Advertisement

ಬಸ್‌ಗಾಗಿ ವಸತಿ ನಿಲಯ ವಿದ್ಯಾರ್ಥಿಗಳ ಪರದಾಟ

01:22 PM Jan 17, 2022 | Team Udayavani |

ಬಳ್ಳಾರಿ: ಕೋವಿಡ್‌ ಹಿನ್ನೆಲೆ ವೀಕೆಂಡ್‌ ಕರ್ಫ್ಯೂ ಜಾರಿಯಲ್ಲಿದ್ದರೂ, ಜಿಲ್ಲಾ ಧಿಕಾರಿಗಳು ಹೊರಡಿಸಿದ ಆದೇಶದ ಎಡವಟ್ಟುನಿಂದ ವಸತಿ ನಿಲಯಗಳನ್ನು ಖಾಲಿ ಮಾಡಿ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಸ್‌ಗಳಿಲ್ಲದೇ ನಿಲ್ದಾಣಗಳಲ್ಲಿ ಭಾನುವಾರ ಪರದಾಡಿದ ಪ್ರಸಂಗ ನಡೆಯಿತು. ಈ ಕುರಿತು ತಿಳಿದು ನಿಲ್ದಾಣಕ್ಕೆ ಆಗಮಿಸಿದ
ಶಾಸಕ ಜಿ.ಸೋಮಶೇಖರರೆಡ್ಡಿ, ಬಸ್‌ ವ್ಯವಸ್ಥೆ ಮಾಡಿ ಕಳುಹಿಸಿದರು.

Advertisement

ಕೋವಿಡ್‌ ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಶನಿವಾರ ಭಾನುವಾರ ವೀಕೆಂಡ್‌ ಕರ್ಫ್ಯೂ ಜಾರಿಯಲ್ಲಿದ್ದರೂ ಬಳ್ಳಾರಿ/ವಿಜಯನಗರ ಅವಳಿ ಜಿಲ್ಲೆಗಳಲ್ಲೂ ವಿದ್ಯಾರ್ಥಿಗಳಲ್ಲೂ ಸೋಂಕು ಪತ್ತೆಯಾಗಿದ್ದು, ಎಲ್ಲೆಡೆ ಸೋಂಕು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿಯವರು ಎಲ್ಲ ಹಂತದ ವಸತಿ ನಿಲಯಗಳ ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ತೆರಳುವಂತೆ ಶನಿವಾರ ಆದೇಶ ಹೊರಡಿಸಿದ ಎಡವಟ್ಟಿನಿಂದಾಗಿ ವಿದ್ಯಾರ್ಥಿಗಳು, ಭಾನುವಾರ ಊಟ, ಉಪಾಹಾರ, ಬಸ್‌ಗಳಿಲ್ಲದೇ
ಪರದಾಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಕಂಪ್ಲಿ, ಕುರುಗೋಡು, ಸಿರುಗುಪ್ಪ ತಾಲೂಕುಗಳ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಇರುವ ನಿಲಯಗಳಲ್ಲಿ ಡಿಸಿ ಆದೇಶದಿಂದ ಶನಿವಾರ ರಾತ್ರಿ, ಭಾನುವಾರ ಬೆಳಗ್ಗೆ ಸಮರ್ಪಕವಾಗಿ ಊಟ, ಉಪಾಹಾರ ನೀಡದೆ ನಿಲಯದಿಂದ ಹೊರ ಕಳುಹಿಸಲಾಗಿದೆ. ಕೆಲ ನಿಲಯಗಳಲ್ಲಿ ಕೇವಲ ಟಿ, ಬಿಸ್ಕತ್‌ ಮಾತ್ರ ನೀಡಲಾಗಿದೆ. ನಿಲಯಗಳಿಂದ ತಮ್ಮ
ತಮ್ಮ ಊರುಗಳಿಗೆ ತೆರಳಲು ಬ್ಯಾಗ್‌ಗಳೊಂದಿಗೆ ನಿಲ್ದಾಣಗಳಿಗೆ ಬಂದ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್‌ಗಳು ಸಹ ಸಿಗದೆ ಎರಡೂ¾ರು ಗಂಟೆಯಿಂದ ಬಸ್‌ ಗಾಗಿ ಕಾಯುತ್ತಿದ್ದೇವೆ ಎಂದು ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ತೊಂದರೆ ಎದುರಿಸುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಡಿಸಿ ಪವನ್‌ಕುಮಾರ್‌ ಮಾಲಪಾಟಿಯವರು ಯಾವ ವಿದ್ಯಾರ್ಥಿಗಳನ್ನು ಬಲವಂತವಾಗಿ ಕಳುಹಿಸದೆ ಅಲ್ಲೆ ಇರುವುದಾಗಿ ತಿಳಿಸಿದ ವಿದ್ಯಾರ್ಥಿಗಳಿಗೆ ಉಳಿಸಿಕೊಂಡು ವ್ಯವಸ್ಥೆ ಕಲ್ಪಿಸುವಂತೆ
ಭಾನುವಾರ ಆದೇಶ ಹೊರಡಿಸಿದ್ದಾರೆ.

