Advertisement
ಪ್ರೌಢಶಾಲೆಯ ಆಡಳಿತ ಮಂಡಳಿಗೆ ನೀಡಿದ್ದ ವೇತನಾನುದಾನವನ್ನು ಸರ್ಕಾರ ಹಿಂಪಡೆದಿರುವುದಲ್ಲದೇ, ಬೋಧಕ-ಬೋಧಕೇತರ ಸಿಬ್ಬಂದಿಯನ್ನು ಬೇರೆಡೆಗೆ ನಿಯುಕ್ತಿಗೊಳಿಸಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ಅವರ ಪ್ರತಿಭಟನೆಗೆ ಜೋಡಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರೂ ಸಾಥ್ ನೀಡಿದ್ದರಿಂದ ಪ್ರತಿಭಟನೆ ಕಾವು ಏರುತ್ತಲೇ ಸಾಗಿತು. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದರೂ ವಿದ್ಯಾರ್ಥಿಗಳು ತಮಗಾಗುತ್ತಿರುವ ಸಮಸ್ಯೆಗಳನ್ನು ಅವರಲ್ಲಿ ತೋಡಿಕೊಂಡರು.
Related Articles
Advertisement
ಅಪರ ಆಯುಕ್ತರಿಂದ ಮನವೊಲಿಕೆ: ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇ| ಸಿದ್ಧಲಿಂಗಯ್ಯ ಹಿರೇಮಠ ಆಗಮಿಸಿ ಮಾತನಾಡಿ, ವೀರರಾಣಿ ಕಿತ್ತೂರು ಚನ್ನಮ್ಮ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯಡಿ ಕಾರ್ಯ ನಿರ್ವಹಿಸುತ್ತಿರುವ ಪ್ರೌಢಶಾಲೆಯನ್ನು ಸರ್ಕಾರದ ಆದೇಶದನ್ವಯ 2006ರಲ್ಲಿ ಕೆಲ ಕಟ್ಟಳೆಗಳೊಂದಿಗೆ ವೇತನಾನುದಾನಕ್ಕೆ ಒಳಪಡಿಸಲಾಗಿತ್ತು. ಆದರೆ ಆಡಳಿತ ಮಂಡಳಿಯು ಸರ್ಕಾರದ ನಿಭಂದನೆಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ 2020ರ ಆ. 8ರ ಆದೇಶದನ್ವಯ ವೇತನಾನುದಾನ ಹಿಂಪಡೆಯಲಾಗಿದೆಯೇ ವಿನಃ ಶಾಲೆಯನ್ನು ಮುಚ್ಚುತ್ತಿಲ್ಲ ಎಂದು ಹೇಳಿದರು. ಅಲ್ಲದೇ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಯನ್ನು ಅಗತ್ಯವಿರುವ ಅನುದಾನಿತ ಸಂಸ್ಥೆಗಳಿಗೆ ನಿಯಮಾನುಸಾರ ಸ್ಥಳ ನಿಯುಕ್ತಿಗೊಳಿಸಲಾಗಿದೆ. ವಿದ್ಯಾರ್ಥಿಗಳು ಧೃತಿಗೆಡುವುದು ಬೇಡ. ಎಂದಿನಂತೆ ವಿದ್ಯಾರ್ಜನೆಗೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿ, ಹೋರಾಟ ಹಿಂಪಡೆಯುವಂತೆ ಪ್ರತಿಭಟನಾ ನಿರತರ ಮನವೊಲಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಗ್ರಾಮದ ಪ್ರಮುಖರಾದ ಯಲ್ಲನಗೌಡ ಪಾಟೀಲ, ಅಶೋಕ ಉಣಕಲ್, ಅಜ್ಜಪ್ಪ ಗೌರಿ, ಬಸಪ್ಪ ಮೂಶೆಣ್ಣವರ, ಉಮೇಶ ಗೌರಿ, ಜಮನಿಂಗಪ್ಪ ಅಂಗಡಿ, ಮಾರುತಿ ಅಂಗಡಿ, ಪರಮೇಶ್ವರ ಬ್ಯಾಹಟ್ಟಿ, ಮಾರುತಿ ಕೋಳಿ ಮೊದಲಾದವರು ಪಾಲ್ಗೊಂಡಿದ್ದರು.