Advertisement
“”ಈ ಹರಳೆಣ್ಣೆ ಮುಖ ಹೊತ್ತು ಯಾಕೆ ತಿರುಗುತ್ತಿದ್ದೀಯಾ? ಮೊಬೈಲು ಕಳ್ಕೊಂಡೆಯಾ…?” ವಿವರಣೆ ಕೇಳಿದೆ.“”ನೆಮ್ಮದೀನೇ ಕಳ್ಕೊಂಡೆ?” ಒಗಟಾಡಿದ.
“”ಹಾಗಂದ್ರೇನೋ? ಏನಾಯ್ತು? ನೆನ್ನೆ ಸಿನೆಮಾಕ್ಕೆ ಹೋಗ್ತಿನೀಂತ ಹೇಳಿದ್ದೆ?”
“”ಹೋಗಬೇಕಾಗಿತ್ತು! ಆದ್ರೆ ನನ್ನ ಜೀವನದಲ್ಲೇ ಸಿನೆಮಾ ನಡೀತು; ನಾನು ಶಾಲಿನಿ ಜಗಳವಾಡಿದ್ದು” ಸುಬ್ಬು ಅಸಲಿ ವಿಷಯ ಹೇಳಿದ.
“”ಕಾರಣ ?”
“”ನೆನ್ನೆ ಆ ಬಾಲ್ಡಿ ಬಾಸು ಲಾಸ್ಟ್ ಮಿನಿಟ್ಟಲ್ಲಿ ಒಂದು ಕೆಲಸ ವಹಿಸಿದ. ಅದು ಮುಗಿಸಿ ಮನೆಗೆ ಹೋದಾಗ ರಾತ್ರಿ ಏಳು ಗಂಟೆಯಾಗಿತ್ತು”
“”ಅಷ್ಟಕ್ಕೆಲ್ಲಾ ಜಗಳವಾ?” ನನಗೆ ಅಚ್ಚರಿಯಾಗಿತ್ತು.
“”ನಾನು ಮನೆಗೆ ಹೋಗೋದ್ರಲ್ಲಿ ಶಾಲಿನಿ ಅಪ್ಪಬಂದು, ನನಗಾಗಿ ಕಾದು ಹೋಗಿದ್ದರಂತೆ.”
ಜಗಳಕ್ಕೆ ಕಾರಣ ತಿಳಿಯಿತು. ಸುಬ್ಬೂನ ಹೇಗೆ ಸಮಾಧಾನ ಮಾಡಲಿ ತಿಳಿಯಲಿಲ್ಲ.
“”ಅಲ್ಲಾ, ಇವಳೇನು ತನ್ನ ಅಪ್ಪನ್ನ ಬಿಲ್‌ಗೇಟ್ಸು ಅಂತ ತಿಳಿದುಕೊಂಡಿದ್ದಾಳ್ಳೋ? ನನ್ನ ತಾಪತ್ರಯ ನನಗೆ. ಅವರು ಬಂದಾಗ ನಾನು ಮನೆಗೆ ಬಾರದೆ ಇದ್ದುದ್ದಕ್ಕೆ ಅವಳಿಗೆ ಅವಮಾನವಾಯಿತಂತೆ”
“”ಶಾಲಿನಿಯತ್ತಿಗೆ ಫೋನು ಮಾಡಿ ನಿನಗೆ ವಿಷಯ ತಿಳಿಸಿದ್ದರೆ ನೀನೂ ಸರಿಯಾದ ಸಮಯಕ್ಕೆ ಮನೆಗೆ ಹೋಗಬಹುದಿತ್ತು ಅಲ್ಲವೆ?” ಸಂತೈಸಿದೆ.
“”ಅವಳೇನೋ ಫೋನು ಮಾಡಿದ್ದಳು. ಆಗ ಬಾಲ್ಡಿ ಬಾಸು ಬಿಶ್ವಾಸ್ ಎದುರಿಗೇ ಇದ್ದ. ನಾನು ಸಾರಿ ರಾಂಗ್ ನಂಬರ್ ಅಂತ ಹೇಳಿ ಫೋನಿಟ್ಟುಬಿಟ್ಟೆ.” ಬೇಸರದಿಂದ ನುಡಿದ.
