Advertisement

“ಹರೇಕಳ ಮೆಣಸು’ವ್ಯವಸಾಯಕ್ಕೆ ವಿದ್ಯಾರ್ಥಿಗಳ ಸಾಥ್‌

10:07 AM Dec 25, 2019 | mahesh |

 ”ಪರಿಯಾಳ ಮುಂಚಿ’
200 ಎಕ್ರೆ ಪ್ರದೇಶದಲ್ಲಿಬೆಳೆ
ದೇಹಕ್ಕೆ ತಂಪು ನೀಡುವ ಮೆಣಸು

Advertisement

ಹರೇಕಳ: ಖಾರ ಜಾಸ್ತಿ. ಅರೆದ ಮೇಲೆ ಮಸಾಲೆ ಕೂಡ ಜಾಸ್ತಿ. ಇತರ ಮೆಣಸಿನ ಹಾಗೆ ಉಷ್ಣತೆ ಇಲ್ಲ ದೇಹಕ್ಕೆ ತಂಪು ನೀಡುವ ಈ ಮೆಣಸು ಉಪ್ಪಿನಕಾಯಿ ತಯಾರಿಗೆ ಅತ್ಯಧಿಕ ಬೇಡಿಕೆ. 50 ವರ್ಷಗಳ ಹಿಂದೆ 200 ಎಕ್ರೆ ಪ್ರದೇಶದಲ್ಲಿ ಬೆಳೆಸಲಾಗುತ್ತಿದ್ದ ಇಂತಹ ಮೆಣಸು, ಪ್ರಸ್ತುತ ಕೇವಲ ಎರಡು ಮೂರು ಎಕ್ರೆ ಪ್ರದೇಶಕ್ಕೆ ಸೀಮಿತಗೊಂಡು ಬೆರಳೆಣಿಕೆಯ ರೈತರು ಈ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ.

ಮಂಗಳೂರು ತಾಲೂಕಿನ ಹರೇಕಳ ಎಂಬ ಪ್ರದೇಶದಲ್ಲಿ ಬೆಳೆಯಲಾಗುವ ಈ ಮೆಣಸು “ಹರೇಕಳ ಮೆಣಸು’ ಎಂದೇ ಖ್ಯಾತಿ. ತುಳುವಿನಲ್ಲಿ “ಪರಿಯಾಳ ಮುಂಚಿ’ ಎಂದು ಫೇಮಸ್‌. ಈಗ ಈ ಮೆಣಸನ್ನು ಬೆಳೆಯಲು ಮಂಗಳೂರು ರಥಬೀದಿಯ ಡಾ| ದಯಾನಂದ ಪೈ ಮತ್ತು ಸತೀಶ್‌ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಹರೇಕಳ ಅನುದಾನಿತ ಶ್ರೀ ರಾಮಕೃಷ್ಣ ಶಾಲೆಯ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ.

ಮಂಗಳೂರು ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಮುಖ್ಯಸ್ಥ ಡಾ| ನವೀನ್‌ ಎನ್‌. ಕೊಣಾಜೆ ಅವರ ನೇತೃತ್ವದಲ್ಲಿ ಕಾಲೇಜಿನ ಹಸುರು ಸೇನೆಯ ವಿದ್ಯಾರ್ಥಿಗಳು ಮತ್ತು ಹರೇಕಳದ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ತ್ಯಾಗಂ ಹರೇಕಳ ಅವರ ನೇತೃತ್ವದಲ್ಲಿ ಸುಮಾರು 50ರಷ್ಟು ವಿದ್ಯಾರ್ಥಿಗಳು ಪ್ರಗತಿಪರ ಕೃಷಿಕ ಶೇಖರ್‌ ಗಟ್ಟಿ ಅವರರಿಂದ ಗೇಣಿ ಪಡೆದ ಹರೇಕಳದ ಕುತ್ತಿಮೊಗರು ಗದ್ದೆಯಲ್ಲಿ ಮೆಣಸಿನ ಬೆಳೆ ಬೆಳೆಯುತ್ತಿದ್ದಾರೆ.

ಊರಲ್ಲಿದ್ದ ಅವಿಭಕ್ತ ಕುಟುಂಬ ವ್ಯವಸ್ಥೆ ದೂರವಾದಂತೆ ಕೃಷಿಭೂಮಿ ಹಂಚಿ ಹೋಯಿತು. ಶಿಕ್ಷಿತ ಯುವಕರು ದುಡಿಮೆಗಾಗಿ ನಗರ ಸೇರಿದರು. ಕೂಲಿಯಾಳುಗಳ ಸಮಸ್ಯೆ ಎದುರಾಯಿತು. ಅಧಿಕ ಇಳುವರಿ ಪಡೆಯುವ ಉದ್ದೇಶ ದಿಂದ ರಾಸಾಯನಿಕದ ಬಳಕೆ ಹೆಚ್ಚಾಯಿತು. ಗಿಡಗಳಿಗೆ ರೋಗಬಾಧೆ ಅಧಿಕವಾಗ ತೊಡಗಿತು. ಮನೆಯಲ್ಲಿ ಉಪ್ಪಿನಕಾಯಿ ಮಾಡುವವರ ಸಂಖ್ಯೆಯೂ ಕ್ಷೀಣಿ ಸಿತು. ಹೀಗಾಗಿ ಮೆಣಸಿನ ಬೇಡಿಕೆ ಇಳಿಮುಖವಾಗತೊಡಗಿತು. ಮೆಣಸಿನ ಬದಲು ಕಬ್ಬು, ಅಡಕೆ, ಭತ್ತ ಬೆಳೆದ ಪರಿಣಾಮ ಮೆಣಸು ಅಳಿವಿನಂಚಿಗೆ ತಲುಪುವಂತಾಯಿತು.

