ವಿಜಯಪುರ: ರಾಜ್ಯ ಸರ್ಕಾರ ಪ್ರಸಕ್ತ ವರ್ಷದ ಎಸ್ಎಸ್ ಎಲ್ ಸಿ ಬಹು ಆಯ್ಕೆಯ ಉತ್ತರ ಮಾದರಿ ಪರೀಕ್ಷೆ ನಡೆಸಿದರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಹೀಗಾದಲ್ಲಿ ಪರೀಕ್ಷೆ ಬಹಿಷ್ಕರಿಸುವ ಎಚ್ಚರಿಕೆ ನೀಡಿ ವಿಜಯಪುರದ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಶನಿವಾರ ಶಿಕ್ಷಣ ಸಚಿವ ಸುರೇಶ ಕುಮಾರ್ ಅವರಿಗೆ ಸಾಮೂಹಿಕವಾಗಿ ಲಿಖಿತ ಪತ್ರ ಬರೆದು ಪ್ರತಿಭಟನೆ ನಡೆಸಿರುವ ನಗರದ ವಿಕಾಸ ಶಾಲೆ ವಿದ್ಯಾರ್ಥಿಗಳು, ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಟಿಪಲ್ ಚಾಯ್ಸ್ ಪ್ರಶ್ನೆ ಪತ್ರಿಕೆಯ ಪರೀಕ್ಷೆ ನಡೆಸಿದರೆ ಪರೀಕ್ಷೆ ಬಹಿಷ್ಕಾರಿಸುವುದಾಗಿ ಎಚ್ಚರಿಸಿರುವ ವಿದ್ಯಾರ್ಥಿಗಳು, ಅವೈಜ್ಞಾನಿಕವಾದ ಇಂಥ ಮಾದರಿ ಪರೀಕ್ಷೆಯಿಂದ ಲಾಕ್ ಡೌನ್ ಸಂಕಷ್ಟದ ಸಂದರ್ಭದಲ್ಲೂ ಹಗಲು-ರಾತ್ರಿ ಎನ್ನದೇ ಓದಿದ್ದೇವೆ. ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಸರ್ವ ಸಿದ್ಧತೆ ಮಾಡಿಕೊಂಡಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ. ಹೀಗಾಗಿ ಬಹು ಅಯ್ಕೆ ಪ್ರಶ್ನೆಯ ಪರೀಕ್ಷೆ ನಡೆಸದಂತೆ ಶಿಕ್ಷಣ ಸಚಿವ ಸುರೇಶ ಕುಮಾರ್ ಅವರಿಗೆ ಬರೆದ ಪತ್ರಗಳಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ
ಶಿಕ್ಷಣ ಸಚಿವರು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವ ಬಹು ಅಯ್ಕೆಯ ಪ್ರಶ್ನೆಯ ಪರೀಕ್ಷೆ ನಡೆಸುವ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ನೋವಾಗಿದೆ. ಬಹು ಆಯ್ಕೆಯ ಹಾಗೂ ಗ್ರೇಡ್ ಫಲಿತಾಂಶ ಕೊಡುವ ಇಂಥ ಪರೀಕ್ಷೆ ನಮಗೆ ಬೇಡ. ಬದಲಾಗಿ ವಿಸ್ತ್ರತ ಬರವಣಿಗೆ ರೂಪದಲ್ಲೆ 500 ಅಂಕಗಳ ಪರೀಕ್ಷೆ ನಡೆಸಿ ಎಂದು ಅಗ್ರಹಿಸಿದ್ದಾರೆ.
ಇದರ ಹೊರತಾಗಿ ಮಲ್ಟಿಪಲ್ ಚಾಯ್ಸ್ ಪರೀಕ್ಷೆ ನಡೆಸಿದರೆ ಪರೀಕ್ಷೆ ನಡೆಸುವುದಕ್ಕೆ ಸರ್ಕಾರ ಅಂಟಿಕೊಂಡರೆ ಪರೀಕ್ಷೆ ಬರೆಯದೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.
ಗ್ರೇಡ್ ಅಂಕದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ. ಭವಿಷ್ಯದ ಶೈಕ್ಷಣಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಾಗಲಿದೆ. ಹೀಗಾಗಿ ಶಿಕ್ಷಣ ಸಚಿವರು ಹಾಗೂ ಸರಕಾರ ಪರೀಕ್ಷೆ ನಡೆಸುವುದಕ್ಕೆ ಪ್ರಕಟಿಸಿರುವ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ.