Advertisement

ಜನಾದೇಶಕ್ಕೆ ನಿತೀಶ್‌ ವಂಚನೆ: ಸಿಎಂ ನಿತೀಶ್‌ ವಿರುದ್ಧ ಬಿಜೆಪಿ ಬೃಹತ್‌ ಪ್ರತಿಭಟನೆ

08:43 PM Aug 10, 2022 | Team Udayavani |

ಪಾಟ್ನಾ/ಪುಣೆ:ಹಿಂದಿನ ಚುನಾವಣೆಯಲ್ಲಿ ನೀಡಿದ್ದ ಮೈತ್ರಿಕೂಟಕ್ಕೆ ನೀಡಿದ್ದ ಜನಾದೇಶಕ್ಕೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ವಂಚಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಬಿಹಾರದಾದ್ಯಂತ ಬುಧವಾರ ಪ್ರತಿಭಟನೆ ನಡೆಸಿತು.

Advertisement

ನಿತೀಶ್‌ ಕುಮಾರ್‌ ಎಸಗಿದ ವಂಚನೆ ವಿರುದ್ಧ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಪಕ್ಷದ ಜತೆಗಿನ ಮೈತ್ರಿ ಕಡಿದುಕೊಳ್ಳುವುದಕ್ಕೆ ನಿತೀಶ್‌ ಅವರಿಗೆ ಯಾವುದೇ ಕಾರಣಗಳಿಲ್ಲ ಎಂದು ಬಿಜೆಪಿ ಮುಖಂಡರು ಪ್ರತಿಪಾದಿಸಿದ್ದಾರೆ. ಅವರಿಗೆ ಪ್ರಧಾನಮಂತ್ರಿಯಾಗುವ ಮಹತ್ವಾಕಾಂಕ್ಷೆ ಇದೆ. ಬಿಹಾರದಲ್ಲಿ ಅವರು ತಮ್ಮದೇ ಸಾಮರ್ಥ್ಯದಿಂದ ವಿಧಾನಸಭೆ ಚುನಾವಣೆಯನ್ನು ಗೆಲ್ಲಲಿ ಎಂದು ಬಿಜೆಪಿ ಮುಖಂಡರು ಸವಾಲು ಹಾಕಿದ್ದಾರೆ.

“ಮೈತ್ರಿಕೂಟ ಕಾಪಾಡಲು ಯತ್ನಿಸಿದ್ದ ಅಮಿತ್‌ ಶಾ’
ಜೆಡಿಯು ಜತೆಗಿನ ಮೈತ್ರಿಕೂಟ ಉಳಿಸಿಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರಯತ್ನ ಮಾಡಿದ್ದರು. ಈ ನಿಟ್ಟಿನಲ್ಲಿ ಅವರು ನಿತೀಶ್‌ ಕುಮಾರ್‌ ಅವರಿಗೆ ಫೋನ್‌ ಮಾಡಿದ್ದರು ಎಂದು ಬಿಜೆಪಿ ಶಾಸಕ ತಾರಕಿಶೋರ್‌ ಪ್ರಸಾದ್‌ ಹೇಳಿದ್ದಾರೆ. ನಿತೀಶ್‌ ಅವರು ಅತ್ಯಂತ ದೊಡ್ಡ ಕನಸು ಕಾಣುತ್ತಿದ್ದಾರೆ. ಅವರಿಗೆ ಬಿಜೆಪಿ ಬಗ್ಗೆ ನಂಬಿಕೆಯೇ ಇರಲಿಲ್ಲ ಎಂದು ಪ್ರಸಾದ್‌ ಆರೋಪಿಸಿದ್ದಾರೆ.

ಮೈತ್ರಿಕೂಟ ತ್ಯಜಿಸಿದ ನಿತೀಶ್‌ ವಿರುದ್ಧ ಬಿಜೆಪಿ ಪಾಟ್ನಾದಲ್ಲಿ ಬುಧವಾರ ಬೃಹತ್‌ ಪ್ರತಿಭಟನೆ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಬಿಜೆಪಿಯ ರಾಜ್ಯಸಭಾ ಸದಸ್ಯ ಸುಶೀಲ್‌ ಕುಮಾರ್‌ ಮೋದಿ ಕೂಡ ಅಮಿತ್‌ ಶಾ ಫೋನ್‌ ಮಾಡಿದ್ದನ್ನು ಖಚಿತಪಡಿಸಿಕೊಂಡಿದ್ದಾರೆ.

