Advertisement

ಲ್ಯಾಪ್‌ಟಾಪ್‌ ವಿತರಣೆಗೆ ವಿದ್ಯಾರ್ಥಿಗಳ ಧರಣಿ

09:20 PM Feb 12, 2020 | Lakshmi GovindaRaj |

ಕೆ.ಆರ್‌.ನಗರ: ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‌ಟಾಪ್‌ಗ್ಳನ್ನು ವಿತರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ವಿದ್ಯಾರ್ಥಿಗಳು ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಧರಣಿ ನಡೆಸಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಬುಧವಾರ ಸಮಾವೇಶಗೊಂಡು ಗರುಡಗಂಭದ ವೃತ್ತ, ವಾಣಿ ವಿಲಾಸ ರಸ್ತೆ, ಪುರಸಭಾ ವೃತ್ತದ ಮೂಲಕ ಮಿನಿ ವಿಧಾನಸೌಧದವರೆಗೆ ವಿವಿಧ ನಾಮಫ‌ಲಕಗಳನ್ನು ಹಿಡಿದು ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿದ ವಿದ್ಯಾರ್ಥಿಗಳು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಎಲ್ಲರಿಗೂ ವಿಸ್ತರಿಸಿ: ಬಳಿಕ‌ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಕೆಲ ಹೊತ್ತು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಲ್ಯಾಪ್‌ಟಾಪ್‌ಗ್ಳನ್ನು ಈಗಾಗಲೇ ವಿತರಿಸುತ್ತಿದ್ದು, ದ್ವಿತೀಯ ಮತ್ತು ತೃತೀಯ ವರ್ಷದವರಿಗೂ ಈ ಯೋಜನೆಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‌ಟಾಪ್‌ಗ್ಳನ್ನು ವಿತರಿಸುತ್ತಿದ್ದು, ಇದರಿಂದ ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದ್ದು, ಕೂಡಲೇ ಪರಿಶೀಲನೆ ನಡೆಸಿ ನಮ್ಮ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.

ವಿದ್ಯಾರ್ಥಿ ಕಿರಣ್‌ಕುಮಾರ್‌ ಮಾತನಾಡಿ, ಸರ್ಕಾರ ಬಡ ಕುಟುಂಬದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸುತ್ತಿರುವುದು ಸ್ವಾಗತಾರ್ಹ. ಆದರೆ, ಕೇವಲ ಪ್ರಥಮ ವರ್ಷದವರಿಗೆ ಮಾತ್ರ ನೀಡುತ್ತಿರುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲರಿಗೂ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

Advertisement

ಕಂಪ್ಯೂಟರ್‌ ಜ್ಞಾನ: ಆಧುನಿಕ ಯುಗದಲ್ಲಿ ಎಲ್ಲಾ ಉದ್ಯೋಗಗಳಿಗೂ ಕಂಪ್ಯೂಟರ್‌ ಜ್ಞಾನ ಅವಶ್ಯಕವಾಗಿರುವುದರಿಂದ ವ್ಯಾಸಂಗದ ಸಮಯದಲ್ಲಿಯೇ ಇದರ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಲಿದೆ. ಮೂರು ವರ್ಷಗಳಲ್ಲಿಯೂ ಓದುವ ಹೆಚ್ಚಿನ ವಿದ್ಯಾರ್ಥಿಗಳು ಬಡವರಾಗಿದ್ದು, ಅವರಿಗೆ ಲ್ಯಾಪ್‌ಟಾಪ್‌ಗ್ಳನ್ನು ನೀಡಿದರೆ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.  ನಂತರ ಶಿರಸ್ತೇದಾರ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಅನು, ಕವನ, ಅನುಷ, ಪ್ರೀತಿ ಅನಿತಾ, ಸುಮಾ, ಅರ್ಪಿತಾ, ಸಾದಿಯಾ, ಪೂಜಾ, ಚಾಂದಿನಿ, ರೇಷ್ಮಾ, ಆಶ್ವಿ‌ನಿ, ಅಂಬಿಕಾ, ಚಂದ್ರಿಕಾ, ರಾಜೇಶ್‌, ಸಚಿನ್‌, ಅಭಿಷೇಕ್‌, ಕುಮಾರ, ರಂಗನಾಥ್‌, ಹರ್ಷ, ಸಂತೋಷ, ಮಂಜುನಾಥ್‌, ನಾಗೇಂದ್ರ, ಹರೀಶ, ಸಾಗರ್‌, ಚಂದು, ನೋದ, ರವಿ, ಶಂಕರ, ಪಾಂಡುರಂಗ, ಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next