Advertisement

ಗೋಕರ್ಣ ತೀರದ ಸ್ಟಡಿ ಸರ್ಕಲ್‌

09:53 AM Aug 18, 2019 | mahesh |

ಗೋಕರ್ಣದ “ಸ್ಟಡಿ ಸರ್ಕಲ್‌’, ಜಗತ್ತಿನ ಜ್ಞಾನದಾಹಿಗಳನ್ನು ತನ್ನತ್ತ ಸೆಳೆದ, ಅಪರೂಪದ ಗ್ರಂಥಾಲಯ. ಪುರಾತನ ಕಾಲದ ಮರದ ತೊಗಟೆಯ ಮೇಲಿನ ಲೇಖನದಿಂದ, ಇತ್ತೀಚಿನ ಡಿಜಿಟಲೀಕರಣಗೊಂಡ ಕೃತಿಗಳ ವರೆಗೂ, ಪ್ರತಿ ಗ್ರಂಥವನ್ನೂ, ಜಗದ ಮೂಲೆಯಿಂದ ತರಿಸಿಕೊಂಡು, ಹೆತ್ತ ಕೂಸಿನಂತೆ ಕಾಪಿಟ್ಟುಕೊಂಡಿದ್ದ ಜೀವ, ಗಣಪತಿ ಮಾಬ್ಲೇಶ್ವರ ವೇದೇಶ್ವರರು. ಒಂದು ಪಂಚೆ, ಬನಿಯನ್‌, ಒಂದು ಟವೆಲ್‌ನೊಂದಿಗೆ ಆಯಷ್ಯ ಮುಗಿಸಿ, ಬರೀ ನೆನಪುಗಳನ್ನಷ್ಟೇ ಉಳಿಸಿ, ಇತ್ತೀಚೆಗೆ ಇಹದಿಂದ ದೂರ ನಡೆದಿದ್ದಾರೆ…

Advertisement

ವೇದ ದೃಷ್ಠಾರರೆಂದು ಖ್ಯಾತಿ ಪಡೆದ ಮಹರ್ಷಿ ದೈವರಾತರ ಅಳಿಯರಾಗಿದ್ದ ಗಣಪತಿ ಮಾಬ್ಲೇಶ್ವರ ವೇದೇಶ್ವರರು, ಗೋಕರ್ಣದಲ್ಲಿ ಕಟ್ಟಿದ್ದು ವಾಚನಾಲಯ ಅನ್ನುವುದಕ್ಕಿಂತ, ಜ್ಞಾನದೇಗುಲ ಎಂದು ಕರೆದರೆ ನಿಜವಾದ ಗೌರವ. ಒಂದು ಪಂಚೆ, ಬನಿಯನ್‌, ಒಂದು ಟವೆಲ್‌ನೊಂದಿಗೆ ಆಯುಷ್ಯದ ಬಹುಪಾಲು ಕಳೆದ ಈ ಜೀವ ಸಂಗ್ರಹಿಸಿದ್ದು, ಲೋಕದ ಅಪಾರ ಜ್ಞಾನ ಸಂಪತ್ತು. ಬದುಕಿದ್ದು ಸಂತನಂತೆ. ಪುಸ್ತಕಗಳನ್ನು ಆಯ್ದು, ಓದಿ, ಅದನ್ನು ಸಂಗ್ರಹಿಸುತ್ತಾ ಹೋದಂತೆ, ಲೋಕದ ಪರಿವೆಯೇ ಇಲ್ಲದವರಂತೆ ವಾಚನಾಲಯದ ಮಧ್ಯೆಯೇ ಬಹುಪಾಲು ಆಯುಷ್ಯ ಕಳೆದರು. ಅವರು ತಮ್ಮ ಕೊನೆ ಉಸಿರನ್ನು ನಿಲ್ಲಿಸಿದ್ದು ಕೂಡ, ಇದೇ ಗ್ರಂಥಾಲಯದ ರಾಶಿ ರಾಶಿ ಪುಸ್ತಕಗಳ ನಡುವೆಯೇ! 1939ರಲ್ಲಿ ಆರಂಭಿಸಿದ “ಬಾಲಸಂಘ’ ಎಂಬ ಗ್ರಂಥಾಲಯ, “ಸ್ಟಡಿ ಸರ್ಕಲ್‌’ ಆಗಿ ಬೆಳೆದು ಜಗತ್ತಿನ ಜ್ಞಾನದಾಹಿಗಳನ್ನು ತನ್ನತ್ತ ಸೆಳೆದಿದ್ದೇ ಒಂದು ವಿಸ್ಮಯ.

