ಹುಬ್ಬಳ್ಳಿ: ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ಸಾಧ್ಯವಾಗದ ಕಾರಣ ಮುಂದಿನ ಸೆಮಿಸ್ಟರ್‌ಗೆ ಅವಕಾಶ ನೀಡಲು ಕಾನೂನು ವಿಶ್ವವಿದ್ಯಾಲಯ ಅನುಸರಿಸಿದ ನಿಯಮಗಳು ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಸೂಕ್ತವಾಗಿಲ್ಲ ಎಂದು ಕಾನೂನು ಪದವಿ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಿಂದಿನ ಸೆಮಿಸ್ಟರ್‌ನ ಫಲಿತಾಂಶದ ಮೇಲೆ ಮುಂದಿನ ಸೆಮಿಸ್ಟರ್‌ಗೆ ಉತ್ತೀರ್ಣ ಹಾಗೂ ಅನುತ್ತೀರ್ಣ ಮಾಡಲಾಗಿದೆ. ಇದು ಬಹಳ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಆರೋಗ್ಯ ಹಲವು ಕಾರಣಗಳಿಂದ ಹಿಂದಿನ ಸೆಮಿಸ್ಟರ್ ಪರೀಕ್ಷೆಯನ್ನು ಉತ್ತಮವಾಗಿ ಮಾಡಿರಲಿಕ್ಕಿಲ್ಲ. ಹೀಗಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗಲಿದೆ. ಕೂಡಲೇ ಕಾನೂನು ವಿಶ್ವವಿದ್ಯಾಲಯ ಈಗಿರುವ ನಿಯಮಗಳನ್ನು ಕೈಬಿಟ್ಟು ಎಲ್ಲಾ ಸೆಮಿಸ್ಟರ್‌ನ ಫಲಿತಾಂಶವನ್ನು ಪರಿಗಣಿಸಿ ಮುಂದಿನ ಸೆಮಿಸ್ಟರ್ ಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಸಕ್ರಿ ಕಾನೂನು ವಿದ್ಯಾರ್ಥಿನಿ ರೇಖಾ ಹೊಸೂರು ಮಾತನಾಡಿ, 1 ಹಾಗೂ 2 ಸೆಮಿಸ್ಟರ್‌ನಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದೇನೆ. ಆದರೆ ಆರೋಗ್ಯದ ಸಮಸ್ಯೆಯಿಂದ 3 ನೇ ಸೆಮಿಸ್ಟರ್‌ನ 5 ವಿಷಯಗಳಲ್ಲಿ 2 ವಿಷಯಗಳನ್ನು ಪಾಸ್ ಮಾಡಲು ಸಾಧ್ಯವಾಗಿದೆ. ಹೀಗಾಗಿ 4 ನೇ ಸೆಮಿಸ್ಟರ್‌ಗೆ ಹಿಂದಿನ ಫಲಿತಾಂಶ ಪರಿಗಣಿಸಿದ ಪರಿಣಾಮ ಅನುತ್ತೀರ್ಣಗೊಂಡಿರುವ ಫಲಿತಾಂಶ ನೀಡಿದ್ದಾರೆ. ಆದರೆ ಕೆಲ ವಿದ್ಯಾರ್ಥಿಗಳು ಮೊದಲ ಹಾಗೂ ದ್ವಿತೀಯ ಸೆಮಿಸ್ಟರ್ ನಲ್ಲಿ ಸಾಕಷ್ಟು ವಿಷಯಗಳನ್ನು ಬಾಕಿ ಉಳಿಸಿಕೊಂಡಿದ್ದು, 3ನೇ ಸೆಮಿಸ್ಟರ್‌ನಲ್ಲಿ 3 ವಿಷಯಗಳಲ್ಲಿ ಪಾಸ್ ಆಗಿರುವ ಕಾರಣ ಅವರನ್ನು ಮುಂದಿನ ಸೆಮಿಸ್ಟರ್‌ಗೆ ಅವಕಾಶ ನೀಡಲಾಗಿದೆ. ಇದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದರು.
ವಿದ್ಯಾರ್ಥಿ ಬಸವರಾಜ ತೇರದಾಳ ಮಾತನಾಡಿ, ಒಂದೇ ಸೆಮಿಸ್ಟರ್‌ನ ಫಲಿತಾಂಶವನ್ನು ಮುಂದಿನ ತೇರ್ಗಡೆಗೆ ಪರಿಗಣಿಸುವುದು ಸೂಕ್ತವಲ್ಲ. ಹಿಂದಿನ ಎಲ್ಲಾ ಸೆಮಿಸ್ಟರ್‌ನಲ್ಲಿನ ವಿದ್ಯಾರ್ಥಿನಿಯ ಸಾಧನೆಯನ್ನು ಗಮನಿಸಬೇಕಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಹಿತದೃಷ್ಟಿ ಇಟ್ಟುಕೊಂಡು ನಿಯಮಗಳನ್ನು ರೂಪಿಸಿ ಮೌಲ್ಯಮಾಪನ ಮಾಡಬೇಕು. ಈಗಾಗಲೇ ಒಂದು ವಿಷಯ ಬರೆಯಲು 500 ರೂ. ಇದೀಗ ಅನುತ್ತೀರ್ಣಗೊಂಡ ಪ್ರತಿ ವಿಷಯಕ್ಕೂ 500 ರೂ. ಶುಲ್ಕ ಭರಿಸುವುದು ಬಡ ವಿದ್ಯಾರ್ಥಿಗಳಿಗೆ ಕಷ್ಟವಾಗಲಿದೆ. ಕೂಡಲೇ ನಿಯಮಗಳನ್ನು ಬದಲಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಪೂರಕವಾಗಿ ಫಲಿತಾಂಶ ನೀಡಬೇಕೆಂದು ಒತ್ತಾಯಿಸಿದರು.