Advertisement

ಗದ್ದೆಗಿಳಿದು ಪೈರು ಕಟಾವು ಮಾಡಿದ ವಿದ್ಯಾರ್ಥಿಗಳು

01:16 PM Nov 13, 2017 | |

ದೇರಳಕಟ್ಟೆ: ವಿದ್ಯಾರ್ಥಿಗಳಿಂದ ನೇಜಿ ನಾಟಿ ಮಾಡಿಸಿ, ಭತ್ತ ಬೆಳೆಯುವ ವರೆಗೆ ವಿವಿಧ ಹಂತಗಳ ಮಾಹಿತಿ ನೀಡಿ, ಕೃಷಿ ಪಾಠ ಹೇಳಿಕೊಡುವ ಹಲವು ಶಿಕ್ಷಣ ಸಂಸ್ಥೆಗಳು ಇವೆ. ಆದರೆ, ಇಲ್ಲೊಂದು ಆಂಗ್ಲ ಮಾಧ್ಯಮ ಶಾಲೆ ನೇಜಿ ನಾಟಿಗೆ ಸೀಮಿತವಾಗದೆ, ಭತ್ತದ ಕಟಾವನ್ನೂ ವಿದ್ಯಾರ್ಥಿಗಳಿಂದಲೇ ಮಾಡಿಸಿ, ಭತ್ತ ಕೃಷಿಯ ಸಂಪೂರ್ಣ ಪರಿಚಯ ಮಾಡಿಸಿದೆ.

Advertisement

ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ನೇಜಿ ನಾಟಿ, ಭತ್ತದ ಕಟಾವು ನಡೆಸುವ ಮೂಲಕ ಕೃಷಿ ಪಾಠದ ಮಾಹಿತಿ ಪಡೆದರು. ಕುತ್ತಾರು ಭಂಡಾರಬೈಲಿನ ರಾಮ ನಾಯ್ಕ ಅವರ ಒಂದು ಎಕರೆಯ ತಿಮಾರು ಗದ್ದೆಯಲ್ಲಿ ಮೂರು ತಿಂಗಳ ಹಿಂದೆ ನಾಟಿ ಮಾಡಿದ್ದರು. ಈಗ ಬೆಳೆದು ನಿಂತ ಭತ್ತದ ಬೆಳೆಯನ್ನು ಕಟಾವು ಮಾಡಿ, ಬೇರ್ಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರ ಮಾರ್ಗದರ್ಶನಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು, ಸಹ ಶಿಕ್ಷಕರು ಸೇರಿಕೊಂಡು ಕಟಾವು ನಡೆಸಿ ಭತ್ತವನ್ನು ಬೇರ್ಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಬೆಳಗ್ಗಿನಿಂದ ಸಂಜೆಯವರೆಗೂ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಭತ್ತ ಬೇಸಾಯ ಮತ್ತು ಅದರ ಫಸಲಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಸ್ಥಳೀಯ ಕೃಷಿಕರಾದ ಬಾಬು ಶೆಟ್ಟಿ ದೇಸೋಡಿ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಸೌಮ್ಯಾ ಆರ್‌. ಶೆಟ್ಟಿ, ಮುಖ್ಯಶಿಕ್ಷಕಿ ನಯೀಮ್‌ ಹಮೀದ್‌, ಶಿಕ್ಷಕರಾದ ರವಿ ಕುಮಾರ್‌ ಕೋಡಿ, ರಮೇಶ್‌ ಪೆರಾಡಿ, ಭಾರತಿ, ದೀಕ್ಷಾ ಸಹಕರಿಸಿದರು.