ತಾಡವಾಲೆ ಗ್ರಂಥಗಳಿಗೂ ಪೂರ್ವದ ಭೋಜಪತ್ರವೆಂಬ ಮರದ ತೊಗಟೆಯ ಮೇಲೆ ಬರೆದ ಲೇಖನ, ಕೃತಿಗಳಿಂದ ಆರಂಭಿಸಿ, ಅತ್ಯಾಧುನಿಕ ಆಫ್ಸೆಟ್‌ ಮಾತ್ರವಲ್ಲ; ಇತ್ತೀಚಿಗೆ ಡಿಜಿಟಲೀಕರಣಗೊಂಡ ಕೃತಿಗಳೂ ಈ ಗ್ರಂಥಾಲಯದ ವಿಶೇಷ‌ ದಾಖಲೆ. ಬಿ.ಬಿ.ಸಿ., ದೂರದರ್ಶನಗಳು ಇವರ ವಾಚನಾಲಯವನ್ನು ಎರಡು ದಶಕದ ಹಿಂದೆಯೇ ಲೋಕಕ್ಕೆ ಪರಿಚಯಿಸಿದ್ದವು. ಗೋಕರ್ಣದ ಗಣಪತಿ ದೇಗುಲದ ಎಡಬದಿಗಿರುವ 3 ಅಂತಸ್ತಿನ ಇವರ ದೊಡ್ಡ ಮನೆಯ ತುಂಬ ಪುಸ್ತಕಗಳೇ ಇದ್ದವು. ಮುದ್ರಣಕ್ಕೆ ಅನುಕೂಲವಿಲ್ಲದಾಗ, ಹಣ ಉಳಿತಾಯದ ದೃಷ್ಟಿಯಿಂದ “ಜುಮ್ಮನ’ ಎಂಬ ಮರದ ದಪ್ಪ ಮುಳ್ಳನ್ನು ತೆಗೆದು, ಅದರಲ್ಲಿ ಅಕ್ಷರ ಕೆತ್ತಿ, ಲೆಟರ್‌ಹೆಡ್‌ ಮತ್ತು ರಬ್ಬರ್‌ ಸ್ಟಾಂಪ್‌ ಮಾಡಿಕೊಂಡಿದ್ದರು. ಪುಸ್ತಕಗಳ ಬೈಂಡಿಂಗ್‌ ಅವರೇ ಮಾಡುತ್ತಿದ್ದರು. ಗೋಕರ್ಣಕ್ಕೆ ವಿದೇಶದಿಂದ ಬರುವ ಪ್ರವಾಸಿ ಜ್ಞಾನದಾಹಿಗಳಿಗೆ ಇವರ ವಾಚನಾಲಯ ಮಹಾಬಲನ ಸನ್ನಿಧಿಯಂತಿತ್ತು.

ಹೆಗಲು ಕೊಟ್ಟ ಫ್ರಾನ್ಸ್‌
ಫ್ರಾನ್ಸ್‌ ಸರ್ಕಾರದ ಪ್ರತಿನಿಧಿಯಾಗಿ ಬಂದಿದ್ದ ಎಲೈಯಸ್‌ ಟ್ಯಾಬೆಟ್‌, ಗೋಕರ್ಣಕ್ಕೆ ಎಂದಿನ ಅತಿಥಿ. ಕಳೆದ 20 ವರ್ಷಗಳಿಂದ ಈತನಿಗೆ ಗೋಕರ್ಣ ಪರಿಚಿತ. 10 ವರ್ಷದ ಹಿಂದೆ ಇಲ್ಲಿನ “ಸ್ಟಡಿ ಸರ್ಕಲ್‌’ಗೆ ಒಮ್ಮೆ ಭೇಟಿಯಿತ್ತ. ಅಲ್ಲಿರುವ ಮಹತ್ವದ ಅತಿವಿರಳ ಪುಸ್ತಕಗಳು, ಪುರಾತನ ಪುಸ್ತಕಗಳು, ಎಲ್ಲವನ್ನೂ ಕಂಡು ದಂಗಾಗಿ ಹೋದ. ಅದರ ಮಾಲೀಕರಾದ ಜಿ.ಎಂ. ವೇದೇಶ್ವರ ಅವರ ಪರಿಚಯ ಮಾಡಿಕೊಂಡು, ಅವರಿಗೆ ಏನಾದರೂ ನೆರವಾಗಬೇಕೆಂಬ ಹಂಬಲದಿಂದ ಫ್ರಾನ್ಸ್‌ನ ಸಹವಾಸಿಗಳೊಂದಿಗೆ ಸೇರಿ “Pandrata Circle’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ. ಸ್ಟಡಿ ಸರ್ಕಲ್‌ನ ಬಗ್ಗೆ ಒಂದು ಪರಿವಿಡಿಯನ್ನು ತಯಾರಿಸಿ, ಸಾಹಿತ್ಯಾಸಕ್ತರಿಗೆ ವಿವರಿಸಿದ. ಅನೇಕ ಕಂಪನಿಗಳ, ದಾನಿಗಳ ಸಹಾಯದಿಂದ ದೇಣಿಗೆ ಸಂಗ್ರಹಿಸಿ, ಗೋಕರ್ಣದ ಸ್ಟಡಿ ಸರ್ಕಲ್‌ಗೆ ಹೊಸ ರೂಪ ಕೊಡುತ್ತಿದ್ದಾರೆ. ಫ್ರಾನ್ಸ್‌ನ ರಾಯಭಾರಿ ಕಚೇರಿಯೂ ಈತನ ಕೆಲಸವನ್ನು ನೋಡಿ 5,000 ಯೂರೋ ದೇಣಿಗೆ ನೀಡಿತ್ತು. ವೇದೇಶ್ವರರ ಮನೆಯ ಹಿಂದಿನ ರಾಮತೀರ್ಥದ ಗುಡ್ಡದಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ ಭವ್ಯ ಕಟ್ಟಡ ಕಟ್ಟಿಸಿಕೊಟ್ಟು ಪುಸ್ತಕಗಳನ್ನು ವೇದೇಶ್ವರರೊಂದಿಗೆ ಅಲ್ಲಿ ಸುರಕ್ಷಿತಗೊಳಿಸಿದ್ದಾರೆ. ವೇದೇಶ್ವರರ ಸಂಗ್ರಹಗಳಿಗೆ ಡಿಜಿಟಲೀಕರಣದ ಸ್ಪರ್ಶ ಸಿಕ್ಕಿದೆ.

ಗೌರೀಶರ ಜ್ಞಾನದ ಗೂಡು
ಗೌರೀಶ ಕಾಯ್ಕಿಣಿಯವರು ಈ ವಾಚನಾಲಯಕ್ಕೆ “ಸ್ಟಡಿ ಸರ್ಕಲ್‌’ ಎಂದು ಹೆಸರಿಟ್ಟರು. ವಾಚನಾಲಯದಲ್ಲೇ ಬಹುಕಾಲ ಕಳೆದು ಸಾರ್ಥಕ ಪಡಿಸಿಕೊಂಡವರು ಅವರೊಬ್ಬರೇ! ನಾಡಿನ ಪ್ರಸಿದ್ಧ ಸಾಹಿತಿಗಳಾದ ಗೋಕಾಕ್‌, ಕಾರಂತ, ಅಡಿಗರನ್ನು ದೂರದಿಂದಲೇ ತನ್ನತ್ತ ಸೆಳೆದ ಗ್ರಂಥಾಲಯವಿದು. ವೇದೇಶ್ವರರು, ಪ್ರತಿವರ್ಷವೂ ಜಗತ್ತಿನ ಬೇರೆಬೇರೆ ಭಾಗಗಳಿಗೆ ಪತ್ರಬರೆದು, 600-700 ಪುಸ್ತಕಗಳನ್ನು ತರಿಸಿಕೊಳ್ಳುತ್ತಿದ್ದರು.