Advertisement

ಪಠ್ಯದಲ್ಲಿ ಉಲ್ಲೇಖವಿತ್ತು
ಹರೇಕಳ ಮೆಣಸು ಒಂದು ಕಾಲದಲ್ಲಿ ಎಷ್ಟು ಖ್ಯಾತವಾಗಿತ್ತು ಎಂದರೆ 80ರ ದಶಕದ ಮೂರನೇ ತರಗತಿ ಪಠ್ಯದಲ್ಲಿ ಹರೇಕಳ ಮೆಣಸಿನ ಬಗ್ಗೆ ಉಲ್ಲೇಖದ ಬಗ್ಗೆ ಸ್ಥಳೀಯರು ನೆನೆಪಿಸಿಕೊಳ್ಳುತ್ತಾರೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪ್ರಾರಂಭವಾದ ಸಂದರ್ಭ ಹರೇಕಳ ಪ್ರದೇಶದ ಬಹುತೇಕ ಗದ್ದೆಗಳಲ್ಲಿ ಕಬ್ಬು ಬೆಳೆಯನ್ನು ಬೆಳೆಸಲಾದ ಕಾರಣ ಮೆಣಸು ಕೃಷಿಗೆ ಹೊಡೆತ ಬಿದ್ದಿರಬಹುದು ಎನ್ನುತ್ತಾರೆ ಸ್ಥಳೀಯರು.

ಮೂರು ವರ್ಷವಾದರೂ ಉಪ್ಪಿನಕಾಯಿ ಹಾಳಾಗುವುದಿಲ್ಲ
ಉಪ್ಪಿನಕಾಯಿಗೆ ಸಾಮಾನ್ಯ ಮೆಣಸು ಹಾಕಿದರೆ ಅದರ ತಾಜಾತನ ಮೂರು ತಿಂಗಳಿನಿಂದ ಆರು ತಿಂಗಳು. ಆದರೆ ಹರೇಕಳ ಮೆಣಸು ಹಾಕಿ ಉಪ್ಪಿನಕಾಯಿ ತಯಾರಿಸಿದರೆ ಸುಮಾರು ಮೂರು ವರ್ಷವಿಟ್ಟರು ಕೆಡುವುದಿಲ್ಲ . ಈ ನಿಟ್ಟಿನಲ್ಲಿ ಮುಂಬಯಿ ಸಹಿತ ಹೊರ ರಾಜ್ಯಗಳಿಂದ ಹರೇಕಳ ಮೆಣಸಿಗೆ ಬೇಡಿಕೆ ಇದೆ. ಆದರೆ ಬೇಡಿಕೆಗೆ ತಕ್ಕಂತೆ ಮೆಣಸು ಬೆಳೆಯುವವರ ಸಂಖ್ಯೆ ಕಡಿಮೆಯಾಗಿದ್ದು, ಇದಕ್ಕೆ ಮುಖ್ಯ ಕಾರಣ ಕೃಷಿ ಕೂಲಿ ಕಾರ್ಮಿಕರ ಕೊರತೆ ಮತ್ತು ಸರಕಾರ ಬೆಂಬಲ ಬೆಲೆ ನೀಡದೇ ಇರುವುದು.

ಹಿಂದೆ ಈ ಪ್ರದೇಶದಲ್ಲಿ ಮುದಲೆಮಾರ್‌ ರಾಮಣ್ಣ ಶೆಟ್ಟಿ, ಸಂಪಿಗೆದಡಿ ಕೋಟಿಯಣ್ಣ ಆಳ್ವ, ಮತ್ತು ಸಂಪಿಗೆದಡಿ ಮಜಲು ನಾರಾಯಣ ಶೆಟ್ಟಿ ಅವರು ದೊಡ್ಡ ಮಟ್ಟದಲ್ಲಿ ಹರೇಕಳ ಮೆಣಸು ಬೆಳೆದರೆ ಸಣ್ಣ ರೈತರು ಈ ಸಂದರ್ಭದಲ್ಲಿ ಮೆಣಸಿನ ಬೆಳೆ ಬೆಳೆದು ನೇತ್ರಾವತಿ ನದಿಯ ಮೂಲಕ ಮಂಗಳೂರಿನ ಬಂದರಿಗೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು.

