Advertisement

ಅಧಿಕಾರಿಯಾಗಿ ಮಿಂಚಿದ ವಿದ್ಯಾರ್ಥಿನಿಯರು

12:40 AM Mar 09, 2020 | Lakshmi GovindaRaj |

ಬೆಂಗಳೂರು: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ನಗರದ ಎಲ್ಲ ಪೊಲೀಸ್‌ ಠಾಣೆಗಳಲ್ಲಿ ಮಹಿಳೆಯರ ಕುರಿತು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

Advertisement

ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ಪೊಲೀಸ್‌ ಠಾಣೆಗಳ 11 ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಜಾಗೃತಿ ಕಾರ್ಯಕ್ರಮಗಳು, ಸ್ಥಳೀಯ ಮಹಿಳೆಯರ ಜತೆ ವಾಕಥಾನ್‌, ಹಿರಿಯ ಮಹಿಳೆಯರ ಜತೆ ಸಂವಾದ, ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದ ಮಹಿಳೆಯರಿಗೆ ಸನ್ಮಾನ, ಪೊಲೀಸ್‌ ಸಿಬ್ಬಂದಿಯ ಕುಟುಂಬದ ಮಹಿಳಾ ಸದಸ್ಯರ ಜತೆ ಠಾಣೆಯಲ್ಲಿ ಕೇಕ್‌ ಕತ್ತರಿಸಿ ಅರ್ಥಪೂರ್ಣ ದಿನಾಚರಣೆ ಆಚರಿಸಲಾಯಿತು. ಜತೆಗೆ ಆಯಾ ಠಾಣೆ ವ್ಯಾಪ್ತಿಯ ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕೂ ಅಧಿಕ ಅಂಕಗಳಿದ ವಿದ್ಯಾರ್ಥಿನಿಗೆ ಮೂರು ಗಂಟೆಗಳ ಕಾಲ ಠಾಣಾಧಿಕಾರಿ ನೀಡಲಾಗಿತ್ತು.

ಪಿಯುಸಿ ವಿದ್ಯಾರ್ಥಿನಿಯರೇ ಠಾಣಾಧಿಕಾರಿಗಳು!: ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಕೆಲ ಠಾಣೆಗಳಲ್ಲಿ ಆಯಾ ವ್ಯಾಪ್ತಿಯ ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕೂ ಅಧಿಕ ಅಂಕಗಳಿದ ವಿದ್ಯಾರ್ಥಿನಿ ಯೊಬ್ಬರನ್ನು ಆಯ್ಕೆ ಮಾಡಲಾಗಿತ್ತು. ಆಕೆಗೆ ಬೆಳಗ್ಗೆ 9 ಗಂಟೆಯಿಂದ 11 ಗಂಟೆವರೆಗೆ(ಕೆಲ ಠಾಣೆಗಳಲ್ಲಿ) ಮತ್ತು ಸಂಜೆ ಏಳು ಗಂಟೆಯಿಂದ ರಾತ್ರಿ ಒಂಭತ್ತು ಗಂಟೆವರೆಗೆ(ಕೆಲ ಠಾಣೆಗಳಲ್ಲಿ) ಮೂರು ಗಂಟೆಗಳ ಕಾಲ ಠಾಣಾಧಿಕಾರಿ ಅಧಿಕಾರ ನೀಡಲಾಗಿತ್ತು.

ಠಾಣೆಗೆ ಹೊಸದಾಗಿ ಹಾಜರಾಗುವ ಠಾಣಾಧಿಕಾರಿಯಂತೆ ಹೂಗುಚ್ಚ ನೀಡಿ ಸ್ವಾಗತ ಹಾಗೂ ಸರ್ಕಾರಿ ಗೌರವ ನೀಡಿ ಆಹ್ವಾನಿಸಲಾಯಿತು. ನಂತರ ಠಾಣೆಯ ಎಲ್ಲ ಸಿಬ್ಬಂದಿ ಪರಿಚಯ ಕಾರ್ಯಕ್ರಮ, ರೈಫ‌ಲ್‌ಗ‌ಳ ಬಳಕೆ ಹೇಗೆ? ಡೈರಿ ಎಲ್ಲವನ್ನು ತಿಳಿಸಲಾಯಿತು. ನಂತರ ತಮ್ಮ ಠಾಣೆ ವ್ಯಾಪ್ತಿಯಲ್ಲಿ ಇರುವಂತಹ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ಕಿರಿಯ ಅಧಿಕಾರಿಗಳಿಗೆ ಸೂಚಿಸಲಾಯಿತು.