Advertisement

ಕೂಸಿನ ಉಪಚಾರದಂತೆ…
ನಾಡು, ದೇಶ ಗುರುತಿಸಲಿಲ್ಲ, ಸಹಕರಿಸಲಿಲ್ಲ, ಪ್ರಯೋಜನವನ್ನೂ ಪಡೆಯಲಿಲ್ಲ. ಇದಾವುದನ್ನೂ ವೇದೇಶ್ವರರು ಬಯಸಿರಲೇ ಇಲ್ಲ. ಜನ ಬಂದು ಓದಿ ಜ್ಞಾನದಾಹ ತಣಿಸಿಕೊಳ್ಳಲಿ ಎಂಬ ಬೃಹದಾಸೆ ಅವರಿಗಿತ್ತು. ಅದೂ ಪೂರ್ತಿ ಫ‌ಲಿಸಲಿಲ್ಲ. ಯಾವುದೋ ದೇಶದ ಜನ ಬಂದು ಗುರುತಿಸಿ, ಸುರಕ್ಷಿತಗೊಳಿಸಿ ಹಂಚಿದಷ್ಟು ಕಡಿಮೆಯಾಗದ ಜ್ಞಾನವನ್ನು ತಾವು ಪಡೆದುಕೊಂಡಿದ್ದಾರೆ, ಈ ಮಟ್ಟಿಗೆ ವೇದೇಶ್ವರರ ತಪಸ್ಸು ಫ‌ಲನೀಡಿದೆ. ಮನೆಯಲ್ಲೇ ಗ್ರಂಥಾಲಯವಿದ್ದಾಗ 24 ತಾಸು ಗಂಡ- ಹೆಂಡತಿ ಇಬ್ಬರೂ ಬಂದವರನ್ನು ನಗುನಗುತ್ತಾ ಮಾತನಾಡಿಸುತ್ತಾ, ಒಂದು ಕಪ್‌ ಚಹಾ ಕೊಟ್ಟು, ನಾವು ಕೇಳಿದ ಪುಸ್ತಕಗಳನ್ನು ಮೆತ್ತಗೆ ತಂದುಕೊಟ್ಟು, ನಾವು ಓದುತ್ತಿದ್ದರೆ, ಅವರು ಕಪಾಟಿನಲ್ಲಿರುವ ಪುಸ್ತಕಗಳ ಮೇಲೆ ಪ್ರೀತಿಯಿಂದ ಕೈಯಾಡಿಸುತ್ತ, ಪುಟ್ಟ ಮಕ್ಕಳನ್ನು ಮಲಗಿಸುವಂತೆ ಹೊಂದಿಸುತ್ತಿದ್ದರು. ಮಕ್ಕಳಿಗೆ ಜ್ವರ ಬಂದಾಗ ಬೆಚ್ಚಗೆ ಹೊದಿಸಿದಂತೆ ಮಳೆಗಾಲದಲ್ಲಿ ಪುಸ್ತಕಗಳನ್ನು ಬಟ್ಟೆಯಲ್ಲಿ ಕಟ್ಟಿ, ಕಪಾಟಿನಲ್ಲಿ ಸೇರಿಸಿಡುತ್ತಿದ್ದರು. ಗಾಯಗೊಂಡ ಮಗುವನ್ನು ಸಂತೈಸಿ, ಬ್ಯಾಂಡೇಜ್‌ ಕಟ್ಟುವಂತೆ ಹರಿದ ಪುಸ್ತಕಗಳನ್ನು ಬೈಂಡಿಂಗ್‌ ಮಾಡುತ್ತಿದ್ದರು. ಜೀವನಕ್ಕಿಂತ ಹೆಚ್ಚಿನ ಪ್ರೀತಿಯನ್ನು ಪುಸ್ತಕಗಳ ಮೇಲೆ ತೋರುತ್ತಾ ಸಂತನಂತೆ ಬಾಳಿ, ಸಂತೃಪ್ತಿಯಿಂದ ಹೊರಟು ಹೋಗಿದ್ದಾರೆ, ಈ ಯುಗಪುರುಷ.

