Advertisement

ಕಡೆಗಣನೆಗೆ ಒಳಪಟ್ಟಿದ್ದ ಶಾಸನಗಳ ಅಧ್ಯಯನ

05:17 PM May 26, 2018 | |

ರಾಯಚೂರು: ನಗರದ ವಸ್ತು ಸಂಗ್ರಹಾಲಯದಲ್ಲಿರುವ ಶಾಸನಗಳ ವಿವರ ಸಂಗ್ರಹಕ್ಕೆ ಮುಂದಾದ ಅಧಿಕಾರಿಗಳಿಗೆ ಮೂರು ಶಾಸನಗಳು ಅಧ್ಯಯನಕ್ಕೆ ಒಳಪಡದ ವಿಚಾರ ಗೊತ್ತಾಗಿದೆ. ಹೀಗಾಗಿ ಆ ಮೂರು ಶಾಸನಗಳ
ಅಧ್ಯಯನಕ್ಕೆ ಇಲಾಖೆ ಅಧಿಕಾರಿ ಮುಂದಾಗಿದ್ದಾರೆ.

Advertisement

ಕಾಕತೀಯ ಮನೆತನ, ವಿಜಯನಗರ ಸಾಮ್ರಾಜ್ಯ, ಕಲ್ಯಾಣಿ ಚಾಲುಕ್ಯರು, ಬಹುಮನಿ ಸುಲ್ತಾನರು, ಹೈದರಾಬಾದ್‌ ನಿಜಾಮರು ಸೇರಿ ಅನೇಕ ರಾಜ ಮನೆತನಗಳು ಜಿಲ್ಲೆಯಲ್ಲಿ ಆಳ್ವಿಕೆ ನಡೆಸಿರುವ ಬಗ್ಗೆ ಸಾಕಷ್ಟು ಕುರುಹುಗಳಿವೆ. ಅದಕ್ಕೆ ಸಾಕ್ಷಿ ಎನ್ನುವಂತೆ ಸಾಕಷ್ಟು ಸ್ಮಾರಕಗಳು, ದೇಗುಲಗಳು, ಕೆತ್ತನೆಗಳು, ಶಿಲಾ ಶಾಸನಗಳು ಇಂದಿಗೂ ಪತ್ತೆಯಾಗುತ್ತಿವೆ. ಇನ್ನೂ ಸಾಕಷ್ಟು ಐತಿಹಾಸಿಕ ಕುರುಹುಗಳ ಮೌಲ್ಯ ಅರಿಯದೆ ಜನ ಹಾಳುಗೆಡವಿದ ನಿದರ್ಶನಗಳಿವೆ. ಆದರೆ, ಸಿಕ್ಕಿರುವ ಶಾಸನಗಳನ್ನು ಸಂಗ್ರಹಿಸಿದ ಅಧಿಕಾರಿಗಳು ಮಾತ್ರ ಅವುಗಳನ್ನು ಅಧ್ಯಯನ ಮಾಡದೆ ನಿರ್ಲಕ್ಷ್ಯ ವಹಿಸಿರುವುದು ವಿಪರ್ಯಾಸ.

ಶಾಸನಗಳ ಸಂಗ್ರಹ ಮತ್ತು ರಕ್ಷಣೆ ಬಗ್ಗೆ ವಿಶೇಷ ಆಸಕ್ತಿ ವಹಿಸಿರುವ ಈಗಿನ ಶಾಸನ ಪಾಲಕ (ಕ್ಯುರೇಟರ್‌) ಆರ್‌. ಶೇಷೇಶ್ವರ ಮೂರು ಶಾಸನಗಳ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ. ಅವುಗಳ ಬರಹ ಆಧರಿಸಿ ಜೈನ ಪೀಠ ಶಾಸನ, ಶಾಸನ ಮತ್ತು ಷಣ್ಮುಖ, ಕನ್ನಡ ಶಾಸನ ಎಂದು ಗುರುತಿಸಲಾಗಿದೆ. 

1976ರಲ್ಲಿ ಲಿಂಗಸುಗೂರಿನ ಕರಡಿಗಲ್ಲು ಗ್ರಾಮದಲ್ಲಿ ಜೈನ ಪೀಠ ಶಾಸನ ಪತ್ತೆಯಾಗಿದೆ. ರಾಮೇಶ್ವರ ದೇವಸ್ಥಾನದ ಹತ್ತಿರ 1999ರಲ್ಲಿ ಶಾಸನ ಮತ್ತು ಷಣ್ಮುಖ ಸಿಕ್ಕರೆ, 1999ರಲ್ಲಿ ನಗರದ ಕೃಷಿ ವಿವಿಯಲ್ಲಿ ಕನ್ನಡ ಶಾಸನ ಸಿಕ್ಕಿದೆ. ಶಾಸನಗಳನ್ನು ಆಗಲೇ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿಟ್ಟಿದ್ದು, ಅಧ್ಯಯನ ಮಾತ್ರ ಮಾಡಿಲ್ಲ ಎಂದು ತಿಳಿದು ಬಂದಿದೆ. 

