ಶಿರಸಿ : ಅರಣ್ಯಾಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಅರಣ್ಯ ಪದವೀಧರರಿಗೆ ಈ ಹಿಂದೆ ನೀಡಿದ್ದ ಶೇ. 75ರಷ್ಟು ಮೀಸಲಾತಿಯನ್ನು ಕಡಿತಗೊಳಿಸಿ ಶೇ. 50ಕ್ಕೆ ಇಳಿಸಿರುವುದನ್ನು ಪ್ರಶ್ನಿಸಿ ಇಲ್ಲಿನ ಅರಣ್ಯ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ವಿದ್ಯಾರ್ಥಿಗಳ ಅಹವಾಲು ಆಲಿಸಿದರು.
ಶುಕ್ರವಾರ ನಗರದ ಸಹಾಯಕ ಆಯುಕ್ತರ ಕಚೇರಿ ಎದುರು ಸರಕಾರದ ನೂತನ ಆದೇಶದ ವಿರುದ್ಧ ಪ್ರತಿಭಟನೆ ನಡೆಸಿ, ಪೂರ್ಣ ಪ್ರಮಾಣದಲ್ಲಿ ಅವಕಾಶಕ್ಕೆ ಆಗ್ರಹಿಸುವ ವೇಳೆ ಭೇಟಿ ನೀಡಿ ಸಂವಾದ ನಡೆಸಿದರು.
ಅರಣ್ಯ ಶಾಸ್ತ್ರ ಪದವಿಯನ್ನು ಅರಣ್ಯ ಇಲಾಖೆಯ ವಿವಿಧ ಹುದ್ದೆಗಳಿಗೆ ಕನಿಷ್ಟ ವಿದ್ಯಾರ್ಹತೆಯನ್ನು ಕಡ್ಡಾಯಗೊಳಿಸುವಂತಾಗಬೇಕು. ಕರ್ನಾಟಕದಲ್ಲಿ ಕೃಷಿ ವಿಜ್ಞಾನ , ತೋಟಗಾರಿಕೆ, ಪಶು ವೈದ್ಯಕೀಯ ಹಾಗೂ ರೇಷ್ಮೆ ಕೃಷಿ ಪದವಿಗಳನ್ನು ಸಂಬಂಧಿಸಿದ ಮಾತೃ ಇಲಾಖೆಯಲ್ಲಿ ಕನಿಷ್ಟ ವಿದ್ಯಾರ್ಹತೆಯನ್ನಾಗಿ ಪರಿಗಣಿಸಲಾಗಿದೆ. ಎಲ್ಲಾ ಕೃಷಿ ವಿಜ್ಞಾನ ಪದವಿಗಳಂತೆ ಅರಣ್ಯ ಶಾಸ್ತ್ರವೂ ಸಹ ಪ್ರತ್ಯೇಕತೆಯನ್ನು ಹೊಂದಿದ್ದರೂ ಅರಣ್ಯ ಪದವಿಯನ್ನು ಮಾತ್ರ ತನ್ನ ಮಾತೃ ಇಲಾಖೆಯಲ್ಲಿ ಕನಿಷ್ಟ ವಿದ್ಯಾರ್ಹತೆಯನ್ನಾಗಿ ಪರಿಗಣಿಸಿಲ್ಲ ಎಂದು ಅಸಮಧಾನಿಸಿದರು.
ಇದನ್ನೂ ಓದಿ : ಇಲ್ಲ ಸಲ್ಲದ ಸುದ್ದಿ ಹರಡಿ ಜನರನ್ನು ಎತ್ತಿ ಕಟ್ಟಬೇಡಿ; ಕೆ.ಎಂ. ಶಿವಲಿಂಗೇಗೌಡ
ಅರಣ್ಯ ಕಾಲೇಜು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಹೇಮಂತ್ ಎಚ್.ಎಸ್, ಕಾರ್ಯದರ್ಶಿ ಅವಿನಾಶ ಜಿ. ಹಾಗೂ ಸದಸ್ಯ ವಿದ್ಯಾರ್ಥಿಗಳು ಸಮಸ್ಯೆ ತೋಡಿಕೊಂಡರು.
ಇದಕ್ಕೆ ಸ್ಪಂದಿಸಿದ ಭೀಮಣ್ಣ, ಕಾಂಗ್ರೆಸ್ ಹಿರಿಯ ನಾಯಕರ ಗಮನಕ್ಕೆ ತಂದು ಸರಕಾರದ ಮೂಲಕ ಸಮಸ್ಯೆ ನಿವಾರಿಸಲು ಪ್ರಯತ್ನ ಮಾಡುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ ಕೆ ಭಾಗವತ್, ಬ್ಲಾಕ್ ಅಧ್ಯಕ್ಷ ಜಗದೀಶ್ ಗೌಡ, ಮುಖಂಡರಾದ ಗಣೇಶ ದಾವಣಗೆರೆ, ಜಿ ಎನ್. ಹೆಗಡೆ ಮುರೇಗಾರ್, ಪ್ರದೀಪ್ ಶೆಟ್ಟಿ, ಈರಪ್ಪ ನಾಯ್ಕ್, ಜ್ಯೋತಿ ಪಾಟೀಲ, ಮಹಾದೇವ ಚಲವಾದಿ, ಪ್ರಸನ್ನ ಶೆಟ್ಟಿ ಉಪಸ್ಥಿತರಿದ್ದರು.