“”ಎಂಥ ಕಟುಕನೋ ನೀನು?” ಬೈದೆ.
“”ಶಾಲಿನೀನ ಕಟ್ಕೊಂಡು ಹತ್ತು ವರ್ಷ ಏಗಿದ್ದರೆ ನನ್ನನ್ನು ಮೀರಿಸಿದ ಕಟುಕ ನೀನಾಗಿರ್ತಿದ್ದೆ”
ಸುಬ್ಬು ಮಾತಿಗೆ ಬೆಚ್ಚಿದೆ. ಇಂಥ ಜೀವಭಯವನ್ನು ಅವನೆಂದೂ ಒಡ್ಡಿರಲಿಲ್ಲ.
“”ಮನೇಲಿ ಕೋಲ್ಡ್ ವಾರ್ ಶುರುವಾಗಿದೆ. ಬೆಳಿಗ್ಗೆ ಬ್ರೇಕ್‌ಫಾಸ್ಟ್ ಗೆ ಬ್ರೇಕ್ ಆಯ್ತು. ಪವನ, ಪಿಂಕಿ ಫೋನ್ ಮಾಡಿ ಅಮ್ಮ ತಿಂಡೀನೇ ಮಾಡಿಲ್ಲ. ನಾವಿಬ್ರೂ ನಿಮ್ಮ ಬೀರೂಲಿ ನೂರುನೂರು ರೂಪಾಯಿ ತಗೊಂಡು ಕಾಲೇಜಿಗೆ ಹೋಗ್ತಿದ್ದೀವಿ ಅಂತ ಹೇಳಿದ್ರು. ಇದು ಇಷ್ಟಕ್ಕೆ ನಿಲ್ಲೋಲ್ಲ!” ಸುಬ್ಬು ಅಲವತ್ತುಗೊಂಡ.
“”ಗಂಡ-ಹೆಂಡಿರ ಜಗಳ ಉಂಡು ಮಲಗೋವರೆಗೆ ಅನ್ನೋ ಗಾದೇನೇ ಇದೆ. ಎರಡು ದಿನದಲ್ಲಿ ಎಲ್ಲಾ ಸರಿಯಾಗುತ್ತೆ. ಸುಮ್ಮನಿದ್ದುಬಿಡು”
“”ನಿನ್ನ ಗಾದೆ ನಂಬ್ಕೊಂಡ್ರೆ ದೇವ್ರೇ ಗತಿ. ಉಂಡು, ಮಲಗಿ, ಎದ್ದು ಎಲ್ಲಾ ಆದರೂ ನಮ್ಮ ಜಗಳ ಮುಗಿದಿಲ್ಲ. ಬೆಳಿಗ್ಗೆ ಕಲಗಚ್ಚಿನ ಥರಾ ಕಾಫಿ ಮಾಡಿಕೊಟ್ಟಳು?”
“”ನೀನೇನು ಮಾಡಿದೆ?”
“”ವಾಷ್‌ಬೇಸಿನ್‌ನಲ್ಲಿ ಸುರಿದೆ”
“”ಸುಬ್ಬು ಹೋಲ್ಡ್ ಆನ್. ಈ ಥರ ಹೋದ್ರೆ ಇದಕ್ಕೆ ಕೊನೆ ಎಲ್ಲೋ ?” ದಿಗಿಲಾಗಿ ಕೇಳಿದೆ.
“”ಇದು ಬರೀ ಪ್ರಾರಂಭ. ನಾನು ಸ್ನಾನ ಮುಗಿಸಿ ಡೈನಿಂಗ್ ಟೇಬಲ್ ಹತ್ರ ಬಂದು ಗಟ್ಟಿಯಾಗಿ “ತಿಂಡಿ’ ಅಂದೆ. ಬೆವರು ಸುರಿಸಿ ಮಾಡೋದನ್ನ ತಿಪ್ಪೆಗೆ ಸುರಿಯೋರಿಗೆ ಬೇಯಿಸೋಕೆ ನನಗೇನು ಹುಚ್ಚು ಹಿಡಿದಿಲ್ಲ” ಎಂದು ಹಂಗಿಸಿದಳು.