ಶಾಸನಗಳ ವಿಶೇಷತೆಏನು?: ಮೂರು ಶಾಸನಗಳು ಪ್ರತ್ಯೇಕ ಕಾಲಘಟ್ಟದ್ದಾಗಿದೆ. ಜೈನ ಪೀಠ ಶಾಸನವನ್ನು ಮೂರು ಸಾಲಿನ ಹಳೆಗನ್ನಡದಲ್ಲಿ ಕೆತ್ತನೆ ಮಾಡಲಾಗಿದೆ. ಇದು ಕ್ರಿಸ್ತ ಶಕ 12ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದ್ದು. ದೇವಚಂದ್ರ ಭಟ್ಟಾರಕ ಗುರುಗಳ ಹೆಸರಿನಲ್ಲಿ ದೇವರ ಗುಡ್ಡ ಸೇನಬೋವ ರತ್ನಯನು ಪಾರ್ಶ್ವನಾಥ ಮೂರ್ತಿ ಕೆತ್ತನೆ ಮಾಡಿಸಿದ್ದಾರೆ. ಇದರ ರೂವಾರಿ ಚಟ್ಟೋಜನು ಆಗಿರುವನು ಎಂಬ ವಿಷಯ ಉಲ್ಲೇಖೀಸಲಾಗಿದೆ. 

Advertisement

ಶಾಸನ ಮತ್ತು ಷಣ್ಮುಖ ಶಾಸನವು ಕೂಡ ಕ್ರಿಶ 12ನೇ ಶತಮಾನದ ಚಾಲುಕ್ಯರ ಶಾಸನವಾಗಿದೆ. 31 ಸಾಲುಗಳಿಂದ ಕೂಡಿದ ಹಳೆಗನ್ನಡ ಶಾಸನ ಇದು. ಶಾಸನದ ಮೇಲ್ಭಾಗದಲ್ಲಿ ಹಸು, ಕರು, ಯತಿಯ ಚಿತ್ರಗಳಿವೆ. ಇದು ಬಹುಶಃ ಲಿಂಗದ ಚಿತ್ರವಾಗಿರಬಹದು. ಇದನ್ನು ಷಣ್ಮುಖ ಆಕಾರದಲ್ಲಿ ಕೆತ್ತಿರುವುದರಿಂದ ಲಿಂಗವು ಕಾಣಿಸುವುದಿಲ್ಲ. ಇದರಲ್ಲಿ ಕಲ್ಯಾಣ ಚಾಲುಕ್ಯರ ದೊರೆ ಬಗ್ಗೆ ಹೊಗಳಿದ್ದು, ಮಂಡಳೇಶ್ವರ ಐಹೇಯರ ವಂಶದ ಬಿಜ್ಜನೃಪಾಳ ಉಲ್ಲೇಖವಾಗಿದೆ. ಈ ಶಾಸನದ ಇನ್ನೊಂದು ಭಾಗದಲ್ಲಿ ವಿಜಯನಗರ ಕಾಲದ ಷಣ್ಮುಖನನ್ನು ಕೆತ್ತನೆ ಮಾಡಲಾಗಿದೆ.

ಕನ್ನಡ ಶಾಸನವು 19 ಸಾಲುಗಳಿಂದ ಕೂಡಿದೆ. ಇದರ ಮೇಲ್ಭಾಗದಲ್ಲಿ ಸೂರ್ಯ, ಚಂದ್ರ, ಲಿಂಗ, ಹಸು ಕರು ಚಿತ್ರಗಳನ್ನು ಕೆತ್ತಲಾಗಿದೆ. ಇದು ಕ್ರಿಶ 11ನೇ ಶತಮಾನದ್ದಿರಬಹುದು. ಜಯಸಿಂಹ ಜಗದೇಕಮಲ್ಲನ ಶಾಸನವಾಗಿದ್ದು, ಇದರಲ್ಲಿ ಮಿದ್ದಲು ಸಂಕಿಯ ಯಿಕೇಶ್ವರ ದೇವರಿಗೆ ಮಾಸಂಗಿಯ ಕಾಳಪ್ರಿಯರ ದೇವರ ಅಳತೆ ಕೋಲಿನಿಂದ ಅಳತೆ ಮಾಡಿ ಗದ್ದೆ, ತೋಟ ಹಾಗೂ 12 ಮನೆಗಳನ್ನು ದಾನ ನೀಡಿರುವ ವಿಚಾರವು ಶಾಸನದಿಂದ ತಿಳಿದು ಬರುತ್ತದೆ. ಶಾಸನದ ಕೊನೆಯಲ್ಲಿ ಪಾಪಶಯದೊಂದಿಗೆ ಮುಕ್ತಾಯವಾಗಿದೆ. ಶಾಸನ ರಚಿಸಿದವರ ಹೆಸರು ಅಸ್ಪಷ್ಟವಾಗಿದೆ.
 
ಜಿಲ್ಲೆಯ ಮೇಲೆ ಸಾಕಷ್ಟು ರಾಜ ಮನೆತನಗಳ ಪ್ರಭಾವ ಇತ್ತು ಎಂಬುದನ್ನೂ, ಜೈನ ಧರ್ಮವು ಈವರೆಗೆ ಹಬ್ಬಿತ್ತು ಎಂಬುದೂ ಸೇರಿ ಶಾಸನಳಿಂದ ಅನೇಕ ವಿಚಾರಗಳು ತಿಳಿದು ಬರುತ್ತದೆ. ಇಂಥ ಶಾಸನಗಳ ಅಧ್ಯಯನಕ್ಕೆ ಮುಂದಾದ ಇಲಾಖೆ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಸಿದ್ಧಯ್ಯಸ್ವಾಮಿ ಕುಕನೂರು 

Advertisement

Udayavani is now on Telegram. Click here to join our channel and stay updated with the latest news.

Next