ಬೆಂಗಳೂರು : ಉಕ್ರೇನ್ ಮತ್ತು ರಷ್ಯಾ ಯುದ್ಧ ನಡೆಯುತ್ತಿರುವ ಖಾರ್ಕಿವ್‌ನಿಂದ ಕೇವಲ ಮೂರು ಕಿ.ಮೀ ದೂರದ ಪಿಸೋಚಿನ್ ಪ್ರದೇಶದಲ್ಲಿ ಹಾಸ್ಟೆಲ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಆದರೆ ಇಲ್ಲಿ ಯಾವ ರೀತಿಯ ಸುರಕ್ಷತೆಯೂ ಇಲ್ಲ ಎಂದು ಉಕ್ರೇನ್‌ನಲ್ಲಿರುವ ಚಿಕ್ಕಬಳ್ಳಾಪುರದ ವಿದ್ಯಾರ್ಥಿನಿ ಹರ್ಷಿತಾ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಐದು ದಿನಗಳ ಕಾಲ ಬಂಕರ್‌ನಲ್ಲಿದ್ದ ಹರ್ಷಿತಾ ಅವರು ಪಿಸೋಚಿನ್‌ಗೆ ತಲುಪಲು ಕೇವಲ ಆರು ಗಂಟೆಗಳ ಅವಧಿ ನೀಡಲಾಗಿತ್ತು. ರೈಲು ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿಯೇ ನಾಲ್ಕು ಮಿಸೆಲ್ ಆಕ್ರಮಣ ನಡೆದು ಕಟ್ಟಡಗಳು, ಟ್ಯಾಂಕರ್‌ಗಳು ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದವು. ಇದ್ಯಾವುದರ ಕಡೆ ಗಮನ ಕೊಡದೇ, ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು 12 ಕಿ.ಮೀ ಜೀವ ಕೈಯಲ್ಲಿಟ್ಟುಕೊಂಡು ಓಡಿ ಬಂದಿದ್ದೇವೆ. ರೈಲು, ಮೆಟ್ರೋಗಳಲ್ಲಿ ಉಕ್ರೇನ್ ನಾಗರಿಕರಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಭಾರತೀಯ ವಿದ್ಯಾರ್ಥಿಗಳು ರೈಲು ಹತ್ತಿದರೂ, ಉಕ್ರೇನಿನ ಸೈನಿಕರು ಹೊಡೆದು ಕೆಳಗಿಳಿಸುತ್ತಿದ್ದಾರೆ. ಇಲ್ಲದಿದ್ದರೆ ಗಾಳಿಯಲ್ಲಿ ಗುಂಡು ಹಾರಿಸಿ, ಭಯಪಡಿಸುತ್ತಾರೆ ಎಂದು ಹೇಳಿದರು.
ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ ತೆರಳಬೇಕಾದರೆ ಎಲ್ಲಾ ವಿದ್ಯಾರ್ಥಿಗಳು ತಮ್ಮ ಮೊಬೈಲ್ ನ ಇಂಟರ್ನೆಟ್, ಜಿಯೋ ಲೊಕೇಶನ್ ಅನ್ನು ಆಫ್ ಮಾಡಿಕೊಂಡು ಹೋಗುತ್ತೇವೆ. ಏಕೆಂದರೆ, ಹೆಚ್ಚು ಸಿಗ್ನಲ್ ಇರುವ ಕಡೆ ದಾಳಿ ಮಾಡುತ್ತಿದ್ದಾರೆ. ಆದ್ದರಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತೇವೆ. ಪೋಷಕರಿಗೂ ಸರಿಯಾಗಿ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಅಲ್ಲಿನ ಪರಿಸ್ಥಿತಿಯನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ : ಬೆತ್ತಲೆ ವಿಡಿಯೋ ಪಡೆದುಕೊಂಡು Blackmail : ಅಪರಿಚಿತರ ಕಾಲ್, ಮೆಸೇಜ್ ಬಗ್ಗೆ ಇರಲಿ ಎಚ್ಚರ !
ಪ್ರಸ್ತುತವಾಗಿ ಒಂದು ಹಾಸ್ಟೆಲ್‌ನಲ್ಲಿ ಇದ್ದೇವೆ. ಆದರೆ, ಇಲ್ಲಿ ಯಾವುದೇ ರೀತಿಯ ಊಟ, ನೀರಿನ ವ್ಯವಸ್ಥೆ ಇಲ್ಲ. ಹೊರಗಡೆ ಹೋಗದಂತೆ ಹಾಗೂ ಹಾಸ್ಟೆಲ್ ಕೊಠಡಿಯ ದೀಪವನ್ನು ಆರಿಸಿಕೊಂಡು ಇರುವಂತೆ ತಿಳಿಸಿದ್ದಾರೆ. ಏನಾದರೂ ವ್ಯವಸ್ಥೆ ಮಾಡಿ, ಇಲ್ಲಿಂದ ಬೇಗ ಕರೆಸಿಕೊಳ್ಳಿ ಎಂದು ಭಾರತೀಯ ಸರ್ಕಾರಕ್ಕೆ ಮನವಿ ಮಾಡಿದರು.