Advertisement
ಮಂಗಳೂರು: ಕಿತ್ತು ತಿನ್ನುವ ಬಡತನ. ಒಂದು ಹೊತ್ತಿನ ಊಟಕ್ಕೂ ಕಷ್ಟ ಎನ್ನುವ ಪರಿಸ್ಥಿತಿ. ಉನ್ನತ ವಿದ್ಯಾಭ್ಯಾಸದ ಬಗ್ಗೆ ಅತೀವ ಆಸಕ್ತಿ ಇದ್ದರೂ ಕೈಯಲ್ಲಿ ಕಿಂಚಿತ್ತೂ ಹಣವಿರಲಿಲ್ಲ. ಆದರೂ ಕೂಲಿ ಮಾಡಿ ಹಣ ಕೂಡಿಟ್ಟು ಸೇನೆಗೆ ಸೇರುವ ತನ್ನ ಕನಸನ್ನು ಈಡೇರಿಸಿಕೊಂಡವರು ಯೋಧ ಶ್ರೀಧರ ಎ. ಅಂಚನ್.ಸಹೋದ್ಯೋಗಿಗಳೊಂದಿಗೆ ಶ್ರೀಧರ್ ಅಂಚನ್.
ಪತ್ನಿ ಸೌಮ್ಯಾ ಅವರೊಂದಿಗೆ
Related Articles
ಶ್ರೀಧರ್ ಛಲ ಬಿಡಲಿಲ್ಲ. ಮಂಗಳೂರು ನಗರದಲ್ಲಿ ಬೆಳಗ್ಗೆ 8ರಿಂದ ಸಂಜೆ 4 ಗಂಟೆಯ ವರೆಗೆ ಗಾರೆ ಕೆಲಸ ಮಾಡುತ್ತಿದ್ದರು. ತನ್ನ ಮನೆಯ ಆಸುಪಾಸಿನಲ್ಲಿ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದರು. ಆಗ ಸಿಗುತ್ತಿದ್ದದ್ದು ದಿನಕ್ಕೆ 35 ರೂ. ಸಂಬಳ.
Advertisement
ಕಲಿಯಲೇಬೇಕೆಂಬ ಹಠದಿಂದ ಬೆಳಗ್ಗೆ ಕೆಲಸ ಮಾಡಿ ಸಂಜೆ ಬೆಸೆಂಟ್ ಪಿಯು ಸಂಜೆ ಕಾಲೇಜು ಸೇರಿ ಮೊದಲನೇ ವರ್ಷ ಪಿಯುಸಿ ಕಲಾ ವಿಭಾಗ ಪೂರ್ಣಗೊಳಿಸಿದರು. ಇದಾದ ಬಳಿಕ ಎರಡನೇ ವರ್ಷದ ಪಿಯುಸಿಗೆ ವಾಮದಪದವು ಜೂನಿಯರ್ ಕಾಲೇಜು ಸೇರಿದರು. ಇಲ್ಲಿಂದ ಅವರ ಜೀವನದ ಎರಡನೇ ಇನ್ನಿಂಗ್ಸ್ ಆರಂಭವಾಯಿತು.
ಅದಾಗಲೇ ಕಾರ್ಗಿಲ್ ಯುದ್ಧದ ದೃಶ್ಯಾವಳಿಗಳ ಸುದ್ದಿ ಸೇನೆ ಸೇರ್ಪಡೆ ಬಗ್ಗೆ ಶ್ರೀಧರ್ ಅವರಿಗೆ ವ್ಯಾಪಕ ತುಡಿತವಿತ್ತು. ಪಿಯುಸಿ ವಿದ್ಯಾಭ್ಯಾಸ ಪೂರ್ಣಗೊಂಡ ಸಂದರ್ಭದಲ್ಲಿ ಮಡಿಕೇರಿಯಲ್ಲಿ ಸಿಆರ್‌ಪಿಎಫ್ ಪ್ಯಾರಾ ಮಿಲಿಟರಿ ನೇಮಕಾತಿಗೆ ಕರೆಯಲಾಗಿತ್ತು. ಶ್ರೀಧರ್ ಅವರು ಈ ಆಯ್ಕೆಯನ್ನು ಕೈಚೆಲ್ಲಲಿಲ್ಲ. ಅಲ್ಲಿಗೆ ತೆರಳಿದ್ದೂ ಅಲ್ಲದೆ ಆಯ್ಕೆಯಾಗಿದ್ದರು. ಅನಂತರ ತರಬೇತಿಯನ್ನು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಪಡೆದರು. 2002ರಿಂದ 2005ರ ವರೆಗೆ ನಾಗಾಲ್ಯಾಂಡ್‌ನಲ್ಲಿ ಜಂಗಲ್ ಆಪರೇಷನ್‌ನಲ್ಲಿ ಕಾರ್ಯನಿರ್ವಹಿಸಿದ್ದರು.