ಇಲ್ಲಿನ ಗ್ರಂಥ ಸಂಪತ್ತು…
ದೇವನಾಗರಿ ಲಿಪಿಯ 4000ಕ್ಕೂ ಹೆಚ್ಚು ಪುಸ್ತಕಗಳು; ಕನ್ನಡ, ಸಂಸ್ಕೃತ, ಇಂಗ್ಲಿಷ್‌, ಲ್ಯಾಟಿನ್‌ ಭಾಷೆಗಳ ಸಹಿತ 38ಕ್ಕೂ ಹೆಚ್ಚು ಭಾಷೆಗಳ, 175 ವರ್ಷಗಳ ಹಿಂದಿನ ಅಪರೂಪದ ಕೃತಿಗಳು, ತಾಳೆಓಲೆ ಗ್ರಂಥಗಳು, ನಾಣ್ಯ ಮತ್ತು ಹಿಮಾಚಲ ಪ್ರದೇಶ ಹಾಗೂ ನೇಪಾಳದ 20 ಅಡಿ ಎತ್ತರದ ಮತ್ತು ವಿಸ್ತಾರದ ವಿಶಾಲ ಕಾಲಚಕ್ರ ಮೊದಲಾದ ಪೇಂಟಿಂಗ್‌ಗಳು ಇವರ ಸಂಗ್ರಹದಲ್ಲಿವೆ. ಮೈಸೂರು ಮಹಾರಾಜರು ಪ್ರಕಟಿಸಿದ ಋಗ್ವೇದ, ಸಾಯಣ ಭಾಷ್ಯದ ರೊಯಲ್‌ ಅಳತೆಯ 36 ಭಾಗಗಳ ಸಹಿತ ವಿರಳ ಗ್ರಂಥಗಳಿವೆ.

ಪುಸ್ತಕಗಳ ನಡುವೆ “ಬುಕ್‌ ಮಾರ್ಕ್‌’ನಂತೆ ಬಾಳಿದ ಮೌನಿ
ಡಾ. ರಾಧಾಕೃಷ್ಣನ್‌, ಡಾ. ರಾಜೇಂದ್ರ ಪ್ರಸಾದ್‌, ವಿಜ್ಞಾನಿ ಡಾ. ಸಿ.ವಿ. ರಾಮನ್‌ ಮೊದಲಾದವರ ಹಸ್ತಾಕ್ಷರದೊಂದಿಗೆ ಪುಸ್ತಕಗಳಿವೆ. ಮಕ್ಕಳಿಗೆ ಬೇಕಾದ ಅಪರೂಪದ ಪುಸ್ತಕಗಳೂ ಇಲ್ಲಿವೆ.
 - ಜಯಂತ ಕಾಯ್ಕಿಣಿ