ಹುಲ್ಲು, ಅಕ್ಕಿ ದೇಣಿಗೆ
ಒಂದು ಎಕರೆ ಭತ್ತದ ಕೃಷಿಯಲ್ಲಿ 3000ಕ್ಕೂ ಹೆಚ್ಚು ಕಟ್ಟು ಬೈಹುಲ್ಲು ಬೆಳೆದಿದ್ದು, ಇದನ್ನು ಪಜೀರು ಗೋವನಿತಾಶ್ರಯದ ಗೋಶಾಲೆಗೆ ಹಸ್ತಾಂತರಿಸಿದ್ದಾರೆ. ಭತ್ತದ ಫಸಲನ್ನು ಅಕ್ಕಿಯಾಗಿ ಪರಿವರ್ತಿಸಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತರು ನಡೆಸುವ ಮೂರು ಆಶ್ರಮಗಳಿಗೆ ದಾನವಾಗಿ ನೀಡಲಾಗುವುದು. ಕುತ್ತಾರಿನ, ಬಾಲಸಂರಕ್ಷಣ ಕೇಂದ್ರ, ಕುಂಪಲದ ಯತೀಂಖಾನ ಮತ್ತು ತೊಕ್ಕೊಟ್ಟಿನ ಕ್ರೈಸ್ತರ
ಆಶ್ರಮಕ್ಕೆ ಅಕ್ಕಿ ನೀಡಲು ಶಾಲಾ ಆಡಳಿತ ಮಂಡಳಿ ನಿರ್ಧರಿಸಿದೆ. ಕೃಷಿ ಕಾರ್ಯದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದೇವೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.

ಸಾಮರಸ್ಯದ ಶಿಕ್ಷಣ
ಕೃಷಿಪಾಠದೊಂದಿಗೆ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮೂಡಿಸುವುದೇ ಈ ಕಾರ್ಯಕ್ರಮದ ಗುರಿಯಾಗಿದ್ದು, ಈ ಕೃಷಿ ಕಾರ್ಯದಲ್ಲಿ ಸರ್ವಧರ್ಮದ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಿದ್ದೇವೆ. ಫಸಲನ್ನು ಸರ್ವಧರ್ಮದ ಆಶ್ರಮಗಳಿಗೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸಾಮರಸ್ಯದ ಶಿಕ್ಷಣ ನೀಡುವ ಉದ್ದೇಶವನ್ನೂ ಶಿಕ್ಷಣ ಸಂಸ್ಥೆ ಈಡೇರಿಸಿದೆ.
 – ಕೆ. ರವೀಂದ್ರ ಶೆಟ್ಟಿ, ಉಳಿದೊಟ್ಟುಗುತ್ತು, ಅಧ್ಯಕ್ಷರು,
    ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ, ದೇರಳಕಟ್ಟೆ

Advertisement

ಖುಷಿ ಕೊಟ್ಟಿದೆ
ಅಕ್ಕಿ ಹೇಗೆ ಬೆಳೆಯಲಾಗುತ್ತದೆ ಎನ್ನುವುದು ನಮಗೆ ಈ ಕಾರ್ಯ ಕ್ರಮದಿಂದ ಮನದಟ್ಟಾಗಿದೆ. ಕೃಷಿಕರು ಕಷ್ಟದ ಜೀವನದೊಂದಿಗೆ ಕೃಷಿಕಾರ್ಯ ನಡೆಸುವ ವಾತಾವರಣ ಖುಷಿ ಕೊಟ್ಟಿದೆ.
 ಹಜ್ರತ್ ತ್‌ ಝೈಬತ್‌,
 ವಿದ್ಯಾರ್ಥಿನಿ

ಉತ್ತಮ ಕಾರ್ಯ
ಸಂಸ್ಕೃತಿ ಬೆಳೆಯಲು ಕೃಷಿ ಅತ್ಯುತ್ತಮವಾದ ಮಾರ್ಗ. ಎಲ್ಲ ಶಾಲೆಗಳು ಇಂತಹ ಕಾರ್ಯದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡರೆ ಮಕ್ಕಳಿಗೆ ಕೃಷಿ ಸಂಸ್ಕೃತಿಯೊಂದಿಗೆ ಅನ್ನದ ಮೇಲೆ ಗೌರವ ಬರಲು ಸಾಧ್ಯ.
 ಎನ್‌.ಮಹಾಬಲೇಶ್ವರ ಭಟ್‌,
 ಕೃಷಿಕರು 

Advertisement

Udayavani is now on Telegram. Click here to join our channel and stay updated with the latest news.

Next