ಮೋದಿಗೂ ಭದ್ರತೆ ನೀಡಿದ್ದರುಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಅವರಿಗೆ ಸುಮಾರು 8 ತಿಂಗಳುಗಳ ಕಾಲ ಶ್ರೀಧರ್ ಅವರು ಎನ್‌ಎಸ್‌ಜಿ ಯೋಧರಾಗಿ ಕೆಲಸ ನಿರ್ವಹಿಸಿದ್ದಾರೆ. ಒಂದು ರಾಜ್ಯದಿಂದ ಬೇರೊಂದು ರಾಜ್ಯಕ್ಕೆ ಪ್ರವಾಸ ಮಾಡುತ್ತಿದ್ದ ವೇಳೆ ಮೋದಿ ಅವರ ಬೆಂಗಾವಲಿಗೆ ನಿಂತಿದ್ದರು. ಮೋದಿ ಅವರು ನಮ್ಮನ್ನು ಪ್ರೀತಿಯಿಂದ ಕಂಡಿದ್ದರು. ನಮ್ಮ ಆರೋಗ್ಯದ ಬಗ್ಗೆ ಕೇಳುತ್ತಿದ್ದರು. ಯಾವುದೇ ಕಾರ್ಯಕ್ರಮಕ್ಕೆ ತೆರಳಿದ ಬಳಿಕ ತಿಂಡಿ ತಿಂದ್ರಾ… ಊಟ ಆಯ್ತಾ ಎಂದು ವಿಚಾರಿಸುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಶ್ರೀಧರ್. ಹಿಮಪಾತದಲ್ಲಿ ಕಳೆದ ಸಮಯ
2005 ಮೇ ತಿಂಗಳಲ್ಲಿ ಜಮ್ಮು ಕಾಶ್ಮೀರದ ಕುಕ್ವಾಡ ಜಿಲ್ಲೆಗೆ (ಪಾಕಿಸ್ಥಾನ ಗಡಿಗೆ ಕೇವಲ 6 ಕಿ.ಮೀ.) ವರ್ಗಾವಣೆಯಾಯಿತು. ಇಲ್ಲಿ ಭಯೋತ್ಪಾದಕ ನಿಗ್ರಹ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕಾಶ್ಮೀರದಲ್ಲಾದ ಭಾರೀ ಭೂಕಂಪದ ವೇಳೆ ಹಿಮಪಾತವಾದಾಗ 24 ಗಂಟೆ ಕಾಲ ಮಿಲಿಟರಿ ವಾಹನದೊಳಗೇ ಇದ್ದರು. ಬಳಿಕ ಒಂದು ವರ್ಷ ಕಾಲ ಪುಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ, 2008ರಲ್ಲಿ ಎನ್‌ಎಸ್‌ಜಿ ಬ್ಲ್ಯಾಕ್ ಕಮಾಂಡೋ ಆಗಿ ಭಡ್ತಿ ಹೊಂದಿದರು. 2014ರಲ್ಲಿ ಛತ್ತೀಸ್‌ಗಢದ ನಕ್ಸಲ್ ಆಪರೇಷನ್ ಸ್ಟೇಟ್ ನಾರಾಯಣಪುರದಲ್ಲಿ ಸವಾಲಿನ ನಡುವೆ ಕೆಲಸ ಮಾಡಿದ್ದಾರೆ. ಸದ್ಯ ದಿಲ್ಲಿಯ ಪಾರ್ಲಿಮೆಂಟ್ ಭವನದಲ್ಲಿ ಎನ್‌ಎಸ್‌ಜಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಪ್ಪೊತ್ತಿನ ಊಟಕ್ಕೂ ಕಷ್ಟವಿತ್ತು
ನಾನು ತುಂಬಾ ಕಷ್ಟದಲ್ಲಿ ಬೆಳೆದವನು. ಒಪ್ಪೊತ್ತಿನ ಊಟಕ್ಕೂ ಕಷ್ಟವಿತ್ತು. ದಿನಪತ್ರಿಕೆಗಳಲ್ಲಿ ಕಾರ್ಗಿಲ್ ಯುದ್ದದ ಸುದ್ದಿಯನ್ನು ಓದುತ್ತಿದ್ದೆ. ನಾನು ಕೂಡ ದೇಶ ಸೇವೆ ಮಾಡಬೇಕು ಎಂಬ ಉತ್ಸಾಹ ಬಂತು. ಸ್ನೇಹಿತರು ಕೂಡ ಪ್ರೋತ್ಸಾಹಿಸಿದರು. ಈಗ ನನಗೆ ಹೆಮ್ಮೆ ಎಂದೆನಿಸುತ್ತಿದೆ.
-ಶ್ರೀಧರ್ ಎ. ಅಂಚನ್, ಯೋಧ ಹೆಮ್ಮೆಯಾಗುತ್ತಿದೆ
ನನ್ನ ಪತಿ ಯೋಧ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತಿದೆ. ಯೋಧನನ್ನು ಮದುವೆಯಾಗಲು ನಾನು ಪುಣ್ಯ ಮಾಡಿದ್ದೆ.
-ಸೌಮ್ಯಾ ಎಸ್. ಅಂಚನ್, ಪತ್ನಿ ನವೀನ್ ಭಟ್ ಇಳಂತಿಲ