ಒಂದು ಹಂತದಲ್ಲಿ ಮೆಣಸಿನ ಬೆಳೆ ಅಳಿವಿನಂಚಿಗೆ ತಲುಪುವ ಸಂದರ್ಭ ಈ ಪಾರಂಪರಿಕ ಕೃಷಿ ಮತ್ತು ಅಪರೂಪದ ಮೆಣಸಿನ ತಳಿಯನ್ನು ಉಳಿಸುವ ನಿಟ್ಟಿನಲ್ಲಿ ಯುವ ಕೃಷಿಕರು ಕೃಷಿ ಕಾರ್ಯ ಆರಂಭಿಸಿದ್ದು ಪ್ರಸ್ತುತ ಹ‌ರೇಕಳ ಬೈತಾರ್‌ ನಿವಾಸಿ ಶೇಖರ್‌ ಗಟ್ಟಿ, ಪಾವೂರುಕಡವು ನಿವಾಸಿಗಳಾದ ಕಿಶೋರ್‌ ಸಫಲಿಗ, ಮೈಕಲ್‌, ಕುತ್ತಿಮುಗೇರ್‌ನಿವಾಸಿ ವಿಜಯ ಶೆಟ್ಟಿ, ಉಳಿಯ ನಿವಾಸಿಗಳಾದ ಸಂಜಿವ ಪೂಜಾರಿ ಅಂಬ್ಲಿಮೊಗರು, ಲಿಯೋ ಡಿ’ಸೋಜಾ ಉಳಿಯ ಸಹಿತ ಹಲವರು ಹರೇಕಳ ಮೆಣಸನ್ನು ಬೆಳೆಸುತ್ತಿದ್ದಾರೆ.

ಬೆಂಬಲ ಬೆಲೆ ನೀಡುವುದು ಅಗತ್ಯ
ಕೆಲವು ವರ್ಷಗಳಿಂದ ಈ ಮೆಣಸು ಬೆಳೆಸುತ್ತಿದ್ದು ಕೃಷಿ ಕೂಲಿ ಕಾರ್ಮಿಕರ ಕೊರತೆಯಿಂದ ದೊಡ್ಡ ಮಟ್ಟದಲ್ಲಿ ಬೆಳೆಸಲು ಸಾಧ್ಯವಾಗುತ್ತಿಲ್ಲ. ಕಳೆದ ಬಾರಿ ಆರಂಭದಲ್ಲಿ ಒಂದು ಕೆ.ಜಿ. ಮೆಣಸಿಗೆ 500 ರೂ.ಬೆಲೆ ಸಿಕ್ಕಿದರೆ ಅನಂತರ ಮಾರುಕಟ್ಟೆಗೆ ಹರೇಕಳ ಮೆಣಸು ಆಕೃತಿಯ ರಾಮನಾಡು ಮೆಣಸು ಬಂದ ಬಳಿಕ ಹರೇಕಳ ಮೆಣಸಿಗೆ ಕೆ.ಜಿ.ಗೆ 250 ರೂ. ಇಳಿಕೆಯಾಯಿತು. ಸರಕಾರ ಬೆಂಬಲ ಬೆಲೆ ನೀಡಿ ಕೃಷಿಕರನ್ನು ಪ್ರೋತ್ಸಾಹಿಸಿದರೆ ಕೃಷಿಯಲ್ಲಿ ನಷ್ಟ ತಪ್ಪಿಸಬಹುದು
– ಶೇಖರ ಗಟ್ಟಿ ಬೈತಾರ್‌, ಮೆಣಸು ಬೆಳೆಗಾರ

ತಳಿ ಸಂರಕ್ಷಣೆ ಕಾರ್ಯ ಅಗತ್ಯ
ಎರಡು ವರ್ಷದಿಂದ ಹಡಿಲು ಭೂಮಿಯಲ್ಲಿ ಭತ್ತದ ಕೃಷಿಯ ಅನುಭವ ಪಡೆದ ನಮಗೆ ಈಗ ಮೆಣಸಿನ ಕೃಷಿ ಚಟುವಟಿಕೆ ಮತ್ತು ತಳಿಗಳ ಬಗ್ಗೆ ಮಾಹಿತಿ ತಿಳಿಯಿತು. ಮುಂದಿನ ತಲೆಮಾರಿಗೆ ಹರೇಕಳ ಮೆಣಸಿನ ತಳಿ ಸಂರಕ್ಷಣೆ ಕಾರ್ಯವಾಗಬೇಕಿದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಅಗತ್ಯವಿದೆ.
– ಲಕ್ಷ್ಮಣ್‌, ರಥಬೀದಿ ಸರಕಾರಿ ಪದವಿ ಕಾಲೇಜು ವಿದ್ಯಾರ್ಥಿ

-ವಸಂತ ಎನ್‌. ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next