Advertisement

ವಿದ್ಯಾಗಮಕ್ಕೆ 10 ಕಿಮೀ ನಡೆಯುವ ಮಕ್ಕಳು! ಶಾಲಾ ಸಮಯಕ್ಕೆ ಸಾರಿಗೆ ವ್ಯವಸ್ಥೆಯಿಲ್ಲದೇ ತೊಂದರೆ

11:28 AM Jan 06, 2021 | Team Udayavani |

ಕೊಪ್ಪಳ: ಶಿಕ್ಷಣ ಇಲಾಖೆಯೇನೋ ಹಲವು ಅಡೆ-ತಡೆಗಳ ಮಧ್ಯೆಯೂ ಶಾಲೆಗಳನ್ನು ಆರಂಭ ಮಾಡಿದೆ. ಆದರೆ ಇಲ್ಲೊಂದು ಶಾಲೆಯ ವಿದ್ಯಾರ್ಥಿಗಳು ವಿದ್ಯಾಗಮ ತರಗತಿಗೆ ಆಗಮಿಸಲು ನಿತ್ಯವೂ ಶಾಲೆಗೆ 10 ಕಿಮೀ ಕಾಲ್ನಡಿಗೆಯಲ್ಲೇ ಬರಬೇಕಾದ ಪರಿಸ್ಥಿತಿ ಎದುರಾಗಿದೆ. ಶಾಲಾ ಸಮಯಕ್ಕೆ ಬಸ್‌ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿನಿಯರು ವೇದನೆ ವ್ಯಕ್ತಪಡಿಸುತ್ತಿದ್ದಾರೆ.

Advertisement

ತಾಲೂಕಿನ ಮೋರನಾಳ ಗ್ರಾಮದಲ್ಲಿನ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಳವಂಡಿ ಸರ್ಕಾರಿ ಪ್ರೌಢ ಶಾಲೆಗೆ ತೆರಳಲು ಸಕಾಲಕ್ಕೆ ಬಸ್‌ ಸೌಕರ್ಯ ಇಲ್ಲದೇ ಕಾಲ ನಡಿಗೆ ನಮಗೆ ಗತಿ ಎಂದು ಪಾದಯಾತ್ರೆ
ಆರಂಭಿಸುತ್ತಿದ್ದಾರೆ.

ಸರ್ಕಾರವು ಹೊಸ ವರ್ಷದಂದು 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಯೋಜನೆ ಆರಂಭಿಸಿ ಶಿಕ್ಷಣ ನೀಡಲು ಮುಂದಾಗಿದೆ. ಜೊತೆಗೆ 10ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿ ಆರಂಭ ಮಾಡಿದೆ. 10 ತಿಂಗಳ ಬಳಿಕ ಕ್ರಮೇಣ ವಿದ್ಯಾರ್ಥಿಗಳು
ಶಾಲೆಗೆ ಆಗಮಿಸುತ್ತಿದ್ದಾರೆ. ಆದರೆ ವಿದ್ಯಾಗಮ, ಶಾಲಾ ಅವಧಿ ಹೆಚ್ಚು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನೂರೆಂಟು ತಾಪತ್ರೆಯ ಅನುಭವಿಸುವಂತಾಗಿದೆ.

ಇದನ್ನೂ ಓದಿ:ಅಗ್ನಿಶಾಮಕದಳದಲ್ಲಿ ಸಿಬ್ಬಂದಿ ಕೊರತೆ :181 ಮಂಜೂರಾತಿ ಹುದ್ದೆಗಳಲ್ಲಿ 106 ಹುದ್ದೆ ಭರ್ತಿ

ಇಲ್ಲಿನ ಮೋರನಾಳ ಗ್ರಾಮ ಕೊಪ್ಪಳ ತಾಲೂಕಿನ ಕೊನೆಯ ಭಾಗದಲ್ಲಿದೆ. ಇಲ್ಲಿನ ನೂರಾರು ವಿದ್ಯಾರ್ಥಿಗಳು ಬಹುಪಾಲು ಅಳವಂಡಿ ಹಾಗೂ ಗದಗ ಜಿಲ್ಲೆಯ ಮುಂಡರಗಿ ಭಾಗದಲ್ಲಿಯೇ ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಲಾಕ್‌ಡೌನ್‌ ಮೊದಲು ಸ್ವಲ್ಪ ಮಟ್ಟಿಗೆ ಸಾರಿಗೆ ವ್ಯವಸ್ಥೆಯಿತ್ತು. ಲಾಕ್‌ಡೌನ್‌ ತೆರವು ಮಾಡಿದ ಬಳಿಕ ಗ್ರಾಮಕ್ಕೆ ಸರಿಯಾದ ಬಸ್‌ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು, ಪಾಲಕರು ತುಂಬಾ ತೊಂದರೆ ಎದುರಿಸುತ್ತಿದ್ದಾರೆ.

Advertisement

ಶಿಕ್ಷಣ ಇಲಾಖೆಯು ವಿದ್ಯಾಗಮ ಹಾಗೂ 10ನೇ ತರಗತಿ ಕ್ಲಾಸ್‌ಗಳನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 4ಗಂಟೆ ವರೆಗೂ ನಡೆಸುತ್ತಿಲ್ಲ. ಎರಡು ತಾಸಿನ ಅವಧಿಗೆ ಮುಗಿಸುತ್ತಿದ್ದಾರೆ. ಮೋರನಾಳ ಗ್ರಾಮದಲ್ಲಿನ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಳವಂಡಿ ಕಾಲೇಜು-ಪ್ರೌಢ ಶಾಲೆಗೆ ತೆರಳುತ್ತಿದ್ದು, ಇವರಿಗೆ ಶಾಲೆ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೆ ಕಾಲ್ನಡಿಗೆ ಆರಂಭಿಸಿದ್ದಾರೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆ ವರೆಗೂ ತರಗತಿಗಳು ನಡೆಯುತ್ತವೆ ಆದರೆ 6-8ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 2 ರಿಂದ 4.30ರ ವರೆಗೂ ವಿದ್ಯಾಗಮದಡಿ ಮಕ್ಕಳಿಗೆ ಬೋಧನೆ ಮಾಡಲಾಗುತ್ತದೆ. ಹಾಗಾಗಿ
6-7-8-9ನೇ ತರಗತಿ ವಿದ್ಯಾರ್ಥಿಗಳು ಮಧ್ಯಾಹ್ನ 1ಕ್ಕೆ ಮೋರನಾಳ ಗ್ರಾಮದಿಂದ ಅಳವಂಡಿ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ತೆರಳಬೇಕಿದೆ. ಶಾಲೆ ಬಿಟ್ಟ ಬಳಿಕ ಸಂಜೆ 4.30ರಿಂದ ಮತ್ತೆ ಕಾಲ್ನಡಿಗೆಯಲ್ಲೇ ಮೋರನಾಳ ಗ್ರಾಮಕ್ಕೆ ನಡೆದುಕೊಂಡು ಬರಬೇಕಿದೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ಬೆಳಗ್ಗೆ 9.30ಕ್ಕೆ ಒಂದು ಬಸ್‌ ಸಿಕ್ಕರೆ ಅವರಿಗೂ ಮಧ್ಯಾಹ್ನ 12ಕ್ಕೆ ಬಸ್‌ ಇಲ್ಲದೇ ಮನೆಗೆ ತೆರಳಲು ನಡೆದುಕೊಂಡೇ ಬರಬೇಕಿದೆ.

ಮೋರನಾಳ ಗ್ರಾಮದಿಂದ ಅಳವಂಡಿಗೆ 5 ಕಿಮೀ ದೂರವಿದೆ. ಎರಡೂ ಕಡೆ ಸೇರಿ ಪ್ರತಿ ನಿತ್ಯ 10 ಕಿಮೀ ವಿದ್ಯಾರ್ಥಿಗಳು ನಡೆದುಕೊಂಡೇ ವಿದ್ಯಾಗಮದಡಿ ಶಿಕ್ಷಣ ಪಡೆಯುವಂತ ಪರಿಸ್ಥಿತಿ ಬಂದಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ
ವಿದ್ಯಾರ್ಥಿನಿಯರನ್ನು ಹೈಸ್ಕೂಲ್‌ ಹಾಗೂ ಕಾಲೇಜಿಗೆ ಕಳಿಸುವುದೇ ಹೆಚ್ಚು ಆ ಮಧ್ಯೆ ಕಾಲ್ನಡಿಗೆಯಲ್ಲಿ ಶಾಲೆಗೆ ಮಕ್ಕಳನ್ನು ಕಳಿಸಬೇಕೆಂದರೆ ವಿದ್ಯಾರ್ಥಿ ಪಾಲಕರು ನಿತ್ಯವೂ ಆತಂಕದಲ್ಲೇ ಶಾಲೆಗೆ ಕಳಿಸಬೇಕಾದ ಸ್ಥಿತಿ ಬಂದಿದೆ. ಇನ್ನು ಕಾಲೇಜು ವಿದ್ಯಾರ್ಥಿಗಳೂ ಇಂಥ ತೊಂದರೆ ಎದುರಿಸುತ್ತಿದ್ದಾರೆ. ಹೇಗೋ ಖಾಸಗಿ ವಾಹನ, ಇಲ್ಲವೇ ಬೈಕ್‌ಗಳಲ್ಲಿ ತೆರಳುತ್ತಿದ್ದಾರೆ.
ಆದರೆ ವಿದ್ಯಾರ್ಥಿನಿಯರ ಪರದಾಟ ನಿಜಕ್ಕೂ ಹೇಳತೀರದಂತಾಗಿದೆ. ಕೂಡಲೇ ಸರ್ಕಾರ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆಯು ವಿದ್ಯಾರ್ಥಿಗಳ ಕಾಲ್ನಡಿಗೆ ತಪ್ಪಿಸಲು ಪರ್ಯಾಯ ವಿದ್ಯಾರ್ಥಿಗಳ ಶಾಲಾ ಸಮಯಕ್ಕೆ ಸಾರಿಗೆ ವ್ಯವಸ್ಥೆ ಮಾಡಬೇಕಿದೆ.

ಸಮಸ್ಯೆ ಟ್ವಿಟ್‌ ಮಾಡಿದ ರೈತ
ಮೋರನಾಳದಿಂದ ಅಳವಂಡಿಗೆ ಕಾಲ್ನಡಿಗೆಯಲ್ಲಿಯೇ ನಿತ್ಯ ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಿರುವುದನ್ನು ಗಮನಿಸಿದ ಬೆಟಗೇರಿ ಗ್ರಾಮದ ರೈತ ಏಳುಕೋಟೇಶ್‌ ಕೋಮಲಾಪುರ ಅವರು ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುವ ಫೋಟೋ ತೆಗೆದು, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಶಿಕ್ಷಣ ಸಚಿವ ಸೇರಿ ಇತರರಿಗೆ ಟ್ವಿಟ್‌ ಮಾಡಿ ವಿದ್ಯಾರ್ಥಿಗಳ ಸಮಸ್ಯೆ ಗಮನ ಸೆಳೆದಿದ್ದಾರೆ.

– ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next