ಇನ್ನು ಸಂಚಾರ ಠಾಣೆ ವ್ಯಾಪ್ತಿಯ ಲ್ಲಿಯೂ ಇದೇ ಮಾದರಿಯ ಕಾರ್ಯಕ್ರಮ ಆಯೋಜಿಸಿದ್ದು, ಹೊಸ ಠಾಣಾಧಿಕಾರಿ ತಮ್ಮ ವ್ಯಾಪ್ತಿಯ ಸಂಚಾರ ಸಮಸ್ಯೆಗಳು, ಹೆಲ್ಮೆಟ್‌ಧರಿಸದೆ ವಾಹನ ಚಾಲನೆ ಹೀಗೆ ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರರಿಗೆ ಸೂಚಿಸುವಂತೆ ಕಿರಿಯ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಸಾಧಕಿಯರಿಗೆ ಸುರಕ್ಷಾ ಚಕ್ರ ಅವಾರ್ಡ್‌: ಪೂರ್ವ ವಿಭಾಗದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ 14 ಮಂದಿ ಮಹಿಳೆಯರಿಗೆ ಸುರಕ್ಷಾ ಚಕ್ರ ಅವಾರ್ಡ್‌ ನೀಡಿ ಸನ್ಮಾನಿಸಲಾಯಿತು. ಪೊಲೀಸ್‌ ಕಾನ್‌ಸ್ಟೆಬಲ್‌ ಉಷಾರಾಣಿ(ಏಷ್ಯನ್‌ ಗೇಮ್‌ ಕಬ್ಬಡಿ ಆಟಗಾರ್ತಿ), ಸೋನಿಯಾ ಶರ್ಮಾ(ಸಿಇಓ-ಗುಡ್‌ವರ್ಕ್‌ಲ್ಯಾಬ್ಸ್), ಪ್ರೇಮಾ(ಬಿಎಂಟಿಸಿ ಬಸ್‌ ಚಾಲಕಿ), ಪ್ರಿಯಾಂಕಾ(ಮಂಗಳಮುಖೀ ರೇಡಿಯೋ ಜಾಕಿ), ಹಫೀಜಾ(ಅಂತಾರಾಷ್ಟ್ರೀಯ ಯೋಗಾ ವಿಜೇತೆ), ಆಶಾ(ಝೋಮ್ಯಾಟೊ ಡೆಲಿವರಿ ಗರ್ಲ್), ಎ.ಕಲಾ(ಕ್ಯಾನ್ಸರ್‌ನಿಂದ ಬದುಕುಳಿದ, ಪೇಪರ್‌ ನ್ಯಾಪಿನ್‌ ವ್ಯವಹಾರ ನಡೆಸುವವರು), ವಾಣಿಶ್ರೀ(ಬೊಸ್ಕೊ, ಚೈಲ್ಡ್‌ ರೆಸ್ಕೂ) ಮಂಜು ಮೆಹ್ರಾ(ಟ್ರಾಪಿಕ್‌ ವಾರ್ಡ್‌ನ್‌), ಜೋಯಿಸ್ನಾ(ಬಾಡಿ ಬಿಲ್ಡರ್‌), ರೆಹಮತ್‌ಉನ್ನಿಸಾ(ಬಿಬಿಎಂಪಿ ಕಾಲೇಜಿನಲ್ಲಿ ಪದವಿಯಲ್ಲಿ ಶೇ.91.87 ಅಂಕ), ನರಸಮ್ಮ(ಸಫಾಯಿ ಕರ್ಮಚಾರಿ), ಮಂಜುಷಾ ಗಣೇಶ್‌(ಮಾರ್ಷಲ್‌ ಆರ್ಟ್ಸ್ ಆ್ಯಂಡ್‌ ಸೆಲ್ಫಿ ಡಿಫೆನ್ಸ್‌) ಕೆ.ವಿದ್ಯಾ(ರಾಷ್ಟ್ರೀಯ ಮಟ್ಟದ ಕ್ರೀಡಾಪಟು) ಅವರಿಗೆ ಗೌರವಿಸಲಾಯಿತು.

ಮಹಿಳೆಯರಿಗೆ ಸನ್ಮಾನ: ಇದೇ ವೇಳೆ ಪೊಲೀಸ್‌ ಠಾಣೆಯ ಮಹಿಳಾ ಸಿಬ್ಬಂದಿ ಮತ್ತು ಅವರ ಸಿಬ್ಬಂದಿ ಕುಟುಂಬದ ಮಹಿಳಾ ಸದಸ್ಯರಿಗೆ ಸನ್ಮಾನಿಸಲಾಯಿತು. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಎಲ್ಲ ಠಾಣೆ ವ್ಯಾಪ್ತಿಯಲ್ಲಿ ಪಾರ್ಕ್‌ಗಳಲ್ಲಿ ಮಹಿಳಾ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಹಿಳೆಯರು ನಿರ್ಭಿತಿಯಿಂದ ಸಂಚರಿಸಬಹುದು. ಮಹಿಳೆಯರ ಸುರಕ್ಷತೆಯೇ ಪೊಲೀಸ್‌ ಇಲಾಖೆಯ ಮೊದಲ ಆದ್ಯತೆ ಎಂಬೆಲ್ಲ ಜಾಗೃತಿ ಸಂದೇಶ ನೀಡಲಾಯಿತು.