ಬಸ್‌ ನಿಲ್ದಾಣಗಳಲ್ಲಿ ವಿದ್ಯಾರ್ಥಿಗಳು ಪರದಾಟದ ಬಗ್ಗೆ ಮಾಹಿತಿ ತಿಳಿದು ನಿಲ್ದಾಣಕ್ಕೆ ಆಗಮಿಸಿದ ಶಾಸಕ ಜಿ.ಸೋಮಶೇಖರ ರೆಡ್ಡಿ, ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಆಲಿಸಿದರು. ಸಾರಿಗೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮಕ್ಕಳ ಸಮಸ್ಯೆ ನೋಡಲು ಖುದ್ದು ನಿಲ್ದಾಣಕ್ಕೆ ಭೇಟಿ ನೀಡಿರುವೆ. ಮಕ್ಕಳಿಗೆ ಸಮಸ್ಯೆಯಾಗಲು ಬಿಡಲ್ಲ. ಪ್ರತಿ ಮಕ್ಕಳನ್ನು ಮನೆಗೆ ಕಳುಹಿಸುವ ಜವಾಬ್ದಾರಿ ನನ್ನದಾಗಿದೆ. ಜಿಲ್ಲಾಡಳಿತದ ಆದೇಶದಿಂದ ಈ ಸಮಸ್ಯೆಯಾಗಿದೆ. ಮುಂಜಾಗ್ರತೆ ಕೈಗೊಳ್ಳಬೇಕಿತ್ತು ಎಂದು ಬಸ್‌ ವ್ಯವಸ್ಥೆ ಮಾಡಿ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ತಮ್ಮ ತಮ್ಮ ಊರುಳಿಗೆ ಸುರಕ್ಷಿತವಾಗಿ ಕಳುಹಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಜಿ.ಸೋಮಶೇಖರ ರೆಡ್ಡಿ, ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್‌ ಹೆಚ್ಚಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅನಿವಾರ್ಯವಾಗಿ ವಸತಿ ನಿಲಯ ಬಂದ್‌ ಮಾಡೋದು ಸೇರಿ ಒಂದಷ್ಟು ನಿರ್ಬಂಧ ಹೇರಿದೆ. ಎಲ್ಲ ಮಕ್ಕಳನ್ನು ಅವರವರ ಊರುಗಳಿಗೆ ಕಳುಹಿಸುತ್ತೇನೆ. ಹೆಚ್ಚುವರಿ ಬಸ್‌ ಬಿಡಲು ಕೆಎಸ್ಸಾರ್ಟಿಸಿ ಡಿಸಿ ಜೊತೆ ಮಾತನಾಡಿದ್ದೇನೆ. ಎಲ್ಲ ಬಸ್‌ ಗಳಿಗೂ ಪಾಸ್‌ ಅನುಮತಿಸುವಂತೆ ಸೂಚನೆ ನೀಡಿದ್ದೇನೆ. ಮಕ್ಕಳಿಗೆ ಕೋವಿಡ್‌ ಟೆಸ್ಟ್‌ ಮಾಡಿಸಬೇಕಿತ್ತು. ಆದರೆ ತ್ವರಿತ ಆದೇಶದಿಂದ ಒಂದಷ್ಟು ಗೊಂದಲ ಆಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next