ನೆಲ್ಲೂರು: ವಿದ್ಯೆ ಕಲಿಸಿದ ಗುರು ಈಗ ಕೆಲಸ ಕಳೆದುಕೊಂಡ ಗುರುವಿನ ಸಹಾಯಕ್ಕೆ ಬಂದಿರುವ ಅವರ ಶಿಷ್ಯ ಬಳಗ, 86,300 ರೂ.ಗಳನ್ನು ಸಂಗ್ರಹಿಸಿ ಗುರುವಿಗೆ ಉಡುಗೊರೆಯಾಗಿ ನೀಡಿದೆ. ಇಂಥ ವಿಶೇಷ ವಿದ್ಯಮಾನ ನಡೆದಿರುವುದು ಆಂಧ್ರಪ್ರದೇಶದ ನೆಲ್ಲೂರಿನಲ್ಲಿ. ಇಂಥ ಸಾರ್ಥಕ ಶಿಷ್ಯ ವೃಂದ ಪಡೆದ ಗುರುವಿನ ಹೆಸರು ವೆಂಕಟಸುಬ್ಬಯ್ಯ. ಅಲ್ಲಿನ ಹೈಸ್ಕೂಲ್‌ನಲ್ಲಿ ಕಳೆದ 15 ವರ್ಷಗಳಿಂದ ತೆಲುಗು ಭಾಷಾ ಶಿಕ್ಷಕರಾಗಿ ಅವರು ಸೇವೆ ಸಲ್ಲಿಸುತ್ತಿದ್ದರು. ಆದರೆ, ಕಾಲೇಜು ಆಡಳಿತ ಮಂಡಳಿಯು ಇತ್ತೀಚೆಗೆ ಇವರನ್ನು ಕೆಲಸದಿಂದ ತೆಗೆದು ಹಾಕಿತು. ಹಾಗಾಗಿ, ಅನಿವಾರ್ಯವಾಗಿ ಬಾಳೆಹಣ್ಣು ಮಾರಾಟ ಮಾಡುತ್ತಿದ್ದರು. ಈ ವಿಷಯ, ಅವರಿಂದ ತೆಲುಗು ಕಲಿತಿದ್ದ ನಾರಾಯಣ ಸ್ಕೂಲ್‌ನ ಮಾಜಿ ವಿದ್ಯಾರ್ಥಿಗಳಿಗೆ ಮುಟ್ಟಿತು. ತಕ್ಷಣವೇ, ತಮ್ಮ ನೆಚ್ಚಿನ ಗುರುಗಳ ಸಹಾಯಕ್ಕಾಗಿ ಅಭಿಯಾನ ಆರಂಭಿಸಿದ ಅವರು, ಅದರಿಂದ 86,300 ರೂ.ಗಳನ್ನು ಕಲೆ ಹಾಕಿ ಅದನ್ನು ತಂದು ತಮ್ಮ ಗುರುಗಳಿಗೆ ಅರ್ಪಿಸಿದ್ದಾರೆ.