Advertisement

“ನಿತೀಶ್‌ಗೆ ಉಪರಾಷ್ಟ್ರಪತಿ ಹಂಬಲವಿತ್ತು’
ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಉಪರಾಷ್ಟ್ರಪತಿಯಾಗಬೇಕು ಎಂಬ ಹಂಬಲ ಇತ್ತು. ಈ ಬಗ್ಗೆ ಬಿಜೆಪಿ ಬೆಂಬಲ ನೀಡದೇ ಇದ್ದುದಕ್ಕಾಗಿ ಪಕ್ಷದ ಜತೆಗೆ ಮೈತ್ರಿ ಮುರಿದುಕೊಂಡಿದ್ದಾರೆ ಎಂದು ರಾಜ್ಯಸಭೆಯ ಸದಸ್ಯ ಸುಶೀಲ್‌ ಕುಮಾರ್‌ ಮೋದಿ ಆರೋಪಿಸಿದ್ದಾರೆ. ಪಾಟ್ನಾದಲ್ಲಿ ಮಾತನಾಡಿದ ಅವರು, ನಿತೀಶ್‌ ಜತೆಗೆ ಉತ್ತಮ ಬಾಂಧವ್ಯ ಹೊಂದಿರುವುದಕ್ಕಾಗಿಯೇ ಸುಶೀಲ್‌ ಮೋದಿ ಅವರನ್ನು ಪ್ರಮುಖ ಹುದ್ದೆಗಳಿಂದ ಕೈಬಿಡಲಾಗಿದೆ ಎಂಬ ಜೆಡಿಯು ಅಧ್ಯಕ್ಷ ರಾಜೀವ್‌ರಂಜನ್‌ ಸಿಂಗ್‌ ಆರೋಪವನ್ನೂ ಅವರು ತಿರಸ್ಕರಿಸಿದ್ದಾರೆ.

ವರ್ಚಸ್ಸು ಕುಂದಿದೆ: ಪ್ರಶಾಂತ್‌ ಕುಮಾರ್‌
ನಿತೀಶ್‌ ಕುಮಾರ್‌ ಅವರ ವರ್ಚಸ್ಸು ಕುಂದಿದೆ ಎಂದು ಚುನಾವಣಾ ವ್ಯೂಹರಚನೆಕಾರ ಪ್ರಶಾಂತ್‌ ಕಿಶೋರ್‌ ಅಭಿಪ್ರಾಯಪಟ್ಟಿದ್ದಾರೆ. ಈಗ ಇವರು ಹೊಂದಿರುವ ವರ್ಚಸ್ಸು ಟೆಫ್ಲಾನ್‌ ಕೋಟ್‌ (ಅಡುಗೆ ಪಾತ್ರಗಳಿಗೆ ಆಹಾರ ಅಂಟದಂತೆ ಇರುವ ಮೇಲ್ಮೆ„ ಲೇಪನ)ನಂತೆ ಇದೆ ಎಂದು ಹೇಳಿದ್ದಾರೆ. ತಮ್ಮ ಮಾತಿಗೆ ಸಮರ್ಥನೆಯನ್ನು ನೀಡಿದ ಪ್ರಶಾಂತ್‌ 2010ರಲ್ಲಿ ನಿತೀಶ್‌ 117 ಶಾಸಕರನ್ನು ಹೊಂದಿದ್ದರು, 2015ರಲ್ಲಿ 72, ಈಗ 43 ಮಂದಿ ಶಾಸಕರನ್ನು ಹೊಂದಿದ್ದಾರೆ.

ಹೀಗಾಗಿ, ಅವರ ವರ್ಚಸ್ಸು ಕುಂದಿದೆ ಮತ್ತು ಸಂಖ್ಯಾ ಬಲ ಅದನ್ನೇ ಉಲ್ಲೇಖೀಸುತ್ತದೆ ಎಂದು ಹೇಳಿದ್ದಾರೆ. 2024ರ ಲೋಕಸಭೆ ಚುನಾವಣೆಗಾಗಿ ಹೊಸ ಮೈತ್ರಿಕೂಟ ಈಗಿನಿಂದಲೇ ಸಿದ್ಧತೆ ನಡೆಸಬೇಕು. ಇಲ್ಲದಿದ್ದರೆ ಕಷ್ಟವಾದೀತು ಎಂದಿದ್ದಾರೆ. ಈ ಮೈತ್ರಿಕೂಟ ಬಿಹಾರದ ವ್ಯಾಪ್ತಿಗಿಂತ ಹೊರತಾಗಿದೆ ಎಂದರು.

