Advertisement

ಮರೆಯಲಾಗದ ಮಹಾನುಭಾವರು: ಸುಬ್ಬರಾವ್‌ ಸಂಗೀತ ಲೋಕದ ಸಾರ್ವಭೌಮ

01:09 PM Jul 31, 2023 | Team Udayavani |

ಸಂಗೀತ ಸಾರ್ವಭೌಮ ಎಂದೇ ಹೆಸರಾಗಿದ್ದವರು ಎ. ಸುಬ್ಬರಾವ್‌. ಅವರ ಕಾರ್ಯಕ್ರಮವಿದ್ದಾಗ ಸಭಾಂಗಣದಲ್ಲಿ ಜಾಗವಿಲ್ಲದೆ ಜನ ಮರದ ಟೊಂಗೆ ಟೊಂಗೆಗಳ ಮೇಲೆ ಕುಳಿತು ಕೇಳುತ್ತಿದ್ದರಂತೆ! ಇಂಥ ಮಹನೀಯರು ಈಗ ಬದುಕಿದ್ದಿದ್ದರೆ ಅವರಿಗೆ ನೂರು ವರ್ಷ ತುಂಬಿರುತ್ತಿತ್ತು…

Advertisement

ಮನುಷ್ಯನ ಜೀವಿತಾವಧಿ ನೂರು ವರ್ಷವೆಂದು ಬಲ್ಲವರು ಹೇಳುತ್ತಾರೆ. ಅದಕ್ಕೆಂದೇ ಹಿರಿಯರು ಶತಾಯುಷಿಯಾಗಿ ಬಾಳು ಎಂದು ಹರಸುತ್ತಿದ್ದರೆಂದು ಕಾಣುತ್ತದೆ. ಒಬ್ಬ ಮನುಷ್ಯನ ಮರಣಾನಂತರ ಅವನ ಮಿತ್ರರು ಸಂಬಂಧಿಕರು ಒಂದೆರಡು ವರ್ಷಗಳವರೆಗೂ, ಕುಟುಂಬದವರು ಕೆಲವಾರು ವರ್ಷಗಳವರೆಗೂ ಅವರನ್ನು ನೆನಪಿಸಿಕೊಳ್ಳ­ಬಹುದು. ತಾನು ಮಾಡಿದ ಕೆಲಸಗಳಿಂದ, ಬಾಳಿದ ರೀತಿಯಿಂದ, ಮುಂದಿನ ಪೀಳಿಗೆಗೂ ಅವರ ಹೆಸರು ಅಚ್ಚಳಿಯದೆ ಉಳಿದಿದೆ­ಯೆಂದಾದರೆ, ಅವರು ಪುಣ್ಯಪುರುಷರು, ಮರೆಯಲಾಗದ ಮಹನೀಯರು. ಅಂಥವರನ್ನು ನೆನಪಿಸಿಕೊಳ್ಳಬಹುದಾದರೆ ನನಗೆ ನೆನಪಾಗು­ವುದು, ಅಪ್ಪಾಜಿ. ಸೊಸೆಯಾಗಿ ನಾನು ಅವರ ಮನೆ ಸೇರಿದಂದಿನಿಂದ, ನನಗೆ ಅಪ್ಪಾಜಿ. ಅದಕ್ಕೂ ಮೊದಲು ನನಗೆ ಮೇಷ್ಟ್ರು, ನನ್ನ ಸಂಗೀತದ ಗುರುಗಳು. ಅವರೇ ಗಾನ ಸುಧಾಕರ, ಗಾನಕಲಾಭೂಷಣ ಎ. ಸುಬ್ಬರಾವ್‌.

