ಕೊಪ್ಪಳ: ತುಂಗಭದ್ರಾ ಜಲಾಶಯ ಸೇರಿ ರಾಜ್ಯದಲ್ಲಿನ ಜಲಾಶಯಗಳ ಸುರಕ್ಷತೆ ಬಗ್ಗೆ ಅಧ್ಯಯನ ನಡೆಸಲು ತಜ್ಞರನ್ನೊಳಗೊಂಡ ಸುರಕ್ಷಾ ಸಮಿತಿ ರಚನೆ ಮಾಡಿದ್ದು, ತಜ್ಞರ ವರದಿಯಂತೆ ಎಲ್ಲ ಡ್ಯಾಂಗಳ ರಕ್ಷಣೆ ಮಾಡಲು ರಾಜ್ಯ ಸರಕಾರ ಒತ್ತು ನೀಡಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ತಾಲೂಕಿನ ಬಸಾಪುರ ಲಘು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಜತೆ ಮಾತನಾಡಿ, ತುಂಗಭದ್ರಾ ಡ್ಯಾಂನ ಅವಘಡ ಸಂಭವಿಸಿದ ಬಳಿಕ ರಾಜ್ಯದ ಎಲ್ಲ ಡ್ಯಾಂಗಳ ಭದ್ರತೆ ಪರಿಶೀಲನೆಗೆ ತಜ್ಞರ ಸಮಿತಿ ರಚಿಸಲಾಗಿದೆ. ಸಮಿತಿಯು
ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಆರಂಭಿಸಿ ಡ್ಯಾಂಗಳ ಭದ್ರತೆ, ಸುರಕ್ಷತೆ ಕುರಿತು ಪರಿಶೀಲನೆ ನಡೆಸಿದೆ ಎಂದರು.
ತುಂಗಭದ್ರಾ ಡ್ಯಾಂ ವಿಚಾರದಲ್ಲಿ ನಿಮಿಷವೂ ನಾವು ವಿಳಂಬ ಮಾಡದೇ ದಿನದ 24 ಗಂಟೆ ಕೆಲಸ ಮಾಡಿದ್ದೇವೆ. ನಮ್ಮ ಸಚಿವರು, ಶಾಸಕರು ಹಗಲೂ ರಾತ್ರಿ ನಿದ್ದೆ ಮಾಡದೇ ಎಚ್ಚರಿಕೆ ವಹಿಸಿದ್ದರು. ಅವಘಡ ನಡೆದ ತತ್ಕ್ಷಣವೇ ತಜ್ಞ ಕನ್ನಯ್ಯ ನಾಯ್ಡು ಸೇರಿ ಜಿಂದಾಲ್, ನಾರಾಯಣ ಮತ್ತು ಹಿಂದೂಸ್ಥಾನ್ ಕಂಪೆನಿ ಸಂಪರ್ಕಿಸಿದೆವು. ಈ ಕಂಪೆನಿಗಳ ತಜ್ಞರು, ಕಾರ್ಮಿ ಕರು ನಾಲ್ಕು ದಿನಗಳ ಕಾಲ ಶ್ರಮಿಸಿದರು. ತುಂಗಭದ್ರಾ ಡ್ಯಾಂ ಗೇಟ್ ಅಳವಡಿಕೆಗೆ ವಿನ್ಯಾಸ ನಮ್ಮ ಬಳಿಯೇ ಇತ್ತು. ನಾಲ್ಕು ದಿನದಲ್ಲಿ ಆ ಭಗವಂತನ ದಯೆಯಿಂದ ಕಾರ್ಯಾಚರಣೆ ಯಶಸ್ವಿ ಕಂಡಿತು ಎಂದರು.
ಡ್ಯಾಂನ ನೀರು ತಡೆದು ರೈತರನ್ನು ಬದುಕಿಸಿದ್ದೇವೆ. ತುಂಗಭದ್ರಾ ಡ್ಯಾಂಗೆ ಪ್ರತಿ ವರ್ಷ ಅರ್ಧ ಟಿಎಂಸಿ ಹೂಳು ತುಂಬುತ್ತಿರುವ ವಿಷಯ ನಮಗೆ ಗೊತ್ತಿದೆ. ನವಲಿ ಬಳಿ ಸಮಾನಾಂತರ ಡ್ಯಾಂ ನಿರ್ಮಾಣ ವಿಚಾರದಲ್ಲಿ ಏನು ಮಾಡಬೇಕೆಂದು ಸರಕಾರದಲ್ಲಿ ಚರ್ಚೆ ಮಾಡಿ ಬಜೆಟ್ನಲ್ಲಿ ಸೇರಿಸಿದ್ದೇವೆ. ತುಂಗಭದ್ರಾ ಡ್ಯಾಂನ ಕ್ರೆಸ್ಟ್ಗೇಟ್ಗಳ ಬದಲಾವಣೆ ಬಗ್ಗೆ ತಜ್ಞ ಕನ್ನಯ್ಯ ಹೇಳಿದ್ದಾರೆ.
ಅದಕ್ಕೆ ನಮ್ಮ ಸರ್ಕಾರ ಏನು ಮಾಡಬೇಕಿದೆಯೋ ಅದನ್ನು ಮಾಡುತ್ತದೆ. ಡ್ಯಾಂ ಆಯಸ್ಸು ಇನ್ನೂ 30 ವರ್ಷ ಇದೆ ಎನ್ನುತ್ತಾರೆ. ಆದರೆ, ನಾನು ಜಲಾಶಯದ ತಜ್ಞನಲ್ಲ, ನಾವು ರಚಿಸಿದ ಸಮಿತಿ ನೀಡುವ ವರದಿಯನ್ವಯ ಕ್ರಮ ಕೈಗೊಳ್ಳುತ್ತೇವೆ. ತುಂಗಭದ್ರಾ ತುಂಬಿದ ಅನಂತರ ಬಾಗಿನ ಅರ್ಪಿಸಲು ಬರುತ್ತೇವೆ. ಶ್ರಮಿಸಿದವರನ್ನು ಸತ್ಕರಿ ಸುತ್ತೇವೆ ಎಂದರು.