Advertisement

ತಪ್ಪು ಒಪ್ಪಿಕೊಂಡ ಅರ್ಜಿದಾರನಿಗೆ ಹೆಚ್ಚುವರಿ ಹಣ ಹಿಂದಿರುಗಿಸಲು ಒಪ್ಪಿದ ಉಪನೋಂದಣಿ ಇಲಾಖೆ!

12:02 AM Dec 24, 2019 | mahesh |

ಸುಳ್ಯ: ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿಭಾಗ ಪತ್ರದ ನಕಲು ಮತ್ತು ಋಣಭಾರ ಅರ್ಜಿ ಸಲ್ಲಿಸಿದ ಅರ್ಜಿದಾರರಿಂದ ನಿಗದಿತ ಮೊತ್ತಕ್ಕಿಂತ ಹೆಚ್ಚುವರಿ ಹಣ ಪಡೆದುಕೊಂಡ ಹಿನ್ನೆಲೆಯಲ್ಲಿ ಅರ್ಜಿದಾರರು ತಹಶೀಲ್ದಾರ್‌ಗೆ ದೂರು ನೀಡಿದ ಪರಿಣಾಮ ಉಪನೋಂದಣಿ ಇಲಾಖಾಧಿಕಾರಿ ಹೆಚ್ಚುವರಿ ಪಡೆದ 480 ರೂ. ಮೊತ್ತವನ್ನು ಹಿಂತಿರುಗಿಸಲು ಒಪ್ಪಿಕೊಂಡ ಘಟನೆ ಸುಳ್ಯ ಉಪನೋಂದಣಿ ಕಚೇರಿಯಲ್ಲಿ ನಡೆದಿದೆ.

Advertisement

ಐವರ್ನಾಡು ಗ್ರಾಮದ ಎಡಮಲೆ ನಿವಾಸಿ ಅಶೋಕ್‌ ಅವರು ತನ್ನ ಆಸ್ತಿ ಹಕ್ಕು ವಿಭಾಗ ಪತ್ರದ ನಕಲು ಮತ್ತು ಋಣಭಾರ ಪತ್ರಕ್ಕೆ ಡಿ.2ರಂದು ಅರ್ಜಿ ನೀಡಿದ್ದರು. ಇದಕ್ಕಾಗಿ ಕಚೇರಿ ನಿರ್ವಾಹಕರು 800 ರೂ. ಪಡೆದಿದ್ದರು. ಆಗ ರಶೀದಿ ನೀಡಿರಲಿಲ್ಲ. ಹಲವು ಬಾರಿ ವಿನಂತಿಸಿದ ಅನಂತರ 800 ರೂ. ಪಡೆದುಕೊಂಡ ಬಗ್ಗೆ ರಶೀದಿ ಸಿಕ್ಕಿತ್ತು.

ಆದರೆ ನಿಯಾಮನುಸಾರ ಪಡೆಯಬೇಕಿದ್ದ ಮೊತ್ತಕ್ಕಿಂತ ಹೆಚ್ಚು ಪಡೆದುಕೊಂಡಿರುವ ಬಗ್ಗೆ ತಿಳಿದ ಅಶೋಕ್‌ ರಶೀದಿ ಸಹಿತ ತಹಶೀಲ್ದಾರ್‌ಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ತಹಶೀಲ್ದಾರ್‌ ಅವರು ಉಪನೋಂದಣಿ ಅಧಿಕಾರಿಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರು.