ಸುಬ್ಬರಾಯರು ಜನಿಸಿದ್ದು, ಮೈಸೂರಿನಲ್ಲಿ, 28 ಜುಲೈ 1923. ಅವರು ಜೀವಿಸಿದ್ದರೆ ನೂರು ವರ್ಷ ತುಂಬುತ್ತಿತ್ತು. ತಂದೆ ಅನಂತರಾಮ­ರಾಯರು. ತಾಯಿ ತುಳಸಮ್ಮ. ಮೈಸೂರು- ನಂಜನಗೂಡಿನ ನಡುವೆ ಮೊದಲ ಬಸ್‌ ಸರ್ವೀಸ್‌ ಪ್ರಾರಂಭಿಸಿದ ಹೆಗ್ಗಳಿಕೆ ಅನಂತರಾಮರಾಯರದು. ಸ್ವತಃ ಗಾಯಕಿ­ಯಾದ ತಾಯಿ ತುಳಸಮ್ಮನವರು, ಮಗನ ಸಂಗೀತಾಸಕ್ತಿಯನ್ನು ಗುರುತಿಸಿ ವಿದ್ವಾನ್‌ ಬಿಡಾರಂ ಕೃಷ್ಣಪ್ಪನವರಲ್ಲಿ ಶಿಷ್ಯವೃತ್ತಿಗೆ ಸೇರಿಸಿ­ ದರು. ತದನಂತರ ಸುಬ್ಬರಾಯರು ವಿದ್ವಾನ್‌ ಚಿಕ್ಕರಾಮರಾಯರು ಹಾಗೂ ವಿದ್ವಾನ್‌ ಲಕ್ಷ್ಮೀದಾಸರಲ್ಲಿ ಸಂಗೀತ ಕಲಿಕೆ ಮುಂದುವರೆಸಿದರು.

ರಾತ್ರಿಯಿಡೀ ಚರ್ಚೆ!
ಇಂಟರ್‌ ಮೀಡಿಯೆಟ್‌ ಶಿಕ್ಷಣದ ನಂತರ ತಾಯಿಯೊಡನೆ ಬೆಂಗಳೂರಿಗೆ ಬಂದ ಸುಬ್ಬರಾಯರು,ಬಹಳ ವರ್ಷಗಳ ಕಾಲ
ವಿಶ್ವೇಶ್ವರಪುರಂ ಬಡಾವಣೆ­ಯಲ್ಲಿ ನೆಲೆಸಿದ್ದರು. ಅಲ್ಲಿಯೇ ನವನೀತ ಪ್ರಿಂಟಿಂಗ್‌ ಪ್ರೆಸ್‌ ನಡೆಸುತ್ತಿದ್ದ, ಸ್ವಾತಂತ್ರ್ಯ ಹೋರಾಟಗಾರ ತಿ.ತಾ.