇವಸ್ಥಾನಕ್ಕೆ ತೆರಳುವ ದಾರಿ ಮಧ್ಯೆ ಎರಡು ಕಡೆ ಸೇರಿ ಐದು ಕಡೆ ಸುಂದರ ಸ್ವಾಗತ ದ್ವಾರಗಳನ್ನು ನಿರ್ಮಿಸಲಾಗಿದೆ. ದೇವಸ್ಥಾನ ತಲುಪುವ ಮೆಟ್ಟಿಲ ಬಳಿ ಶಿವಶಕ್ತಿ ಗೆಳೆಯರ ಬಳಗದ ವತಿಯಿಂದ ಕೇಸರಿ ಬಣ್ಣದಿಂದ ನಿರ್ಮಿಸಿರುವ ಆಕರ್ಷಕ ಉದ್ದನೆಯ ಶಿವಶಕ್ತಿ ದ್ವಾರ ಭಕ್ತರನ್ನು ಆಕರ್ಷಿಸುತ್ತಿದೆ. ಸಮೀಪದಲ್ಲೆ ಚಿಮ್ಮುವ ನೀರಿನ ಈಶ್ವರ ದೇವರ ಸ್ತಬ್ಧಚಿತ್ರ ಕಣ್ಮನ ಸೆಳೆಯುತ್ತಿದೆ. ಮಳೆಯಾಲ- ಹರಿಹರ, ನಡುಗಲ್ಲು- ಹರಿಹರ. ಮುಖ್ಯ ಪೇಟೆಯಿಂದ ದೇವಸ್ಥಾನದ ವರೆಗೆ ಕೇಸರಿ ಪತಾಕೆಗಳಿಂದ ಶೃಂಗರಿಸಲಾಗಿದ್ದು ಪರಿಸರವೇ ಕೇಸರಿ ಮಯವಾಗಿದೆ.

ವ್ಯವಸ್ಥಾಪನ ಸಮಿತಿ, ಅಭಿವೃದ್ಧಿ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಉಪಸಮಿತಿಗಳ ಸದಸ್ಯರು, ಊರ ಪರವೂರ ಭಕ್ತರು ಸಮರೋಪಾದಿಯಲ್ಲಿ ಬ್ರಹ್ಮಕಲಶ ಯಶಸ್ಸಿಗೆ ಶ್ರಮವಹಿಸಿ ದುಡಿಯುತ್ತಿದ್ದು ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬ್ರಹ್ಮಕಲಶೋತ್ಸವದ 9 ದಿನಗಳು ಹಾಗೂ ಜಾತ್ರೆ, ನೇಮ ನಡಾವಳಿ, ಎಲ್ಲ ದಿನಗಳಲ್ಲಿ ಅನ್ನಸಂತರ್ಪಣೆ ಸಹಿತ ಭಕ್ತರಿಗೆ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲು ಸಿದ್ಧತೆ ನಡೆಸಲಾಗಿದೆ. ಸ್ವತ್ಛತೆಗೂ ಆದ್ಯತೆ ನೀಡಿದ್ದು, ಪರಿಸರದಲ್ಲಿ ಸಂಭ್ರಮ ಮನೆಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next