ಮುಂಬಯಿ, ಡಿ. 27. ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ ಸಾಹಿತ್ಯ ಸಹವಾಸ ಸಂಭ್ರಮವು ಡಿ. 22 ರಂದು ಚೆಂಬೂರಿನ ಫೈನ್ ಆರ್ಟ್ಸ್ ಸೊಸೈಟಿಯ ಶಿವಸ್ವಾಮಿ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಎಚ್. ಕೆ. ಸುಧಾಕರ ಅರಾಟೆ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಸಂಘದ “ದಿ| ವೈ. ಜಿ. ಶೆಟ್ಟಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ’ಯನ್ನು ನಿವೃತ್ತ ಶಿಕ್ಷಕ ಸಿ. ಎಸ್. ರವೀಂದ್ರ ಅವರಿಗೆ, “ಸುಬ್ಬಯ್ಯ ಶೆಟ್ಟಿ ದತ್ತಿ’ ಪುರಸ್ಕಾರವನ್ನು ಇಶ್ಯೂಸ್ ಆ್ಯಂಡ್ ಕನ್ಸರ್ನ್ಸ್ ಸಂಪಾದಕ ಜಯರಾಮ್ ಶ್ರೀಯಾನ್ ಅವರಿಗೆ ಮತ್ತು ತುಳುವ ಕನ್ನಡಿಗರಿಗಾಗಿ ನೀಡುವ ಮೇರು ಪುರಸ್ಕಾರ “ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಣಾರ್ಥ’ ಪ್ರಶಸ್ತಿಯನ್ನು ಗುಜರಾತ್‌ನ ಹಿರಿಯ ಉದ್ಯಮಿ, ಸಂಘಟಕ, ಸಮಾಜ ಸೇವಕ ಜಯರಾಮ ಶೆಟ್ಟಿ ಬರೋಡ ಅವರಿಗೆ ಪ್ರದಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮಹಾರಾಷ್ಟ್ರ ಸರಕಾರದ ಸಹಕಾರ, ಮಾರುಕಟ್ಟೆ ಮತ್ತು ಜವಳಿ ಇಲಾಖೆಯ ಕಾರ್ಯದರ್ಶಿ ಡಾ| ಕೆ. ಎಚ್ ಗೋವಿಂದರಾಜ್, ಭಾರತೀಯ ಆಡಳಿತ ನಿವೃತ್ತ ಸೇವಾಧಿಕಾರಿ, ಕರ್ನಾಟಕದ ಸಾಹಿತ್ಯ ಮತ್ತು ಸಾಂಸ್ಕೃತಿಕ ಮೇಧಾವಿ ಡಾ| ಸಿ. ಸೋಮಶೇಖರ್, ಸಂಘದ ಉಪಾಧ್ಯಕ್ಷ ಪ್ರಭಾಕರ ಬಿ. ಬೋಳಾರ್, ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್ ಕೆ. ಶೆಟ್ಟಿಗಾರ್, ಗೌರವ ಕೋಶಾಧಿಕಾರಿ ಟಿ. ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಸುಧಾಕರ ಎಚ್. ಅಂಚನ್, ಜತೆ ಕೋಶಾಧಿಕಾರಿ ಸುಂದರ್ ಎನ್. ಕೋಟ್ಯಾನ್ ಉಪಸ್ಥಿತರಿದ್ದರು.