ಶರ್ಮ ಅವರ ಮನೆಯಿತ್ತು. ಶರ್ಮ ಅವರ ಕುಟುಂಬದವರ ಜೊತೆಗಿನ ಸಾಂಗತ್ಯ ಸುಬ್ಬರಾಯರ ಜೀವನದ ಅತ್ಯಂತ ಆಪ್ಯಾಯಮಾನ­ವಾದ ಸಂಗತಿ. ಶರ್ಮರ ಪತ್ನಿ ತಿರುಮಲೆ ರಾಜಮ್ಮ ಒಳ್ಳೆಯ ವೀಣಾವಾದಕಿ. ಕಛೇರಿಗಳಿಲ್ಲದಿದ್ದ ಸಂಜೆಗಳು ಶರ್ಮರ ಮನೆಯಲ್ಲಿ, ಅವರೆಲ್ಲರೊಡನೆ ಮಾತಿನ ಸಭೆ. ಇವರುಗಳ ವಾಕ್ಸಭೆಗೆ ಮಂಗಳ ಹಾಡಲು ನಿದ್ರಾದೇವಿಗೂ ಶಕ್ಯವಿರಲಿಲ್ಲ. “ಅಯ್ಯೊ, ಗಂಟೆ ಒಂದಾಯ್ತು, ಏಳಿ ಸುಬ್ಬರಾಯರೆ, ತಡವಾಯ್ತು, ಮನೇವರೆಗೂ ಬಿಟ್ಟುಬರ್ತಿನಿ’ ಎಂದ ಶರ್ಮರೊಡನೆ ಹೊರಟ ಮೆರವಣಿಗೆ ಸುಬ್ಬರಾಯರ ಮನೆಯ ಬಾಗಿಲಲ್ಲಿ ಇಳಿದು, ಚರ್ಚಾವಿನಿಮಯ ಒಂದರಡು ಗಂಟೆಗಳ ಕಾಲ ಮುಂದುವರೆದು, “ಶರ್ಮರೆ, ಗಂಟೆ ಮೂರಾಯ್ತು, ತೀರಾ ತಡವಾಯ್ತು. ಬನ್ನಿ ನಿಮ್ಮನೆ ಬಾಗಿಲವರೆಗು ಬಿಟ್ಟು ಬರ್ತಿನಿ ಎಂದು ಸುಬ್ಬರಾಯರು, ಮತ್ತೆ ಮೆರವಣಿಗೆಯನ್ನು ಹೊರಡಿಸಿಕೊಂಡು ಬರುತ್ತಿದ್ದರು! ಅವರನ್ನು ಇವರು, ಬಿಟ್ಟು ಇವರನ್ನು ಅವರು ಬಿಟ್ಟು ಅವರವರು ಅವರವರ ಮನೆ ಸೇರಿ ಹಾಸಿಗೆ ಕಾಣುವ ಹೊತ್ತಿಗೆ, ಬೆಳಗಿನ ಜಾವವೇ ಆಗಿಬಿಡುತ್ತಿತ್ತು!!