“”ನೀನೇನು ಮಾಡಿದೆ?”
“”ಮಾಡೋದೇನು? ಡೈನಿಂಗ್ ಟೇಬಲ್‌ಗೆ ಒದ್ದು ಫ್ಯಾಕ್ಟ್ರಿಗೆ ಬಂದೆ. ಈ ಕೋಲ್ಡ್ ವಾರ್ ಮುಗಿಸೋಕೆ ಒಂದು ಪ್ಲಾನ್ ಹೇಳ್ಳೋ”
“”ಇಷ್ಟೆಲ್ಲ ಆದ ಮೇಲೆ ಏನು ಪ್ಲ್ರಾನು ಮಾಡೋದು?” ಚಿಂತೆಯಿಂದ ಕೇಳಿದೆ. “”ಒಂದೊಂದು ಸಲ ನಿನ್ನ ಕೆಟ್ಟ ಪ್ಲಾನುಗಳೂ ವರ್ಕ್ ಆಗುತ್ತವೆ. ಇದು ಗಂಭೀರವಾದ ವಿಷಯ. ಇವತ್ತು ಫ್ಯಾಕ್ಟ್ರಿ ಮುಗಿಯೋ ಟೈಮಿಗೆ ಒಂದು ಪ್ಲಾನ್ ರೆಡಿಮಾಡೋ ಪ್ಲೀಸ್. ಎಡವಟ್ಟಾಗಬಾರದು. ಹಾಗೇನಾದ್ರೂ ಆದ್ರೆ ನಾನು ನಿನ್ನ ಸುಮ್ನೆ ಬಿಡೋಲ್ಲ” ಸುಬ್ಬು ಬೇಡಿಕೆ ಮತ್ತು ವಾರ್ನಿಂಗ್ ಎರಡೂ ಒಟ್ಟಿಗೇ ಕೊಟ್ಟ. ಸುಬ್ಬುವಿನ ಬೇಡಿಕೆಯನ್ನು ಒಪ್ಪಿಕ್ಕೊಳ್ಳಲೇಬೇಕಾಗಿತ್ತು. ಒಪ್ಪಿಕ್ಕೊಳ್ಳದಿದ್ದರೆ ಸುಬ್ಬು ಬಿಡುವವನೂ ಅಲ್ಲ. ಸ್ನೇಹದ ಸಂಕೋಲೆ. ಉಡದ ಹಿಡಿತ. ಊಟ ಮುಗಿಸಿ ಡಿಪಾರ್ಟುಮೆಂಟುಗಳಿಗೆ ತೆರಳಿದೆವು. ಡಿಪಾರ್ಟ್‌ಮೆಂಟು ಹೊಕ್ಕ ತಕ್ಷಣ ಕೆಲಸ. ಸುಬ್ಬು ಮತ್ತು ಶಾಲಿನಿ ಅತ್ತಿಗೆಯ ಕೋಲ್ಡ್‌ವಾರ್ ಮರೆವಿನ ಕೋಲ್ಡ್ ಸ್ಟೋರೇಜಿಗೆ ಜಾರಿತ್ತು!
ಅರ್ಧ ಗಂಟೆಗೇ ಸುಬ್ಬು ಫೋನ್ ಮಾಡಿ ಎಚ್ಚರಿಸಿದ. ಅವನು ಮೊದಲಿಂದಲೂ ಹೀಗೇ. ಅವನ ತರಲೆ-ತಾಪತ್ರಯಗಳನ್ನು ಇನ್ನೊಬ್ಬರಿಗೆ ವರ್ಗಾಯಿಸಿ ತಾನು ಮಜವಾಗಿರುವ ಜಾಯಮಾನದವನು!
Related Articles
ಸುಬ್ಬು ಐದೇ ನಿಮಿಷಕ್ಕೆ ಹಾಜರಾಗಿದ್ದ.
“”ಏನು ಯೋಚಿಸಿದೆ?” ಎಂದ.
“”ನಿಮ್ಮ ಮಾವ ಬಂದಾಗ ನೀನು ಹೋಗಲಿಲ್ಲ ಅನ್ನೋ ಕಾರಣಕ್ಕೆ ಅಲ್ವಾ ಜಗಳ ಶುರುವಾಗಿದ್ದು?”