ಶಿಕ್ಷಕರ ಸಾಧನಾಸಿದ್ಧಿಯ ಹಿಂದೆವಿದ್ಯಾರ್ಥಿಗಳ ಪಾತ್ರ ಮಹತ್ತರ ವಾದದ್ದು. ಇದನ್ನು ನಾನು ಈ ಸಂಸ್ಥೆಯಲ್ಲಿ ಅನುಭವಿಸಿದ್ದೇನೆ. ಚೆಂಬೂರು ಕರ್ನಾಟಕ ಸಂಘ ನನ್ನ ಪಾಲಿನ ಮಾತೃ ಸಂಸ್ಥೆಯಾಗಿದೆ. ಆದ್ದರಿಂದ ಮಾತೃ ಸಂಸ್ಥೆಯ ಗೌರವ ಅಭಿಮಾನದ್ದು. ಏಕೆಂದರೆ ಇದು ಮನೆಮಂದಿಯ ಗೌರವವಾಗಿದೆ ಎಂದು ಸಮ್ಮಾನಕ್ಕೆ ಪ್ರಶಸ್ತಿ ಪುರಸ್ಕೃತ ಸಿ. ಎಸ್. ರವೀಂದ್ರ ನುಡಿದರು. ಇನ್ನೋರ್ವ ಸಮ್ಮಾನಿತ ಜಯ ರಾಮ್ ಶ್ರೀಯಾನ್ ಅವರು ಮಾತ ನಾಡಿ, ಭಾರತೀಯರಿಗೆ ಇತಿಹಾಸ ಪ್ರಜ್ಞೆ ಕಡಿಮೆ. ಬರೀ ಮಾತು ಜಾಸ್ತಿ, ದುಡಿಮೆ ಕಡಿಮೆಯಾಗಿದೆ. ಆದ್ದರಿಂದ ವ್ಯಾವಹಾರಿಕ ವ್ಯವಸ್ಥೆ ಅವ್ಯವಸ್ಥೆಯಾಗಿದೆ. ಆದರೆ 65ರ ಚೆಂಬೂರು ಕರ್ನಾಟಕ ಸಂಘದ ತೆರೆಮರೆಯ ಕಾಯಕವೇ ಹೆಚ್ಚಿದೆ. ಇದು ನಾವು ಗಮನಿಸಿಯೂ ಮರೆ ಮಾಚಿಸಿದ್ದೇವೆ. ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆ ಸದಾ ಹೊಗಳುವಂತಹದ್ದು. ಮಾಡಿದ ಕೆಲಸ ಗುರುತಿಸಿ ಕೊಂಡಾಗಲೇ ಅಸ್ತಿತ್ವ ಅಜರಾಮರವಾಗುತ್ತದೆ. ನಿಜಾರ್ಥದಲ್ಲಿ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರಕ್ಕೆ ಅರ್ಹವಾದ ಸಂಸ್ಥೆಯಾಗಿದೆ ಎಂದರು.
ಇನ್ನೋರ್ವ ಪ್ರಶಸ್ತಿ ಪುರಸ್ಕೃತ ಜಯರಾಮ ಶೆಟ್ಟಿ ಅವರು ಮಾತನಾಡಿ, ನಾವು ನಮ್ಮಿಂದಾದ ತ್ಯಾಗದಿಂದ ಮಾತೃ ಭಾಷೆಗಳ ಸಂಸ್ಥೆಗಳನ್ನು ರೂಪಿಸಿ ಭವಿಷ್ಯತ್ತಿನ ಪೀಳಿಗೆಗೆ ಆಸ್ತಿಯಾಗಿಸಿದ್ದೇವೆ. ಆದರೆ ಯುವ ಜನಾಂಗ ಮಾತೃ ಸಂಸ್ಕೃತಿಯಿಂದಲೇ ದೂರ ಉಳಿಯುತ್ತಿರುವುದು ಬೇಸರವೆನಿಸುತ್ತಿದೆ. ಇನ್ನಾದರೂ ನಾವು ಕನ್ನದದ ಕಂಪನ್ನು ಸಂರಕ್ಷಿಸಿ ನಮ್ಮತನ ಉಳಿಸಿ ಒಂದಾಗಿ ಬಾಳ್ಳೋಣ ಎಂದು ಆಶಯ ವ್ಯಕ್ತ ಪಡಿಸಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ವಿಶ್ವನಾಥ ಎಸ್. ಶೇಣವ, ಗುಣಾಕರ ಎಚ್. ಹೆಗ್ಡೆ, ಯೋಗೇಶ್ ವಿ. ಗುಜರನ್, ಮಧುಕರ್ ಜಿ. ಬೈಲೂರು, ರಾಮ ಪೂಜಾರಿ, ಮೋಹನ್ ಕೆ. ಕಾಂಚನ್, ಚಂದ್ರಶೇಖರ ಎ. ಅಂಚನ್, ಅಶೋಕ್ ಸಾಲ್ಯಾನ್, ಕೆ. ಜಯ ಎಂ. ಶೆಟ್ಟಿ, ಸುಧೀರ್ ವಿ. ಪುತ್ರನ್, ಜಯಂತಿ ಆರ್. ಮೊಲಿ, ಶಬರಿ ಕೆ. ಶೆಟ್ಟಿ, ಅರುಣ್‌ಕುಮಾರ್ ಶೆಟ್ಟಿಸೇರಿದಂತೆ ಸಂಘದ ವಿವಿಧ ಶಿಕ್ಷಣಾ ಲಯಗಳ ಶಿಕ್ಷಕರು, ಶಿಕ್ಷಕೇತರ ಸಿಬಂದಿ ಗಳು, ವಿದ್ಯಾರ್ಥಿಗಳು, ಕನ್ನಡ ಶಿಕ್ಷಣಾಭಿಮಾನಿಗಳು ಹಾಜರಿದ್ದರು. ಸಂಘದ ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ದಯಾಸಾಗರ ಚೌಟ ಸ್ವಾಗತಿಸಿ ಪುರಸ್ಕೃತರನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ದೇವದಾಸ್ ಕೆ. ಶೆಟ್ಟಿಗಾರ್ ವಂದಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