Advertisement

ತಿ.ತಾ. ಶರ್ಮರಂತೆ ಸುಬ್ಬರಾಯರ ಇನ್ನೊಬ್ಬ ಆಪ್ತರು ಹಾರ್ಮೋನಿಯಂ ಅರುಣಾಚಲಪ್ಪ. ಎಲ್ಲ ಸಂಗೀತಗಾರರು ಪಿಟೀಲಿನ ಪಕ್ಕವಾದ್ಯದೊ­ಡನೆ ಕಛೇರಿ ಮಾಡುತ್ತಿದ್ಧ ಕಾಲದಲ್ಲಿ, ಸುಬ್ಬರಾಯರು ಅರುಣಾಚಲಪ್ಪನವರ ಹಾರ್ಮೋನಿಯಂ ಪಕ್ಕವಾದ್ಯದ ಪ್ರಯೋಗದೊಂದಿಗೆ ಅಭೂತಪೂರ್ವ ಕಛೇರಿಗಳನ್ನು ಮಾಡಿದ್ದು ಇಂದಿಗೆ ಚರಿತ್ರೆ.

ದಾಸದೀಕ್ಷೆ ಕೈಗೊಂಡಿದ್ದರು!
ಸುಬ್ಬರಾಯರು ದಾಸದೀಕ್ಷೆಯನ್ನು ಕೈಗೊಂಡು ಮೂರೂವರೆ-ನಾಲ್ಕು ತಾಸುಗಳ ಇಡೀ ಕಛೇರಿಯನ್ನು ದಾಸರಪದ, ಕನ್ನಡ ಗೀತೆಗಳೊಂದಿಗೆ ಪ್ರಸ್ತುತ ಪಡಿಸುತ್ತಿದ್ದರು. ಇದಕ್ಕಾಗಿ ಅವರು ಹಲವಾರು ದೇವರನಾಮಗಳಿಗೆ ಸ್ವರ ಸಂಯೋಜಿಸಿದ್ದರು. ಒಂದೊಂದು ಕೃತಿಯೂ ವಿಶೇಷವಾಗಿರುತ್ತಿತ್ತು. ಸಾಹಿತ್ಯದ ಭಾವಕ್ಕೆ ತಕ್ಕ ರಾಗ, ಹಾಡುವಾಗ ಸಾಹಿತ್ಯಕ್ಕೆ ನೀಡುತ್ತಿದ್ದ ಮಹತ್ವ, ಇವೆಲ್ಲವುಗಳಿಂದ ಕಛೇರಿಗೆ ಹೆಚ್ಚು ಮೆರುಗು ಬರುತ್ತಿತ್ತು. ಅಂದಿನ ಕಾಲದಲ್ಲಿ ಇಂದಿನಂತಹ ಧ್ವನಿಮುದ್ರಣ ವ್ಯವಸ್ಥೆ ಇಲ್ಲದಿದ್ದ ಕಾರಣ ಅವರು ಹಾಡಿದ ಸಾವಿರಾರು ಕೃತಿಗಳು ಇಂದಿನ ಪೀಳಿಗೆಯ ಸಂಗೀತಾಸಕ್ತರಿಗೆ ದೊರಕದೆ ಹೋದದ್ದು ದುರದೃಷ್ಟ. ಇವರು ಹಾಡುತ್ತಿದ್ದ ಗೀತೆಗಳಲ್ಲಿ ಅತ್ಯಂತ ಜನಪ್ರಿಯವಾದದ್ದು “ತಾರಕ್ಕ ಬಿಂದಿಗೆ ನಾ ನೀರಿಗೊಗುವೆ ತಾರೆ ಬಿಂದಿಗಯ’. ಆ ಕೃತಿ ಹಾಡದೆ ಜನ ಅವರ ಕಾರ್ಯಕ್ರಮ ಮುಗಿಸಗೊಡುತ್ತಿರಲಿಲ್ಲ. ಇವರು ರಾಗ ಸಂಯೋಜಿಸಿದ “ನಾಲ್ಕು ವರ್ಷದ ಕಾಲ’ ಭಾವಗೀತೆಯನ್ನು ಕೇಳಿದ ಕವಿ ಎಸ್‌.ಅನಂತನಾರಾಯಣ ಅವರು ಹನಿಗಣ್ಣಾಗಿ, “ಸುಬ್ಬರಾವ್‌, ಯು ಹ್ಯಾವ್‌ ಇಮ್ಮಾರ್ಟಲೈಜ್ ಮೈ ಸಾಂಗ್‌’ ಎಂದು ಅಪ್ಪಿಕೊಂಡಿದ್ದರು. “ನಿಮ್ಮ ಮಾವನವರ ಸಂಗೀತ ಎಂದರೆ ಜನ ಮರದ ಟೊಂಗೆ ಟೊಂಗೆಗಳ ಮೇಲೆ ಕುಳಿತು ಕೇಳುತ್ತಿದ್ದರಮ್ಮ’ ಎಂದು ನನ್ನ ತಂದೆಯ ಮಿತ್ರರೊಬ್ಬರು ಹೇಳಿದ್ದರು. ಜನಸಾಮಾನ್ಯರ ಮನವನ್ನು, ವಿದ್ವಾಂಸರ ಮೆಚ್ಚುಗೆಯನ್ನು ಗಳಿಸಿದ ಹೆಗ್ಗಳಿಕೆ ಸುಬ್ಬರಾಯರದು. ಅಂದಿನ ಕಾಲಕ್ಕೆ ಇವರ ಕಾರ್ಯಕ್ರಮವಿರದ ಸಂಗೀತೋತ್ಸವಗಳೇ ಇರಲಿಲ್ಲ.‌