“”ಹೌದು”
“”ನಾಳೆ ನೀನು ಸಂಸಾರ ಸಮೇತ ನಿಮ್ಮ ಮಾವನ ಊರಿಗೆ ಹೋಗು”
“”ತಲೆ ಒಡೆದು ಹಾಕ್ತೀನಿ. ಐಡಿಯಾ ಕೊಡೂಂದ್ರೆ ಇಂತಾವೆಲ್ಲಾ ಕೊಡೋದಾ? ಆ ಸಿಂಗಳೀಕನ ಮನೇಗೆ ಕಾಲಿಡೋಲ್ಲಾಂತ ವರ್ಷದ ಹಿಂದೇನೆ ಶಪಥ ಮಾಡಿದೀನಿ.” ಸುಬ್ಬು ಭುಸುಗುಟ್ಟಿದ.
“”ಹೀಗ್ಮಾಡಿದ್ರೆ ಅತ್ತಿಗೆ ಮನಸ್ಸು ಕರಗುತ್ತೆ. ಜಗಳಕ್ಕೆ ಸೀಸ್ ಫೈರ್. ಹೇಗೂ ಮಕ್ಕಳಿಗೂ ರಜಾ ಇದೆ”
“”ನೋ… ಇಂಪಾಸಿಬಲ್. ಅಲ್ಲಿಗೆ ಹೋಗೋಲ್ಲ”
“”ನಿಜಕ್ಕೂ ಹೋಗಬೇಕಾಗಿಲ್ಲ. ಸುಮ್ಮನೆ ಎಲ್ಲರನ್ನೂ ಹೊರಡಿಸು ಅಷ್ಟೆ. ನಾಳೆ ಬೆಳಿಗ್ಗೆ ಎಂಟಕ್ಕೆ ನಿನ್ನ ಬಾಲ್ಡಿ ಬಾಸಿಗೆ ಫೋನ್ ಮಾಡಿ ಸಿಕ್ ಲೀವ್ ಹೇಳು”
“”ನೆವರ್! ಆ ಬಾಲ್ಡಿಗೆ ನಾನು ಫೋನ್ ಮಾಡೊಲ್ಲ. ನೆವರ್. ಇಂಥಾ ಕೆಟ್ಟ ಐಡಿಯಾ ಕೊಡೋದಕ್ಕೆ ನೀನೇ ಬೇಕಾ?”
“”ಪೂರ್ತಿ ಕೇಳ್ಳೋ! ಮುಂಚೇನೇ ಬಾಲ ಸುಟ್ಟ ಕಪಿ ಹಾಗೆ ಆಡಬೇಡ” ಅಣಕಿಸಲು ಸಿಕ್ಕ ಅವಕಾಶ ಬಿಡಲಿಲ್ಲ.
“”ಸರಿ, ಅದೇನು ಪೂರಾ ಬೊಗಳಿಬಿಡು”
“”ಆಕುcಯಲಿ, ನೀನು ಬಾಲ್ಡಿಗಲ್ಲ , ನನಗೆ ಫೋನ್ ಮಾಡ್ತೀಯ. ನಾನು ಬಿಶ್ವಾಸ್ ಮಾತಾಡಿದ ಹಾಗೆ ಮಾತಾಡಿ, ಲೀವ್ ಕೊಡೋಕಾಗೊಲ್ಲ ಅಂತೀನಿ. ಲೀವು ಸಿಗ್ತಿಲ್ಲಾಂತ ಅತ್ತಿಗೇನ ಕನ್ವಿನ್ಸ್ ಮಾಡಿ ಫ್ಯಾಕ್ಟ್ರಿಗೆ ಬಾ. ನೀನು ಮಾವನ ಮನೆಗೂ ಹೋಗೋಲ್ಲ. ಬಿಶ್ವಾಸ್‌ನ ನೀನು ರಜಾಕ್ಕೆ ಬೇಡಿಕೋಬೇಕಾಗಿಲ್ಲ. ಹಾವೂ ಸಾಯೋಲ್ಲ ಕೋಲೂ ಮುರಿಯೋಲ್ಲ. ಜಗಳ ನಿಲ್ಲುತ್ತೆ” ಅನುಮಾನಿಸಿದ ಸುಬ್ಬು.
