ಚಿತ್ತಾಪುರ: ತಾಲೂಕಿನ ಎಲ್ಲ ಗ್ರಾಮಗಳಿಗೆ ಬಸ್ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ಕಾರ್ಯಕರ್ತರು ಪಟ್ಟಣದ ಬಸ್ ನಿಲ್ದಾಣದ ಎದರು ಪ್ರತಿಭಟನೆ ನಡೆಸಿದರು.
ಎಐಡಿಎಸ್‌ಒ ತಾಲೂಕು ಸಂಚಾಲಕ ತುಳಜಾರಾಮ ಎನ್. ಕೆ ಮಾತನಾಡಿ, ಶಾಲೆ-ಕಾಲೇಜುಗಳು ಆರಂಭವಾಗಿವೆ. ತಾಲೂಕಿನ ಹಲವು ಗ್ರಾಮಗಳ ವಿದ್ಯಾರ್ಥಿಗಳು ಚಿತ್ತಾಪುರಕ್ಕೆ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಾರೆ. ಲಾಕ್‌ಡೌನ್ ಸಮಯದಲ್ಲಿ ನಿಲ್ಲಿಸಿದ ಬಸ್ ಸಂಚಾರ ಇನ್ನೂ ಆರಂಭಿಸಿಲ್ಲ. ರಾವೂರ, ಸಂಕನೂರ್, ದಂಡಗುಂಡ, ಕರದಳ್ಳಿ, ಚಾಮನೂರ, ಇಂಗಳಗಿ, ದಿಗ್ಗಾಂವ, ಅಳ್ಳೊಳ್ಳಿ, ರಾಮತೀರ್ಥ, ಯಾಗಾಪುರ, ಡೋಣಗಾಂವ ಸೇರಿದಂತೆ ಇನ್ನಿತರ ಗ್ರಾಮಗಳಿಂದ ಆಗಮಿಸಿಸುವ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ಎಲ್ಲ ಗ್ರಾಮಗಳಿಗೆ ಬಸ್ ಸಂಚಾರ ಆರಂಭಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ :ಮತ್ತೆ ಆರಂಭಗೊಂಡ ಬಾದಾಮಿ ಶುಗರ್ಸ್
ಬಸ್ ಘಟಕ ವ್ಯವಸ್ಥಾಪಕ ಫಾರೂಕ್ ಹುಸೇನ್ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಲಾಕ್‌ಡೌನ್‌ನಿಂದಾಗಿ ಬಸ್ ಸಂಚಾರ ಕಡಿತಗೊಳಿಸಲಾಗಿತ್ತು. ಇದೀಗ ಯಥಾ ಸ್ಥಿತಿ ಬಸ್ ಸಂಚಾರ ಆರಂಭಿಸಲಾಗಿದೆ. ಇನ್ನು ಕೆಲವು ಗ್ರಾಮಗಳಿಗೆ ಬಸ್ ಸಂಚಾರ ಇಲ್ಲ. ಹೀಗಾಗಿ ಮೊದಲಿನಂತೆ ಎಲ್ಲ ಗ್ರಾಮಗಳಿಗೆ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ತಾಲೂಕು ಸಹ ಸಂಚಾಲಕ ವೆಂಕಟೇಶ ದೇವದುರ್ಗ, ವಿದ್ಯಾರ್ಥಿಗಳಾದ ರಾಹುಲ್ ಚವ್ಹಾಣ, ನಾಗೇಶ ಗೋಳಿ, ವಿಶಾಲ್, ರಮೇಶ, ವಸಂತಕುಮಾರ, ಚಂದ್ರಶೇಖರ ಚಾಮನೂರ್, ಸಾಬಣ್ಣ, ದೇವು, ಸುರೇಶ ಇತರರು ಇದ್ದರು.