ಪ್ರಾತಃಸ್ಮರಣೀಯರು…
ಆಗ ಮದರಾಸ್‌ ಕರ್ನಾಟಕ ಸಂಗೀತದ ತವರೂರು ಎನಿಸಿಕೊಂಡಿತ್ತು. ಕನ್ನಡನಾಡಿನಲ್ಲಿ ಪ್ರತಿಭಾವಂತರಿದ್ದರೂ ಸಹ ಅವರು ಅವಕಾಶವಂಚಿತರಾಗಿದ್ದರು. ಕನ್ನಡದ ಪ್ರತಿಭಾವಂತ ಸಂಗೀತಗಾರರಿಗೆ ಅವಕಾಶ ನೀಡಲೆಂದೇ ಹುಟ್ಟಿದ ಸಂಸ್ಥೆ “ಕರ್ನಾಟಕ ಗಾನಕಲಾ ಪರಿಷತ್’. ಖ್ಯಾತ ವಿದ್ವಾಂಸರುಗಳಾದ ವಿದ್ವಾನ್‌ ಬೆಂಗಳೂರು ವೆಂಕಟರಾಮ್, ಎ.ವೀರಭದ್ರಯ್ಯ, ಹೆಚ್‌.ವಿ. ಕೃಷ್ಣಮೂರ್ತಿ, ಆನೂರು ಎಸ್‌. ರಾಮಕೃಷ್ಣ ಮುಂತಾದವರೊಂದಿಗೆ ಸೇರಿ ಹುಟ್ಟು ಹಾಕಿದ, ಬೆಳೆಸಿದ ಈ ಸಂಸ್ಥೆ ಐವತ್ತಕ್ಕೂ ಹೆಚ್ಚಿನ ವರುಷಗಳಿಂದ ಯಶಸ್ವಿಯಾಗಿ ಸಂಗೀತ ಸಂಬಂಧಿತ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಸಂಗೀತಕ್ಕಾಗಿಯೇ ತಮ್ಮ ಬದುಕನ್ನು ಮುಡಿಪಿಟ್ಟ ಸುಬ್ಬರಾಯರು ಎಂತಹ ಕಷ್ಟಕಾಲದಲ್ಲೂ ತಾವು ನಂಬಿದ ಮೌಲ್ಯಗಳನ್ನು ಬಿಡಲಿಲ್ಲ. ಜೀವನ ಪ್ರೀತಿ, ಮೌಲ್ಯ, ನಂಬಿಕೆಗಳಿಗೆ ಬದ್ಧರಾಗಿ ಬಾಳಿದ ರೀತಿಯಿಂದಾಗಿ ಅವರು ಎಂದೆಂದಿಗೂ ಪ್ರಾತಃಸ್ಮರಣೀಯರು.

ಪ್ರಶಸ್ತಿ, ಪುರಸ್ಕಾರಗಳು
ಸುಬ್ಬರಾಯರ ಸಂಗೀತ ಸೇವೆಗೆ ಸಂದ ಗೌರವ ಪ್ರಶಸ್ತಿಗಳು ಹಲವಾರು. ಗಾನ ಸುಧಾಕರ, ಗಾನ ಕಲಾಭೂಷಣ, ಸಂಗೀತ ರತ್ನ, ಸಂಗೀತ ಕಲಾವಸಂತ ಮುಂತಾದ ಬಿರುದುಗಳಲ್ಲದೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ವಿದ್ವಾನ್‌ ಪ್ರಶಸ್ತಿ, ಕನಕ-ಪುರಂದರ ಪ್ರಶಸ್ತಿಗಳು ಅವರಿಗೆ ಸಂದ ಪ್ರಶಸ್ತಿಗಳಲ್ಲಿ ಕೆಲವು. ಆಕಾಶವಾಣಿಯ ಎ ಗ್ರೆಡ್‌ ಕಲಾವಿದರಾಗಿ, ಇವರ ಅನೇಕ ಕಾರ್ಯಕ್ರಮಗಳು ಪ್ರಾದೇಶಿಕ ಮಟ್ಟದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರವಾಗಿವೆ.

*ಸಂಧ್ಯಾ ಯಶಸ್ವಿ

Advertisement

Udayavani is now on Telegram. Click here to join our channel and stay updated with the latest news.

Next