ಬೀಜಿಂಗ್: ಭೂಮಿಯ ಉಪಗ್ರಹ ಚಂದ್ರನ ಕುರಿತು ಮಾನವ ಸದಾ ಕುತೂಹಲಿಯಾ ಗಿದ್ದಾನೆ. ಇದುವರೆಗೂ ಚಂದ್ರನ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ.
ಗಗನಯಾತ್ರಿಕರು ಚಂದ್ರನಲ್ಲಿಗೆ ಹೋಗಿ ಅಧ್ಯಯನ ನಡೆಸಿದ್ದಾರೆ. ಇದಕ್ಕೆ ಹೊಸ ಸೇರ್ಪಡೆಯಂಬಂತೆ, ಚಂದ್ರನ ಮೇಲ್ಮೈ ನ ಹೊರಪದರದ ಕೆಲವು ಭಾಗಗಳಲ್ಲಿ ಆಯಸ್ಕಾಂತೀಯ ವಸ್ತುಗಳು ಇರುವ ಕುರುಹುಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ಇನ್‌ಸ್ಟಿಟ್ಯೂಟ್ ಆಫ್ ಜಿಯೋಕೆಮಿಸ್ಟ್ರಿ ವಿಭಾಗದ ಭೂವಿಜ್ಞಾನಿ ಝವಾಂಗ್ ಗುವೊ ನೇತೃತ್ವದಲ್ಲಿ ವಿಜ್ಞಾನಿಗಳು ಸಂಶೋಧನೆ ಕೈಗೊಂಡಿದ್ದು, ಈ ಕುರಿತು “ನೇಚರ್ ಕಮ್ಯುನಿಕೇಶನ್ಸ್’ ಎಂಬ ನಿಯತಕಾಲಿಕೆಯಲ್ಲಿ ತಮ್ಮ ಪ್ರಬಂಧವನ್ನು ಪ್ರಕಟಿಸಿದ್ದಾರೆ.
2020ರ ಡಿಸೆಂಬರ್‌ನಲ್ಲಿ ಚೀನದ “ಚಾಂಗ್ ಇ5′ ಬಾಹ್ಯಾಕಾಶ ನೌಕೆ ಚಂದ್ರನಲ್ಲಿರುವ ವಸ್ತುಗಳನ್ನು ಭೂಮಿಗೆ ತಂದಿತು. ಇದರ ಸಹಾಯದೊಂದಿಗೆ ವಿಜ್ಞಾನಿ ಗಳು ಸಂಶೋಧನೆ ನಡೆಸಿದ್ದು, ಇದರಲ್ಲಿ ಹೆಚ್ಚು ಅಯಸ್ಕಾಂತೀಯ ಕಬ್ಬಿಣದ ಖನಿಜ “ಮ್ಯಾಗ್ನೆ ಟೈಟ್ ಕಣಗಳು’ ಇರುವುದನ್ನು ಪತ್ತೆಹಚ್ಚಿದ್ದಾರೆ.