ಮಿಶ್ರ ರೂಪಕದಂತಿರುವ ಗೋಕರ್ಣದ ಆತ್ಮಸಾಕ್ಷಿಯಂತಿದ್ದರು, ವೇದೇಶ್ವರರು. ಅವರು ಸುಮ್ಮನೆ ಕೂತಿದ್ದನ್ನು ಯಾರೂ ನೋಡಿಲ್ಲ. ಹಳೇ ಪುಸ್ತಕಗಳನ್ನು ಹೊಲಿದು, ಹೊಸದಾಗಿ ಬೈಂಡ್‌ ಹಾಕುವುದು, ಯಕ್ಷಗಾನ- ನಾಟಕಗಳ ವೇಷಭೂಷಣ ಮಾಡುವುದು, ಉಪವನ, ಅರಮನೆ ರಸ್ತೆಯ ಸೀನ್‌ ಇತ್ಯಾದಿ ರಂಗಭೂಮಿಯ ಪರದೆಗಳನ್ನು ಚಿತ್ರಿಸಿ ತಯಾರಿಸುವುದು, ನಾಡಿನ ಎಲ್ಲ ಸಾಹಿತಿಗಳೊಂದಿಗೆ ಪತ್ರ ಸಂಪರ್ಕದಲ್ಲಿದ್ದುಕೊಂಡು, ಸ್ವತಃ ಹೋಗಿ, ಪುಸ್ತಕಗಳನ್ನು ಸಂಗ್ರಹಿಸುವುದು… ಇಂಥ ಕೆಲಸಗಳಲ್ಲಿ ಅವರು ಸದಾ ತತ್ಪರ. ಪುಸ್ತಕಗಳ ನಡುವೆ “ಬುಕ್‌ ಮಾರ್ಕ್‌’ನಂತೆ ಬಾಳಿದ ಮೌನಿ. ಗೋಕರ್ಣದ ಊರಿಗೆ ಒಂದು ಬೌದ್ಧಿಕ ಅರವಟ್ಟಿಗೆ ಒದಗಿಸಿದ ಸರಳ ಸಜ್ಜನ. ನನ್ನ ತಂದೆಯವರ ಖಾಸಾ ಬಂಧು. ಗೌರೀಶರ ಜ್ಞಾನಾರ್ಜನೆಯಲ್ಲಿ ವೇದೇಶ್ವರರ ಸಂಗ್ರಹದ ಪುಸ್ತಕಗಳ ಸಾಂಗತ್ಯ ದೊಡ್ಡ ಪಾತ್ರ ವಹಿಸಿದೆ.

ವೇದೇಶ್ವರರ ಬಳಗಕ್ಕೆ “ಸ್ಟಡಿ ಸರ್ಕಲ್‌’ ಅಂತ ಹೆಸರು ಕೊಟ್ಟಿದ್ದು ಗೌರೀಶರು. ಕನ್ನಡದಲ್ಲಿ “ವ್ಯಾಸಂಗ ಗೋಷ್ಠಿ’ ಅಂತ ಕರೆಯುತ್ತಿದ್ದರು. ಐವತ್ತರ ದಶಕದಲ್ಲೇ ಅವರೆಲ್ಲ ಸೇರಿ, ಗೋಕರ್ಣದಿಂದ “ಪರ್ಣಕುಟಿ’ ಗ್ರಂಥಮಾಲೆಯನ್ನು ಆರಂಭಿಸಿದ್ದರು.

ಗ್ರಂಥಾಲಯದಲ್ಲಿ ವರ್ತಮಾನ ಪತ್ರಿಕೆಗಳ ವಿಭಾಗ ಬೇರೆ ಇತ್ತು. ಅಲ್ಲಿ ಅವು ಹಾರದಂತೆ, ಸುಂದರ ಕಲಾತ್ಮಕ ನಾನಾ ನಮೂನೆಯ, ಅವರೇ ಸಂಗ್ರಹಿಸಿ ಪಾಲಿಷ್‌ ಮಾಡಿದ ಬೆಣಚುಗಲ್ಲುಗಳನ್ನು ಇಡುತ್ತಿದ್ದರು. ಜುಮ್ಮಿನ ಕಾಲಿನ ಮರದ ದೊಡ್ಡ ಮುಳ್ಳುಗಳನ್ನು ತಂದು ಅದರಲ್ಲಿ ಕೆತ್ತಿ, ಕಲಾತ್ಮಕ ಮುದ್ರೆ ಮಾಡುತ್ತಿದ್ದರು.

– ಜೀಯು ಭಟ್‌

Advertisement

Udayavani is now on Telegram. Click here to join our channel and stay updated with the latest news.

Next