ಸ್ತ್ರೀ ಸುರಕ್ಷಾ ಚಕ್ರ ನಿರ್ಮಾಣ: ಪೂರ್ವ, ದಕ್ಷಿಣ, ಉತ್ತರ ವಿಭಾಗದ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ಮಹಿಳಾ ಸರಪಳಿ ನಿರ್ಮಿಸಿ ಪುರುಷನಷ್ಟೇ ಮಹಿಳೆಯರು ಕೂಡ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಸಾಮರ್ಥ್ಯ ಹೊಂದಿದ್ದಾಳೆ ಎಂದು ಸೂಚಿಸಲಾಯಿತು. ಪೊಲೀಸ್‌ ಸಿಬ್ಬಂದಿ ಕುಟುಂಬದ ಮಹಿಳಾ ಸದಸ್ಯರು ಸೇರಿ ಮಹಿಳೆಯರಿಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಉಚಿತ ಕ್ಯಾನ್ಸರ್‌ ಪರೀಕ್ಷೆ ನಡೆಸಲಾಯಿತು. ಒಂದು ವೇಳೆ ರೋಗ ಕಂಡು ಬಂದರೆ ಅಂತಹ ಮಹಿಳೆಗೆ ಶೇ.50ರಷ್ಟು ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲು ಅನುಕೂಲ ಮಾಡಲಾಯಿತು.

“ಸುರಕ್ಷಾ ಆ್ಯಪ್‌- ಸ್ತನ ಕ್ಯಾನ್ಸರ್‌’ ಕುರಿತು ಜಾಗೃತಿ
ಬೆಂಗಳೂರು: ಸ್ಪರ್ಶ್‌ ಆಸ್ಪತ್ರೆಯು ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಭಾನುವಾರ ಬೆಂಗಳೂರು ನಗರ ಸಂಚಾರ ಪೊಲೀಸ್‌ ಮತ್ತು ಹಾಲೇì ಡೇವಿಡ್‌ಸನ್‌ ಸಹಯೋಗದಲ್ಲಿ “ಸುರಕ್ಷಾ ಆ್ಯಪ್‌ ಮತ್ತು ಸ್ತನ ಕ್ಯಾನ್ಸರ್‌’ ಕುರಿತು ಜಾಗೃತಿ ಬೈಕ್‌ ಜಾಥಾ ಆಯೋಜಿಸಿತ್ತು. ಜಾಥಾವು ಇನ್‌ಫೆಂಟ್ರಿ ರಸ್ತೆಯ ಸ್ಪರ್ಶ್‌ ಆಸ್ಪತ್ರೆಯಿಂದ ಆರಂಭವಾಗಿ ಸಮೀಪದ ಮಾಲ್‌ಗ‌ಳು, ವೃತ್ತಗಳಲ್ಲಿ ಸಾಗಿತು.

ಜಾಥ ಬಳಿಕ ಸ್ಪರ್ಶ್‌ ಆಸ್ಪತ್ರೆಯ ಕ್ಯಾನ್ಸರ್‌ ತಜ್ಞೆ ಡಾ. ಜಯಂತಿ ತುಮಿ ಮಾತನಾಡಿ, “ಭಾರತದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಹೆಚ್ಚುತ್ತಿದೆ. ಅಪಾಯ ವನ್ನು ಕಡಿಮೆ ಮಾಡುವುದಕ್ಕಾಗಿ ಹೆಚ್ಚಿನ ಹಣ್ಣುಗಳು, ತರಕಾರಿಗಳು ಮತ್ತು ನೈಸರ್ಗಿಕ ಆಹಾರ ಪದಾರ್ಥ ಗಳನ್ನು ಸೇವಿಸಿ. ನಿಗದಿತವಾಗಿ ವ್ಯಾಯಾಮ ಮಾಡಬೇಕು. ಮಹಿಳೆಯರ ಆರೋಗ್ಯ ಮುಖ್ಯ ಎಂದರು.

ತುರ್ತು ಸಂದರ್ಭಗಳಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ಸಹಕಾರಿಯಾಗುವ ಸುರಕ್ಷಾ ಆ್ಯಪ್‌ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನಗರದಲ್ಲಿ ಗಸ್ತು ತಿರುಗುತ್ತಿರುವ ವಾಹನಗಳು ಮತ್ತು ಪೊಲೀಸ್‌ ನಿಯಂತ್ರಣ ಕೊಠಡಿಗಳೊಂದಿಗೆ ಸಂಪರ್ಕ ಹೊಂದಿರುವ ಈ ಆ್ಯಪ್‌ ತೊಂದರೆಯಲ್ಲಿರುವ ಮಹಿಳೆಯರಿಗೆ ನೆರವು ನೀಡುವುದಲ್ಲದೇ ಸಹಾಯ ಕ್ಕಾಗಿ ಪೊಲೀಸರನ್ನು ತಕ್ಷಣವೇ ಸ್ಥಳಕ್ಕೆ ಕರೆಸಿಕೊಳ್ಳಲು ಅನುಕೂಲಕರವಾಗಿದೆ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next