ಹೆಚ್ಚುವರಿ ಹಣ ವಾಪಸಾತಿಗೆ ಒಪ್ಪಿಗೆ
ಉಪನೋಂದಣಾಧಿಕಾರಿ ಅವರು ಪರಿಶೀಲನೆ ನಡೆಸಿ ತಹಶೀಲ್ದಾರ್‌ ಮತ್ತು ಅರ್ಜಿದಾರರಿಗೆ ಪತ್ರ ಮೂಲಕ ಉತ್ತರ ನೀಡಿದ್ದು, ಉಪನೋಂದಣಿ ಕಚೇರಿಯಲ್ಲಿ ಅರ್ಜಿದಾರರಿಂದ ಹಣ ಪಡೆದುಕೊಂಡ ಮೂರು ರಶೀದಿಗಳ ಲೆಕ್ಕಾಚಾರದಲ್ಲಿ ತಪ್ಪುಗಳಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಜತೆಗೆ ತಾನೇ ಜವಾಬ್ದಾರಿ ಹೊತ್ತು ತನ್ನ ವೇತನದಿಂದ ಅರ್ಜಿದಾರರಿಂದ ಪಡೆದ ಹೆಚ್ಚುವರಿ ಮೊತ್ತವನ್ನು ಮರು ಪಾವತಿ ಮಾಡುವುದಾಗಿ ಉತ್ತರ ಪ್ರತಿಯಲ್ಲಿ ಉಲ್ಲೇಖೀಸಿದ್ದಾರೆ.

ಅರ್ಜಿದಾರ ಅಶೋಕ್‌ ಅವರಿಂದ ವಿಭಾಗ ಪತ್ರಕ್ಕೆ ಸಂಬಂಧಿಸಿ 200 ರೂ. ಅರ್ಜಿ ಶುಲ್ಕ ಪಡೆಯಬೇಕಿದ್ದು, 520 ರೂ. ಪಡೆದು 320 ರೂ. ಹೆಚ್ಚುವರಿ ವಸೂಲು ಮಾಡಲಾಗಿದೆ. ಮುದ್ರಾಂಕ ಶುಲ್ಕ 10 ರೂ. ಆಗಬೇಕಿದ್ದು, 70 ರೂ., ಮೂರನೇ ರಶೀದಿಯಲ್ಲಿ ಕಾರಣ ರಹಿತವಾಗಿ 100 ರೂ. ಹೆಚ್ಚುವರಿ ಪಡೆದುಕೊಳ್ಳಲಾಗಿದೆ. ಹೆಚ್ಚುವರಿ 480 ರೂ. ಅನ್ನು ಅರ್ಜಿದಾರರಿಗೆ ಹಿಂತಿರುಗಿಸುವುದಾಗಿ ಉಪನೋಂದಣಾಧಿಕಾರಿ ಪತ್ರದ ಮೂಲಕ ತಿಳಿಸಿದ್ದಾರೆ.

Advertisement

ನಾನು ದೂರು ನೀಡಿದ ಕಾರಣ ಸತ್ಯ ಹೊರ ಬಂದಿದೆ. ಈ ಬಗ್ಗೆ ನಾನು ಲೋಕಾಯುಕ್ತರ ಗಮನಕ್ಕೂ ತರಲಿದ್ದೇನೆ. ಉಪ ನೋಂದಣಿ ಕಚೇರಿಯಲ್ಲಿ ಯಾವುದೇ ಪ್ರಕ್ರಿಯೆಗಳು ನಿಯಮಾನುಸಾರ ನಡೆಯುತ್ತಿಲ್ಲ. ಅರ್ಜಿದಾರರಿಂದ ಹಣ ಪಡೆದುಕೊಳ್ಳುವಾಗ ರಿಜಿಸ್ಟ್ರಾರ್‌ ಪುಸ್ತಕಕ್ಕೆ ಸಹಿ ಹಾಕುವುದು ಮತ್ತು ಕಚೇರಿ ಹೊರಭಾಗದಲ್ಲಿ ಪಾವತಿ ಮೊತ್ತದ ವಿವರ ದಾಖಲಾತಿ, ಅರ್ಜಿ ಸಲ್ಲಿಸುವ ಎಲ್ಲರಿಗೂ ರಶೀದಿ ನೀಡುವಂತೆ ವ್ಯವಸ್ಥೆ ಆರಂಭಿಸಬೇಕು ಅರ್ಜಿದಾರ ಅಶೋಕ್‌ ಎಡಮಲೆ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next