ಹಳೆಯ ಟ್ವೀಟ್‌ ನೆನಪಿಸಿದ ಸಚಿವ ಗಿರಿರಾಜ್‌ ಸಿಂಗ್‌
ಆರ್‌ಜೆಡಿ ಸಂಸ್ಥಾಪಕ ಲಾಲು ಪ್ರಸಾದ್‌ ಯಾದವ್‌ ಅವರ ನಿವಾಸಕ್ಕೆ ಹಾವು ನುಗ್ಗಿದೆ ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಲೇವಡಿ ಮಾಡಿದ್ದಾರೆ. 2017ರಲ್ಲಿ ನಿತೀಶ್‌ ಕುಮಾರ್‌ ಆರ್‌ಜೆಡಿ ಜತೆಗೆ ಇದ್ದ ಮೈತ್ರಿ ಕಡಿದುಕೊಂಡು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದರು. ಆಗ ಲಾಲು ಪ್ರಸಾದ್‌ ನಿತೀಶ್‌ ಅವರನ್ನು ಹಾವು ಎಂದು ವರ್ಣಿಸಿದ್ದರು ಮತ್ತು ಅದು ಆಗಾಗ ಪೊರೆ ಕಳಚಿಕೊಳ್ಳುತ್ತದೆ ಎಂದು ಟ್ವೀಟ್‌ ಮಾಡಿದ್ದರು. ಅದನ್ನೇ ಮರು ಟ್ವೀಟ್‌ ಮಾಡಿ, “ಈಗ ಹಾವು ಲಾಲು ಪ್ರಸಾದ್‌ ನಿವಾಸಕ್ಕೆ ಪ್ರವೇಶಿಸಿದೆ’ ಎಂದಿದ್ದಾರೆ. “ಸ್ವಯಂ ಬಲದಿಂದ ಮುಖ್ಯಮಂತ್ರಿ ಆಗಲು ಸಾಧ್ಯವಾಗದವರು ಈಗ ಪ್ರಧಾನಮಂತ್ರಿ ಹುದ್ದೆಯ ಕನಸು ಕಾಣುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

ರಾಜ್ಯಸಭೆಯಲ್ಲಿ ಕೊಂಚ ಸಮಸ್ಯೆ
ಜೆಡಿಯು ಸಖ್ಯ ಕಡಿದುಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ರಾಜ್ಯಸಭೆಯಲ್ಲಿ ಕೊಂಚ ಪ್ರತಿಕೂಲ ಉಂಟಾಗುವ ಸಾಧ್ಯತೆ ಇದೆ. ರಾಜ್ಯಸಭೆಯಲ್ಲಿ ಜೆಡಿಯು ಒಟ್ಟು ಆರು ಮಂದಿ ಸದಸ್ಯರನ್ನು ಹೊಂದಿದೆ. ಆ ಪಕ್ಷದ ಹರಿವಂಶ ನಾರಾಯಣ ಸಿಂಗ್‌ ಬಿಜೆಪಿ ಬೆಂಬಲದೊಂದಿಗೆ ಸದ್ಯ ಉಪಸಭಾಪತಿಯಾಗಿದ್ದಾರೆ. ಹೀಗಾಗಿ, ಸದ್ಯಕ್ಕೆ ಜೆಡಿಯು ಐವರು ಸದಸ್ಯರನ್ನು ಹೊಂದಿದೆ. 237 ಸದಸ್ಯ ಬಲದ ಸದನದಲ್ಲಿ ಬಿಜೆಪಿಗೆ 91 ಮಂದಿ ಸದಸ್ಯ ಬಲ ಇದೆ ಮತ್ತು ಅದುವೇ ಅತಿದೊಡ್ಡ ಪಕ್ಷವಾಗಿದೆ. ವಿಧೇಯಕಗಳನ್ನು ಅಂಗೀಕಾರಗೊಳಿಸುವ ವೇಳೆ ಎಐಎಡಿಎಂಕೆಯ 4, ಬಿಜೆಡಿಯ 18 ಮತ್ತು ವೈಎಸ್‌ಆರ್‌ಸಿಪಿಯ 11 ಮಂದಿಯ ಬೆಂಬಲ ಪಡೆದುಕೊಳ್ಳಬಹುದು. ಲೋಕಸಭೆಯಲ್ಲಿ ಇಂಥ ಸಮಸ್ಯೆ ಇಲ್ಲ. ಬಿಜೆಪಿಯೊಂದಕ್ಕೇ 272ರಿಂದ ಹೆಚ್ಚಿನ ಬೆಂಬಲ ಇದೆ.

ಬಿಜೆಪಿ ಹಂತ ಹಂತವಾಗಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಯತ್ನಿಸುತ್ತಿದೆ. ಶಿವಸೇನೆಯನ್ನು ದುರ್ಬಲಗೊಳಿಸಲೂ ಅದು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಿತೀಶ್‌ ಕುಮಾರ್‌ ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡದ್ದು ಸ್ವಾಗತಾರ್ಹ ಬೆಳವಣಿಗೆ.
-ಶರದ್‌ ಪವಾರ್‌, ಎನ್‌ಸಿಪಿ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next