“”ಹೆಚ್ಚುಕಮ್ಮಿಯಾದ್ರೆ, ನಿನ್ನ ತಲೆ ಸಾವಿರ ಹೋಳಾಗುತ್ತೆ. ಎಚ್ಚರಿಕೆ” ಚಂದಮಾಮದ ಬೇತಾಳನಂತೆ ಎಚ್ಚರಿಸಿದ.
.
“”ರೀ… ನಿಮಗೆ ಫೋನು”
ಬೆಳಿಗ್ಗೆ ಎಂಟಕ್ಕೆ ಶೂಲೇಸು ಕಟ್ಟುತ್ತಿದ್ದಾಗ ಮಡದಿ ಕೂಗಿದಳು.
“”ಹಲೊ…?”
“”ಹಲೋ ಸಾರ್, ಸುಬ್ಬು ಸ್ಪೀಕಿಂಗ್. ನನಗೆ ಹುಷಾರಿಲ್ಲ. ಎರಡು ದಿನ ಬರೋಕಾಗೋಲ್ಲ! ಸಿಕ್ ಲೀವ್ ಬೇಕಾಗಿತ್ತು” ಮೊದಲ ಬಾರಿಗೆ ಸುಬ್ಬು ಮೃದು ದನಿ ಕೇಳಲು ತಮಾಷೆಯೆನಿಸಿತು.
“”ನೋ… ನೋ… ಇಲ್ಲಾರೀ… ನಾಳೆ ಚೇರ್ಮನ್ ವಿಸಿಟ್ ಇದೆ. ಅಟ್ ಎನಿ ಕಾಸ್ಟ್ ನೀವು ಬರಲೇಬೇಕು”
“”ಹುಷಾರಿಲ್ಲ ಸಾರ್”
“”ನನಗೂ ಹುಷಾರಿಲ್ಲಾರೀ… ಬಟ್ ಐ ಕೆನಾಟ್ ಇಗ್ನೊàರ್ ರೆಸ್ಪಾನ್ಸಿಬಿಲಿಟಿ. ನೋ ಲೀವ್!”
ಒಳಗೊಳಗೇ ನಗುತ್ತ ಫೋನಿಟ್ಟು ಫ್ಯಾಕ್ಟ್ರಿಗೆ ಹೊರಟೆ!
.
ಬೆಳಿಗ್ಗೆ ಒಂಬತ್ತಕ್ಕೆ ಸುಬ್ಬುಗೆ ಫೋನಿಸಿದೆ. ಅವನು ಬಂದಿಲ್ಲಾ ಅನ್ನೋ ಸುದ್ದಿ ಕೇಳಿ ಆಶ್ಚರ್ಯವಾಯಿತು. ಪ್ಲ್ರಾನ್ ಪ್ರಕಾರ ಬರಬೇಕಾಗಿತ್ತು. ಏನಾಯಿತೋ ಗೊತ್ತಾಗದೆ ಕೆಲಸದಲ್ಲಿ ಮುಳುಗಿ ಸುಬ್ಬು ಮರೆತೆ. ಮಧ್ಯಾಹ್ನ ಕ್ಯಾಂಟೀನಿನಲ್ಲೂ ಸುಬ್ಬು ಸುಳಿವಿರಲಿಲ್ಲ. ಯಾಕೆ ಬರಲಿಲ್ಲ? ಕೆಲಕ್ಷಣ ಚಿಂತಿಸಿ ಮರೆತೆ.
ಮಾರನೆಯ ದಿನವೂ ಸುಬ್ಬು ಫ್ಯಾಕ್ಟ್ರಿಗೆ ಬರಲಿಲ್ಲ. ಎಲ್ಲಿ ಹೋದ ಆಸಾಮಿ? ಅವನ ಆಫೀಸಿಗೆ ಫೋನು ಮಾಡಿದೆ. ಎರಡು ದಿನ ಸಿಕ್ ಲೀವು ಹಾಕಿದ್ದಾರೆ ಅನ್ನೋ ಉತ್ತರಕ್ಕೆ ಪೆಚ್ಚಾದೆ. ಅವನ ಮೊಬೈಲಿಗೆ ಫೋನು ಮಾಡಲೆ ಎನಿಸಿತು. ಬೇಡ ಎಂಥ ಸ್ಥಿತಿಯಲ್ಲಿದ್ದಾನೋ ಏನೋ… ಬೇಡ ಎನಿಸಿ ಸುಮ್ಮನಾದೆ.
Advertisement
ಮೂರನೆಯ ದಿನ ಬೆಳಿಗ್ಗೆ ಸುಬ್ಬು ದರ್ಶನ ಫ್ಯಾಕ್ಟ್ರಿಯ ಗೇಟಲ್ಲೇ ಆಯಿತು. ಅವನ ಗಡಿಗೆ ಮುಖ ಏನೋ ಹೆಚ್ಚುಕಮ್ಮಿಯಾಗಿದೆ ಎಂದು ಹೇಳಿತು. ಅವನನ್ನು ನೋಡಿಯೂ ನೋಡದಂತೆೆ ವೇಗವಾಗಿ ನಡೆದೆ.ಡಿಪಾರ್ಟ್‌ಮೆಂಟು ಸೇರಿ ಇನ್ನೂ ಕುರ್ಚಿಯಲ್ಲಿ ಕೂತಿರಲಿಲ್ಲ! ಸುಬ್ಬು ಎದುರಲ್ಲಿ ಬುಸುಗುಟ್ಟುತ್ತಿದ್ದ.
“”ಏನಾಯೊ¤à…?” ಎಂದೆ ಅನುಮಾನದಿಂದ.
“”ತೋಪಾಯ್ತು! ನಿನ್ನ ಪ್ಲಾನ್ ಎಕ್ಕುಟ್ಟೋಯ್ತು! ಮರ್ಯಾದೆ ಕಳ್ಕೊಂಡೆ!” ಸುಬ್ಬು ಕೆಂಡಾಮಂಡಲನಾಗಿದ್ದ.
“”ಏನಾಯ್ತು ಸರಿಯಾಗಿ ಹೇಳು”
“”ಶಾಲಿನಿ, ಬಿಶ್ವಾಸ್ ಹೆಂಡ್ತೀಗೆ ಫೋನ್ ಮಾಡಿ, ಎರಡು ದಿನ ಲೀವಿಗೆ ನಿಮ್ಮ ಯಜಮಾನ್ರು ತರಲೆ ಮಾಡ್ತಿದ್ದಾರೆ ಅಂತ ಕಂಪ್ಲೆ„ನ್ ಮಾಡಿನಂತೆ. ಅವರಿಬ್ಬರೂ ಲೇಡೀಸ್ ಕ್ಲಬ್ ದೋಸ್ತಿಗಳು. ಬಿಶ್ವಾಸ್ ಹೆಂಡತಿ ಗಂಡನಿಗೆ ದಬಾಯಿಸಿದಳಂತೆ. ಅವರು ನನಗೆ ಸುಬ್ಬು ಫೋನೇ ಮಾಡಿಲ್ಲ, ಅವರು ಕೇಳದಿದ್ರೂ ಲೀವ್ ಅಪ್ರೂವ್ ಮಾಡಿದ್ದೀನಿ” ಅಂದರಂತೆ. ಬೇರೆ ದಾರಿ ಇಲ್ಲದೆ ಮಾವನ ಮನೆಗೆ ಹೋಗಿ ಎರಡು ದಿನ ಇದ್ದು ಬಂದೆ. ಎಲ್ಲಾ ನಿನ್ನಿಂದ. ನಿನ್ನ ದರಿದ್ರ ಐಡಿಯಾದಿಂದ”
ಉರಿಯುತ್ತ ನನ್ನ ಚೇಂಬರಿನ ಬಾಗಿಲನ್ನು ದಢಾರನೆ ಮುಚ್ಚಿಕೊಂಡು ಆಚೆ ಹೋದ ಸುಬ್ಬು! ಎಸ್. ಜಿ. ಶಿವಶಂಕರ್