ಹುಬ್ಬಳ್ಳಿ: ಲಾಕ್‌ಡೌನ್ ಘೋಷಣೆ ನಂತರ ತಮ್ಮ -ತಮ್ಮ ರಾಜ್ಯಕ್ಕೆ ತೆರಳದೆ ನಗರದಲ್ಲಿ ಉಳಿದುಕೊಂಡಿದ್ದ ಇಲ್ಲಿನ ವಿವಿಧ ಆಯುರ್ವೇದ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ 58 ವಿದ್ಯಾರ್ಥಿಗಳನ್ನು ವಾಯವ್ಯ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಕಳುಹಿಸಿಕೊಡಲಾಯಿತು.
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರ ಕೋರಿಕೆ ಮೇರೆಗೆ ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರ ನಿರ್ದೇಶನದಂತೆ ಸದರಿ ವಿದ್ಯಾರ್ಥಿಗಳನ್ನು ಹುಬ್ಬಳ್ಳಿ ವಿಭಾಗದಿಂದ ಮೂರು ರಾಜಹಂಸ ಬಸ್‌ಗಳ ಮೂಲಕ ಕಳುಹಿಸಿಕೊಡಲಾಯಿತು.
ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಸುಮಾರು 3,000 ಕಿ.ಮೀ. ಕ್ರಮಿಸಬೇಕಾಗಿದ್ದು, ಲಾಕ್‌ಡೌನ್ ಅವಧಿಯಿರುವುದರಿಂದ ಮಾರ್ಗ ಮಧ್ಯದಲ್ಲಿ ಯಾವುದೇ ತೊಂದರೆ ಉದ್ಭವಿಸದಂತೆ ಮುಂಜಾಗೃತಾ ಕ್ರಮವಾಗಿ ಮೂರು ಹೊಚ್ಚ ಹೊಸ ರಾಜಹಂಸ ಬಸ್‌ಗಳನ್ನು ಆಯ್ಕೆ ಮಾಡಲಾಗಿದೆ. ಎಲ್ಲಾ ಬಸ್‌ಗಳಿಗೆ ಹೆಚ್ಚುವರಿ ಟೈರ್, ಹೆಡ್‌ಲೈಟ್ ಅಸೆಂಬ್ಲಿ ಮತ್ತಿತರ ಟೂಲ್ಸ್ ಗಳನ್ನು ಒದಗಿಸಲಾಗಿದೆ. ಪ್ರತಿ ಬಸ್ಸಿನ ಹೊರಭಾಗ ಮತ್ತು ಒಳಭಾಗವನ್ನು ಸಂಪೂರ್ಣ ಡೆಟಾಲ್ ಮತ್ತು ಫಿನಾಯಿಲ್ ಮಿಶ್ರಿತ ದ್ರಾವಣದಿಂದ ಸ್ವಚ್ಛಗೊಳಿಸಲಾಗಿದೆ.
ಬಾಗಿಲು, ಕಿಟಕಿ, ಸೀಟ್‌ಗಳನ್ನು ಮತ್ತು ಹ್ಯಾಂಡ್‌ರೇಲ್‌ಗಳನ್ನು ಸ್ಯಾನಿಟೈಸರ್‌ನಿಂದ ಶುಚಿಗೊಳಿಸಲಾಗಿದೆ. ತಾಂತ್ರಿಕವಾಗಿ ವಾಹನಗಳ ಸುರಕ್ಷತೆ ಪರಿಶೀಲಿಸಲಾಗಿದೆ. ಚಿತ್ರದುರ್ಗ- ದಾವಣಗೆರೆ, ಬಾಗಲಕೋಟೆ ಹಾಗೂ ಹಾವೇರಿಯಿಂದ ಹೊರಟ ಬಸ್‌ಗಳು ಧಾರವಾಡದಲ್ಲಿನ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಬೆಳಗಾವಿಯಿಂದ ಮೂರೂ ಬಸ್‌ಗಳು ಒಟ್ಟಿಗೆ ಪ್ರಯಾಣ ಮುಂದುವರೆಸಿದವು. ಸದರಿ ಬಸ್‌ಗಳ ಮೇಲ್ವಿಚಾರಣೆಗಾಗಿ ಇಬ್ಬರು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
58 ವಿದ್ಯಾರ್ಥಿಗಳ ಪೈಕಿ ದಾವಣಗೆರೆಯ ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು-7, ಚಿತ್ರದುರ್ಗದ ಅಮೃತ ಆಯುರ್ವೇದಿಕ್ ಮೆಡಿಕಲ್ ಕಾಲೇಜು13, ಹಾವೇರಿಯ ಸಿಂದಗಿ ಶಾಂತವೀರ ಆಯುರ್ವೇದಿಕ್ ಮೆಡಿಕಲ್ ಕಾಲೇಜು 12, ಧಾರವಾಡದ ಸಿಬಿ ಗುತ್ತಲ ಆಯುರ್ವೇದಿಕ್ ಮೆಡಿಕಲ್ ಕಾಲೇಜು 12, ಬಾಗಲಕೋಟೆಯ ಬಿವಿವಿಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜನ 12 ವಿದ್ಯಾರ್ಥಿಗಳು ವೈದ್ಯಕೀಯ ಅಧ್ಯಯನ ಮಾಡುತ್ತಿದ್ದರು.